ಡಿಮಾನಿಟೈಸೇಶನ್‌ನಿಂದ ಭ್ರಷ್ಟಚಾರ, ಕಪ್ಪು ಹಣಕ್ಕೆ ಬ್ರೇಕ್; ರಾಜೀವ್ ಚಂದ್ರಶೇಖರ್!
ಡಿಮಾನಿಟೈಸೇಶನ್‌ಗೆ 4 ವರ್ಷ ತುಂಬಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಆರೋಪಗಳಿಗೆ ಇದೀಗ ಬಿಜೆಪಿ ತಿರುಗೇಟು ನೀಡಿದೆ. ಡಿಮಾನಿಟೈಸೇಶನ್‌ನಿಂದ ದೇಶದಲ್ಲಿನ ಭ್ರಷ್ಟಾಚಾರಾ ಹಾಗೂ ಕಪ್ಪು ಹಣಕ್ಕೆ ಬ್ರೇಕ್ ಬಿದ್ದಿದೆ ಎಂದಿದೆ. ಈ ಕುರಿತು ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ನವದೆಹಲಿ(ನ.08): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಡಿಮಾನಿಟೈಸೇಶನ್ ಕಾಂಗ್ರೆಸ್ ಆಳ್ವಿಯಲ್ಲಿದ್ದ ಭ್ರಷ್ಟಾಚಾರ, ಕಪ್ಪುಹಣದ ವಿರುದ್ಧ ನಡೆದ ಯಶಸ್ವಿ ದಾಳಿಯಾಗಿದೆ ಎಂದು ಬಿಜೆಪಿ ವಕ್ತಾರ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ನೋಟು ಅಪನಗದೀಕರಣಕ್ಕೆ 4 ವರ್ಷ ತುಂಬಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಆರೋಪಕ್ಕೆ ರಾಜೀವ್ ಚಂದ್ರಶೇಖರ್ ಸುದ್ದಿಗೋಷ್ಠಿ ಮೂಲಕ ತಿರುಗೇಟು ನೀಡಿದ್ದಾರೆ.
2000 ರು. ನೋಟು ಬಿಡುಗಡೆ ಕುರಿತು ಮೋದಿಗೆ ಒಲವಿರಲಿಲ್ಲ!.
ಡಿಮಾನಿಟೈಸೇಶನ್ ಕೇಂದ್ರ ಸರ್ಕಾರ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ. ನೋಟು ಅಪನಗದೀಕರಣದಿಂದ ಭಾರತದ ಆರ್ಥಿಕತೆಯನ್ನು ಸ್ವಚ್ಚಗೊಳಿಸಲು, ಸೋರಿಕೆಯಾಗುತ್ತಿದ್ದ ಆದಾಯ ಮೂಲವನ್ನು ಕ್ರೋಡಿಕರಿಸಲು ಸಾಧ್ಯವಾಗಿದೆ ಎಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಅಧಿವೇಶನದಲ್ಲಿ ಬಯಲಾದ ವಿಪಕ್ಷಗಳ ಬಣ್ಣ
ದೇಶದಲ್ಲಿನ ಆರ್ಥಿಕ ಭ್ರಷ್ಟಾಚಾರ, ಕಪ್ಪು ಹಣದ ದಂಧೆಗೆ ಡಿಮಾನಿಟೈಸೇಶನ್ ಬಹು ದೊಡ್ಡ ಹೊಡೆತ ನೀಡಿತು. ಸಮಾಜ ಎಲ್ಲಾ ವರ್ಗದ ಜನರಿಗೆ ಆರ್ಥಿಕ ಪ್ರಯೋಜನ ಹಾಗೂ ಸುಲಭ ದಾರಿಯನ್ನು ನೀಡಿದೆ. ದೇಶ ಡಿಜಿಟಲೀಕರಣದತ್ತ ಹೆಜ್ಜೆ ಇಟ್ಟ ಕಾರಣ ಆರ್ಥಿಕ ವ್ಯವಹಾರಗಳು ಸುಲಭ ಹಾಗೂ ಸರಳಗೊಂಡಿತು. ಪ್ರಮುಖವಾಗಿ ಪಾರದರ್ಶಕತೆ ಕಂಡು ಬಂದಿತು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಗೆಳೆಯರಾದ ಬಂಡವಾಳ ಶಾಹಿಗಳಿಗೆ ನೆರವು ಮಾಡಿಕೊಡುವ ಉದ್ದೇಶದಿಂದ ಡಿಮಾನಿಟೈಸೇಶನ್ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ದೇಶದ ಆರ್ಥಿಕತೆ ಹಳ್ಳಹಿಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಕಾಂಗ್ರೆಸ್ ಆರೋಪದ ಬೆನ್ನಲ್ಲೇ ರಾಜೀವ್ ಚಂದ್ರಶೇಕರ್ ಡಿಮಾನಿಟೈಸೇಶನ್‌ನಿಂದ ದೇಶದಲ್ಲಿ ಆದ ಬದಲಾವಣೆ ಕುರಿತು ವಿವರಿಸೋ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
2016, ನವೆಂಬರ್ 8ರಂದು ಪ್ರಧಾನಿ ಮೋದಿ 500 ರೂಪಾಯಿ ಮುಖಬೆಲೆಯ ಹಾಗೂ 1000 ರೂಪಾಯಿ ಮುಖಬೆಲೆಯ ನೋಟನ್ನು ಅಪನಗದೀಕರಣ ಮಾಡಿದ್ದರು. ಮೋದಿ ಘೋಷಣೆ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಹಲವರು ಇದು ದೇಶ ಬದಲಾವಣೆಯತ್ತ ಇಟ್ಟ ದಿಟ್ಟ ಹೆಜ್ಜೆ ಎಂದು ಬಣ್ಣಿಸಿದರೆ, ಇನ್ನು ಕೆಲವರು ಬಹುದೊಡ್ಡ ತಪ್ಪು ನಿರ್ಧಾರ ಎಂದು ಆರೋಪಿಸಿದ್ದರು.