‘ಪ್ರಧಾನಿ ಮೋದಿ ಜತೆ ನಾನು ತಪ್ಪಾಗಿ ನಡೆದುಕೊಂಡೆ’: ಗುಲಾಂ ನಬಿ ಆಜಾದ್‌

ಕಾಂಗ್ರೆಸ್‌ನಲ್ಲಿದ್ದಾಗಲೂ ನಾನು ಸ್ವತಂತ್ರವಾಗಿಯೇ ಇದ್ದೆ. ಆದರೆ ಕಳೆದ ಐದಾರು ವರ್ಷಗಳಿಂದ ನಮ್ಮ ಸಲಹೆಗಳನ್ನು ಸಂಪೂರ್ಣ ಕಡೆಗಣಿಸಲಾಗುತ್ತಿತ್ತು. ಅದು ತಳಮಳ ಉಂಟುಮಾಡುತ್ತಿತ್ತು. ಕಣ್ಣೆದುರಿಗೇ ತಪ್ಪು ನಡೆಯುತ್ತಿದ್ದಾಗ ನಮ್ಮಂತಹ ಹಿರಿಯ ನಾಯಕರು ಅದನ್ನು ಎತ್ತಿ ತೋರಿಸಿದರೂ ಸರಿಪಡಿಸಿಕೊಳ್ಳುತ್ತಿರಲಿಲ್ಲ.
 

Democratic Progressive Azad Party Leader Ghulam Nabi Azad Exclusive Interview gvd

ಗುಲಾಂ ನಬಿ ಆಜಾದ್‌, ಡೆಮಾಕ್ರೆಟಿಕ್‌ ಪ್ರೊಗ್ರೆಸ್ಸಿವ್‌ ಆಜಾದ್‌ ಪಕ್ಷದ ನಾಯಕ

ಸುಮಾರು 50 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದು, ಇತ್ತೀಚೆಗೆ ಪಕ್ಷ ತೊರೆದ ಜಮ್ಮು ಕಾಶ್ಮೀರದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಆತ್ಮಕತೆ ಬರೆದಿದ್ದಾರೆ. ಅದರ ಕುರಿತು, ತಾವು ಕಾಂಗ್ರೆಸ್‌ ಪಕ್ಷ ತೊರೆದಿದ್ದರ ಕುರಿತು, ಪ್ರಧಾನಿ ಮೋದಿ ಕುರಿತು ಹಾಗೂ ಒಟ್ಟಾರೆ ರಾಜಕೀಯ ಸನ್ನಿವೇಶದ ಬಗ್ಗೆ ಅವರು ಏಷ್ಯಾನೆಟ್‌ ಸಂವಾದದಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

* ಇತ್ತೀಚೆಗೆ ನೀವು ಆತ್ಮಕತೆ ಬರೆದಿದ್ದೀರಿ. ಅದಕ್ಕೆ ಆಜಾದ್‌ ಎಂದು ಹೆಸರಿಟ್ಟಿದ್ದೀರಿ. ನಿಮ್ಮ ಹೆಸರೂ ಆಜಾದ್‌. ಏನಾದರೂ ಸಂಬಂಧವಿದೆಯೇ?
ಆಜಾದ್‌ ಅಂದರೆ ಉರ್ದುವಿನಲ್ಲಿ ಸ್ವಾತಂತ್ರ್ಯ. ನಾನು ವಿದ್ಯಾರ್ಥಿ ಜೀವನದಿಂದ ಹಿಡಿದು ರಾಜಕೀಯ ಬದುಕಿನವರೆಗೆ ಪ್ರತಿ ಹಂತದಲ್ಲೂ ಸ್ವತಂತ್ರವಾಗಿ ಯೋಚಿಸುತ್ತಾ ಬಂದಿದ್ದೇನೆ. ಆದ್ದರಿಂದಲೇ ನನ್ನ ಪೆನ್‌ ನೇಮ್‌ ಕೂಡ ಆಜಾದ್‌. ನನ್ನ ಹೊಸ ಪಕ್ಷದ ಹೆಸರು ಕೂಡ ಡೆಮಾಕ್ರೆಟಿಕ್‌ ಪ್ರೊಗ್ರೆಸ್ಸಿವ್‌ ಆಜಾದ್‌ ಪಾರ್ಟಿ. ಹೀಗಾಗಿ ನಾನು ಸ್ವತಂತ್ರ, ನನ್ನ ಪಕ್ಷ ಸ್ವತಂತ್ರ, ನನ್ನ ಪುಸ್ತಕ ಕೂಡ ಸ್ವತಂತ್ರ. ಇದನ್ನು ನಿಷ್ಪಕ್ಷಪಾತವಾಗಿ ಬರೆದಿದ್ದೇನೆ. ಯಾರನ್ನಾದರೂ ಒಂದೆರಡು ಪ್ಯಾರಾಗಳಲ್ಲಿ ಹೊಗಳಿದ್ದರೆ ಅದಕ್ಕೆ ಅವರು ದೇಶಕ್ಕಾಗಿ ಮಾಡಿದ ಅದ್ಭುತ ಕೆಲಸಗಳಷ್ಟೇ ಕಾರಣ. ಮುಂದೆ ಅವರು ಏನಾದರೂ ತಪ್ಪು ಮಾಡಿದ್ದರೆ ಟೀಕೆ ಕೂಡ ಮಾಡಿದ್ದೇನೆ.

* ಕಾಂಗ್ರೆಸ್‌ ಪಕ್ಷ ತೊರೆದ ಮೇಲೆ ಹೆಚ್ಚು ‘ಆಜಾದ್‌’ ಆಗಿದ್ದೀರಾ?
ಕಾಂಗ್ರೆಸ್‌ನಲ್ಲಿದ್ದಾಗಲೂ ನಾನು ಸ್ವತಂತ್ರವಾಗಿಯೇ ಇದ್ದೆ. ಆದರೆ ಕಳೆದ ಐದಾರು ವರ್ಷಗಳಿಂದ ನಮ್ಮ ಸಲಹೆಗಳನ್ನು ಸಂಪೂರ್ಣ ಕಡೆಗಣಿಸಲಾಗುತ್ತಿತ್ತು. ಅದು ತಳಮಳ ಉಂಟುಮಾಡುತ್ತಿತ್ತು. ಕಣ್ಣೆದುರಿಗೇ ತಪ್ಪು ನಡೆಯುತ್ತಿದ್ದಾಗ ನಮ್ಮಂತಹ ಹಿರಿಯ ನಾಯಕರು ಅದನ್ನು ಎತ್ತಿ ತೋರಿಸಿದರೂ ಸರಿಪಡಿಸಿಕೊಳ್ಳುತ್ತಿರಲಿಲ್ಲ. ಪಕ್ಷ ಮೇಲಿಂದ ಮೇಲೆ ವಿಫಲವಾಗುತ್ತಿತ್ತು. ನಮ್ಮ ಮಾತಿಗೆ ಬೆಲೆಯಿರಲಿಲ್ಲ. ಹೀಗಾಗಿ ಪಕ್ಷ ತೊರೆದೆ. ಈಗ ಪಕ್ಷ ದಿನದಿಂದ ದಿನಕ್ಕೆ ಇನ್ನಷ್ಟುಪಾತಾಳಕ್ಕೆ ಹೋಗುತ್ತಿದೆ. ಅದರ ಬಗ್ಗೆ ನನಗೆ ಸಂತೋಷವೇ ಇದೆ. ಆ ಪಕ್ಷವೀಗ ಐದಾರು ಜನರ ಮೂಗಿನ ನೇರಕ್ಕೆ ತಕ್ಕಂತೆ ನಡೆಯುತ್ತಿದೆ. ಅವರಿಗೆ ಪಕ್ಷದ ಹಿತ ಬೇಕಿಲ್ಲ, ಬದಲಿಗೆ ವೈಯಕ್ತಿಕ ಇಮೇಜ್‌ ಮುಖ್ಯವಾಗಿದೆ.

ಬಂಡಾಯಗಾರರಿಂದ ಕಾಂಗ್ರೆಸ್ಸಿಗೆ ಈಗ ಪಕ್ಷಾಂತರ, ಪಕ್ಷೇತರ ಕಂಟಕ: ನಾಗರಾಜ ಛಬ್ಬಿ ಬಿಜೆಪಿಗೆ

* ಇತ್ತೀಚೆಗೆ ಅನಿಲ್‌ ಆ್ಯಂಟನಿ ಬಿಜೆಪಿ ಸೇರಿದ್ದಕ್ಕೂ ಅದೇ ಕಾರಣವೇ?
ದುರದೃಷ್ಟವಶಾತ್‌ ಕಾಂಗ್ರೆಸ್‌ ಪಕ್ಷದಲ್ಲಿ ನಮ್ಮಂತಹ ಹಿರಿಯ ನಾಯಕರಿಗೆ ಆದಂತೆ ಕಿರಿಯರಿಗೂ ಭ್ರಮನಿರಸನವಾಗುತ್ತಿದೆ. ಹೀಗಾಗಿ ಹೆಚ್ಚಿನ ಕಿರಿಯ ನಾಯಕರು ಕಾಂಗ್ರೆಸ್‌ ತೊರೆದಿದ್ದಾರೆ. ಜ್ಯೋತಿರಾದಿತ್ಯ ಸಿಂಧ್ಯಾ, ಜಿತಿನ್‌ ಪ್ರಸಾದ್‌, ಆರ್‌ಪಿಎನ್‌ ಸಿಂಗ್‌, ಸುಷ್ಮಿತಾ ದೇವ್‌, ಹಾರ್ದಿಕ್‌ ಪಟೇಲ್‌ ಹೀಗೆ ಹಲವರು ಪಕ್ಷ ಬಿಟ್ಟರು. ಪ್ರತಿ ರಾಜ್ಯದಲ್ಲೂ ರಾಹುಲ್‌ ಗಾಂಧಿ ಟೀಮ್‌ನಲ್ಲಿದ್ದ ಕನಿಷ್ಠ 4-5 ಡಜನ್‌ ಮುಖಂಡರು ಪಕ್ಷ ತೊರೆದಿದ್ದಾರೆ. ಅದಕ್ಕೆ ಕಾರಣ ನಾಯಕತ್ವದ ಕೊರತೆ.

* ದೇಶದಲ್ಲಿ ರಾಷ್ಟ್ರೀಯ ಅಜೆಂಡಾ ಹೊಂದಿರುವ ಏಕೈಕ ಪಕ್ಷ ಬಿಜೆಪಿ ಎಂದು ಅನಿಲ್‌ ಆ್ಯಂಟನಿ ಹೇಳಿದ್ದಾರೆ. ಒಪ್ಪುತ್ತೀರಾ?
ಅದು ಅವರ ಅಭಿಪ್ರಾಯ. ಬಿಜೆಪಿಯನ್ನು ಈ ಎತ್ತರಕ್ಕೆ ಏರಿಸಿದವರು ಯಾರು? ಕಾಂಗ್ರೆಸ್‌ ಪಕ್ಷ. ಕಾಂಗ್ರೆಸ್‌ ಹೈಕಮಾಂಡ್‌ ಏನೂ ಮಾಡದೆ ಸುಮ್ಮನೆ ಕುಳಿತಿದ್ದರಿಂದಲೇ ಬಿಜೆಪಿ ಇಷ್ಟುಬೆಳೆಯಿತು. ಈಗಲೂ ಬಿಜೆಪಿ ಇನ್ನಷ್ಟುಬೆಳೆಯುತ್ತಿರುವುದು ಕಾಂಗ್ರೆಸ್‌ನ ನಿಷ್ಕಿ್ರಯತೆಯಿಂದಾಗಿಯೇ.

* ಬಿಜೆಪಿಯೀಗ ಅಲ್ಪಸಂಖ್ಯಾತರನ್ನೂ ಸೆಳೆಯುತ್ತಿದೆ. ಅದನ್ನು ನೀವು ಹೇಗೆ ಸ್ವೀಕರಿಸುತ್ತೀರಿ?
ಸಹಜವಾಗಿಯೇ ಕಾಂಗ್ರೆಸ್‌ ಪಕ್ಷ ಏನೂ ಮಾಡದೆ ಇದ್ದಾಗ ಬಿಜೆಪಿ ಅದರ ಲಾಭ ಪಡೆಯಲು ಯತ್ನಿಸುತ್ತದೆ. ಇಂದಿರಾ ಗಾಂಧಿ ಕಾಲದಲ್ಲಿ ನಾನು ಯೂತ್‌ ಕಾಂಗ್ರೆಸ್‌ ಅಧ್ಯಕ್ಷನಾಗಿದ್ದೆ. ಅಲ್ಲಿಂದ ಇಂದಿರಾ ಸಂಪುಟದಲ್ಲಿ ಕಿರಿಯ ಸಚಿವನಾದೆ. ಅವರ ಜೊತೆಗೆ ದೇಶ ಸುತ್ತಾಡಿದೆ. ಹೋದಲ್ಲೆಲ್ಲ ಅವರು, ‘ಈ ದೇಶದ ಮುಸ್ಲಿಮರು ಬಡವರು, ದಲಿತರು ಬಡವರು, ಅವರನ್ನು ಮೇಲೆತ್ತಬೇಕು’ ಎಂದು ಹೇಳುತ್ತಿದ್ದರು. ಕ್ರಮೇಣ ಕಾಂಗ್ರೆಸ್‌ ನಾಯಕರು ಮುಸ್ಲಿಮರ ಹೆಸರು ಹೇಳುವುದನ್ನು ಬಿಟ್ಟು ಅಲ್ಪಸಂಖ್ಯಾತರು ಎಂಬ ಪದ ಬಳಸತೊಡಗಿದರು. ಈಗಿನ ನಾಯಕರು ಅಲ್ಪಸಂಖ್ಯಾತರು ಎಂಬ ಪದವನ್ನೂ ಹೇಳುವುದಿಲ್ಲ. ಬದಲಿಗೆ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದವರು ಎನ್ನುತ್ತಾರೆ. ಅಲ್ಪಸಂಖ್ಯಾತರು ಹೋದರು!

* ಆದರೆ ಬಿಜೆಪಿಯ ನೀತಿಗಳು ನಿಜವಾಗಿಯೂ ಮುಸ್ಲಿಮರಿಗೆ ನೆರವಾಗುತ್ತಿವೆಯೇ?
ಇಲ್ಲ. ಅವರು ಮುಸ್ಲಿಂ ಮೋರ್ಚಾ ಮಾಡಿ ದೊಡ್ಡ ಸದ್ದು ಮಾಡುತ್ತಿದ್ದಾರೆ. ಆದರೆ ಅದರಿಂದ ಮುಸ್ಲಿಮರಿಗೆ ಏನೂ ಪ್ರಯೋಜನವಾಗುತ್ತಿಲ್ಲ.

* ನಿಮ್ಮ ಪುಸ್ತಕದಲ್ಲಿ ನರೇಂದ್ರ ಮೋದಿಯವರನ್ನು ಹೊಗಳಿದ್ದೀರಿ. ಆದರೆ ನಿಮ್ಮ ರಾಜಕೀಯ ಜೀವನದುದ್ದಕ್ಕೂ ಅವರನ್ನು ದೂಷಿಸುತ್ತಿದ್ದಿರಿ. ಏಕೆ ಈ ವೈರುಧ್ಯ?
ನಾನು ತಪ್ಪು ಮಾಡಿದೆ. ಏಳು ವರ್ಷಗಳ ಕಾಲ ರಾಜ್ಯಸಭೆಯ ಪ್ರತಿಪಕ್ಷದ ನಾಯಕನಾಗಿದ್ದಾಗ ಒಮ್ಮೆಯೂ ನಾನು ಪ್ರಧಾನಿ ಮೋದಿ ಜೊತೆಗೆ ಚೆನ್ನಾಗಿ ನಡೆದುಕೊಳ್ಳಲಿಲ್ಲ. ಅದಕ್ಕಾಗಿ ನನಗೆ ತುಂಬಾ ವಿಷಾದವಿದೆ. ಅವರು ಪ್ರತಿ ಬಾರಿ ಗಣ್ಯರಿಗೆ ಔತಣ ಏರ್ಪಡಿಸಿದಾಗಲೂ ನನಗೆ ಆಹ್ವಾನ ಕಳಿಸುತ್ತಿದ್ದರು. ಆದರೆ ನಾನು ಒಮ್ಮೆಯೂ ಹೋಗಲಿಲ್ಲ. 2-3 ಸಲ ಅವರೇ ಖುದ್ದಾಗಿ ಸಂಸತ್‌ ಭವನದಲ್ಲಿ ಇದನ್ನು ನೆನಪಿಸಿ, ಮುಂದಿನ ಸಲವಾದರೂ ಬರುತ್ತೀರಿ ಎಂದುಕೊಂಡಿದ್ದೇನೆ ಎಂದರು. ಆದರೂ ನಾನು ಹೋಗಲಿಲ್ಲ. ಅನೇಕ ಸಲ ಎದುರಿಗೆ ಸಿಕ್ಕಾಗ ಮಾತನಾಡಿಸಿ, ನನ್ನ ಕಚೇರಿಗೆ ಬನ್ನಿ, ಟೀ ಕುಡಿಯೋಣ ಎಂದು ಕರೆದರು. ಆಗಲೂ ಹೋಗಲಿಲ್ಲ. ಒಬ್ಬ ಪ್ರಧಾನಿಯ ಜೊತೆ ಹೀಗೆ ನಡೆದುಕೊಂಡಿದ್ದು ನನ್ನ ತಪ್ಪು. ಸಂಸತ್ತಿನ ಒಳಗೆ ಅವರ ಸರ್ಕಾರವನ್ನು ಬೇಕಾದಷ್ಟುಸಲ ತರಾಟೆ ತೆಗೆದುಕೊಂಡಿದ್ದೇನೆ. ಹೀಗಾಗಿ ನಾನು ರಾಜ್ಯಸಭೆಯಿಂದ ನಿವೃತ್ತಿಯಾದಾಗ ವಿದಾಯ ಭಾಷಣದಲ್ಲಿ ಖಂಡಿತ ನನ್ನನ್ನು ಅವರೂ ತರಾಟೆ ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೆ. ಇವರೊಬ್ಬ ಅಸಂಸ್ಕೃತ ವಿರೋಧ ಪಕ್ಷದ ನಾಯಕರಾಗಿದ್ದರು ಎನ್ನುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ಅವರು ನಿಜವಾದ ಮುತ್ಸದ್ದಿಯಂತೆ ಮಾತನಾಡಿದರು. ಅದನ್ನು ನಾನು ಮೆಚ್ಚಿಕೊಳ್ಳಲೇಬೇಕು.

* ಇದರರ್ಥ ನೀವು ಅವರ ರಾಜಕಾರಣವನ್ನು ಕೂಡ ಮೆಚ್ಚಿಕೊಳ್ಳುತ್ತೀರಿ ಎಂದೇನಲ್ಲ ಅಲ್ಲವೇ?
ಖಂಡಿತ ಅಲ್ಲ. ಅವರ ರಾಜಕೀಯ ನಿಲುವುಗಳನ್ನು, ಅವರ ಸರ್ಕಾರದ ನೀತಿಗಳನ್ನು ನಾನು ಒಪ್ಪುವುದಿಲ್ಲ. ಅವರು ಬಂದಮೇಲೆ ದೇಶದಲ್ಲಿ ಮತೀಯ ಧ್ರುವೀಕರಣ ಜಾಸ್ತಿಯಾಗಿದೆ. ಆದರೆ ಪ್ರಧಾನಿಯಾಗಿ ನಾನು ಅವರನ್ನು ವಿರೋಧಿಸಿದರೂ, ವೈಯಕ್ತಿಕವಾಗಿ ಅವರೊಬ್ಬ ಮುತ್ಸದ್ದಿಯೂ ಆಗಬಲ್ಲರು ಎಂಬುದನ್ನು ಗುರುತಿಸಿದ್ದೇನೆ. ಅವರ ಆ ಗುಣವನ್ನು ಮೆಚ್ಚುತ್ತೇನೆ.

* ನಿಮಗೂ ಅದಾನಿಗೂ ಸಂಬಂಧವಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ನಿಜವಾಗಿಯೂ ಸಂಬಂಧವಿದೆಯೇ?
ಅವರಿಗೆ ನಾಚಿಕೆಯಾಗಬೇಕು. ನಾನು ಯಾವತ್ತೂ ಯಾವುದೇ ಉದ್ಯಮಿಗಳ ಜೊತೆ ಸಂಬಂಧ ಇರಿಸಿಕೊಂಡಿಲ್ಲ. ಆದರೆ ರಾಹುಲ್‌ ಸೇರಿದಂತೆ ಇಡೀ ಗಾಂಧಿ ಕುಟುಂಬ ಆರಂಭದಿಂದ ಇವತ್ತಿನವರೆಗೂ ಉದ್ಯಮಿಗಳ ಜೊತೆ ಆಪ್ತ ಸಂಬಂಧ ಹೊಂದಿದೆ. ಗಾಂಧಿ ಕುಟುಂಬದ ಮೇಲಿರುವ ಗೌರವದಿಂದಾಗಿ ನಾನು ಅದರ ಬಗ್ಗೆ ಹೆಚ್ಚು ಹೇಳುವುದಿಲ್ಲ. ಇಲ್ಲದಿದ್ದರೆ ಅವರು ಯಾರಾರ‍ಯರ ಜೊತೆ ಸಂಬಂಧ ಹೊಂದಿದ್ದಾರೆ ಎಂದು 10 ಹೆಸರು ಹೇಳಬಲ್ಲೆ. ದೇಶದ ಹೊರಗೆ ಹೋಗಿ ಎಷ್ಟುಉದ್ಯಮಿಗಳನ್ನು ಅವರು ಯಾವ್ಯಾವಾಗ ಭೇಟಿಯಾಗುತ್ತಾರೆ ಎಂಬುದು ಕೂಡ ನನಗೆ ಗೊತ್ತು.

* ಭಾರತ್‌ ಜೋಡೋ ಯಾತ್ರೆ ನಂತರ ರಾಹುಲ್‌ ಗಾಂಧಿಗೆ ಹೆಚ್ಚು ಶಕ್ತಿ ಬಂದಿದೆ, ಕಾಂಗ್ರೆಸ್‌ ಪಕ್ಷದ ತಾಕತ್ತು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಒಪ್ಪುತ್ತೀರಾ?
ಶಕ್ತಿ ಹೆಚ್ಚಾಗಿದೆ ಎನ್ನಲು ಇದೇನೂ ಡಬ್ಲ್ಯುಡಬ್ಲ್ಯುಎಫ್‌ ಅಲ್ಲ. ಆದರೂ ಯಾತ್ರೆಯ ನಂತರ ರಾಹುಲ್‌ ಶಕ್ತಿ ಹೆಚ್ಚಾಗಿದೆ ಎಂದು ದೇಶದ ಎಲ್ಲರಂತೆ ನಾನು ಕೂಡ ಭಾವಿಸಿದ್ದೆ. ಆದರೆ ಕಳೆದ ಹತ್ತು ದಿನಗಳ ಬೆಳವಣಿಗೆ ನೋಡಿದರೆ ಯಾತ್ರೆಯ ಪರಿಣಾಮ ಶೂನ್ಯ ಎಂಬುದು ಕಾಣಿಸುತ್ತದೆ. ಒಂದು ಉದಾಹರಣೆ ನೀಡುತ್ತೇನೆ. 1978ರಲ್ಲಿ ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಲಾಯಿತು. ಕೆಲವೇ ಗಂಟೆಗಳಲ್ಲಿ ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಜನರು ಜೈಲಿಗೆ ಹೋದರು. 10 ಲಕ್ಷಕ್ಕೂ ಹೆಚ್ಚು ಜನರು ಜೈಲಿನ ಹೊರಗೆ ಕಾಯುತ್ತಿದ್ದರು. ಏಕೆಂದರೆ ಜೈಲಿನಲ್ಲಿ ಜಾಗವಿರಲಿಲ್ಲ. ನಾನು ಕೂಡ ಜೈಲಿಗೆ ಹೋಗಿದ್ದೆ. ಈಗ ರಾಹುಲ್‌ ಗಾಂಧಿ ಯಾತ್ರೆ ಮುಗಿಸಿ ಬಂದ ತಕ್ಷಣ ಅವರ ಸದಸ್ಯತ್ವ ಅನರ್ಹಗೊಳಿಸಲಾಯಿತು. ಆದರೆ ಒಂದೇ ಒಂದು ಸೊಳ್ಳೆಯೂ ಕಣ್ಣೀರು ಹಾಕಲಿಲ್ಲ. ಒಂದೇ ಒಂದು ಸೊಳ್ಳೆಯೂ ಬೀದಿಗೆ ಬರಲಿಲ್ಲ. ಸೂರತ್‌ ಕೋರ್ಚ್‌ಗೆ ಹೋಗುವಾಗಲೂ ಪಕ್ಷದ ನಾಯಕರನ್ನೇ ಕರೆದುಕೊಂಡು ಹೋಗಬೇಕಾಯಿತೇ ಹೊರತು ಜನಸಾಮಾನ್ಯರು ಯಾರೂ ಬರಲಿಲ್ಲ. ಹಾಗಿದ್ದರೆ ಯಾತ್ರೆಯಿಂದ ಬಂದ ಶಕ್ತಿಯಾದರೂ ಯಾವುದು?

* ರಾಹುಲ್‌ ಗಾಂಧಿ ವೈಫಲ್ಯಕ್ಕೆ ಅವರ ಸಲಹೆಗಾರರು ದಾರಿತಪ್ಪಿಸುತ್ತಿರುವುದು ಕಾರಣವೇ?
ಅಲ್ಲ. ಸ್ವತಃ ರಾಹುಲ್‌ ಗಾಂಧಿಯೇ ತಮ್ಮನ್ನು ತಾವು ದಾರಿ ತಪ್ಪಿಸಿಕೊಂಡಿದ್ದಾರೆ. ಅವರನ್ನು ದಾರಿತಪ್ಪಿಸಲು ಬೇರೆಯವರು ಬೇಕಾಗಿಲ್ಲ. ಏಕೆ ನೆಹರು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ದಾರಿತಪ್ಪಲಿಲ್ಲ? ಏಕೆ ರಾಹುಲ್‌ ಮಾತ್ರ ದಾರಿತಪ್ಪಿದರು? ನಾನು 50 ವರ್ಷ ರಾಜಕಾರಣ ಮಾಡಿದ್ದೇನೆ. ಆದರೆ ದಾರಿತಪ್ಪಲಿಲ್ಲ. ಒಬ್ಬ ವ್ಯಕ್ತಿ ಯಾವಾಗ ಗೊತ್ತುಗುರಿಯಿಲ್ಲದೆ ಹೋಗುತ್ತಿರುತ್ತಾನೋ ಆಗ ಅದರ ಲಾಭ ಪಡೆದು ಅವನನ್ನು ದಾರಿತಪ್ಪಿಸಲು ಬೇಕಾದಷ್ಟುಜನರು ಕಾಯುತ್ತಿರುತ್ತಾರೆ.

* 20 ವಿರೋಧ ಪಕ್ಷಗಳು ಸೇರಿ ಮೋದಿ ವಿರುದ್ಧ ಒಟ್ಟಾಗಿ ರಾಷ್ಟ್ರಮಟ್ಟದಲ್ಲಿ ಪ್ರಬಲ ಮೈತ್ರಿಕೂಟ ರಚಿಸಲು ಮುಂದಾಗಿವೆ. ಅದು ಯಶಸ್ವಿಯಾಗಬಹುದೇ?
ಯಶಸ್ವಿಯಾದರೆ ಬಹಳ ಒಳ್ಳೆಯದು. ಎಲ್ಲ ಪಕ್ಷಗಳಿಗೆ ಶುಭ ಹಾರೈಸುತ್ತೇನೆ. ನನ್ನದು ಹೊಸ ಪಕ್ಷ. ಹೀಗಾಗಿ ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ನನ್ನ ಪಾತ್ರವೇನೂ ಇರುವುದಿಲ್ಲ. ನಾನು ನಮ್ಮ ಪಕ್ಷವನ್ನು ಬೆಳೆಸುವುದರತ್ತ ಮೊದಲು ಗಮನಹರಿಸಬೇಕು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟ?: ಅಭ್ಯರ್ಥಿ ಅಂತಿಮಗೊಳಿಸಲು ಮೋದಿ 2 ಗಂಟೆ ಕಸರತ್ತು

* ನಿಮ್ಮ ಪುಸ್ತಕದಲ್ಲಿ ಕಾಂಗ್ರೆಸ್‌ ಪಕ್ಷದ ಅವಸಾನ ಎಂಬ ಅಧ್ಯಾಯವೊಂದಿದೆ. ಅದರಲ್ಲಿ ಕಾಂಗ್ರೆಸ್‌ ಪಕ್ಷ ಮೊಘಲ್‌ ಸಾಮ್ರಾಜ್ಯದಂತೆ ಪತನಗೊಂಡಿತು ಎಂದು ಹೇಳಿದ್ದೀರಿ, ಏಕೆ?
ನಾನು ಆರನೇ ಕ್ಲಾಸ್‌ ಓದುವಾಗ ಮೊಘಲರ ಅವಸಾನ ಎಂಬ ಪಾಠವಿತ್ತು. ಅದರಲ್ಲಿ ಮೊಘಲ್‌ ಸಾಮ್ರಾಜ್ಯದ ಪತನಕ್ಕೆ 13 ಕಾರಣ ನೀಡಿದ್ದರು. ಮೊಘಲ್‌ ಸಾಮ್ರಾಜ್ಯ ನಮ್ಮ ದೇಶದಲ್ಲಿ ಹಂತಹಂತವಾಗಿ ಪತನಗೊಂಡಿತು. ಹಾಗೆಯೇ ಕಾಂಗ್ರೆಸ್‌ ಪಕ್ಷ ಕೂಡ ಹಂತಹಂತವಾಗಿ ಪತನಗೊಂಡಿದೆ. ಕಾಂಗ್ರೆಸ್‌ ಪಕ್ಷ ಭಾರೀ ಸೋಲು ಅನುಭವಿಸಿದ್ದು 2014ರಲ್ಲಿ ಆಗಿದ್ದರೂ, ಅದರ ಪತನ ಬಹಳ ಹಿಂದೆಯೇ ಆರಂಭವಾಗಿತ್ತು. ಯಾವುದೇ ರಾಜಕೀಯ ಪಕ್ಷ ಒಂದು ದಿನ ಅಥವಾ ಒಂದು ವರ್ಷದಲ್ಲಿ ಪತನಗೊಳ್ಳುವುದಿಲ್ಲ. ಒಳಗೊಳಗೇ ಹಲವು ವರ್ಷಗಳಿಂದ ಅಷ್ಟಷ್ಟಾಗಿ ಕುಸಿಯುತ್ತಾ ಬಂದಿರುತ್ತದೆ. ನಾಯಕರು ಶಕ್ತಿಶಾಲಿಯಾಗಿದ್ದಾಗ ಆ ಕುಸಿತದ ಆಘಾತ ತಡೆದುಕೊಳ್ಳುತ್ತಾರೆ. ನಾಯಕರು ದುರ್ಬಲರಾಗಿದ್ದಾಗ ಕುಸಿತದ ಆಘಾತ ತೀವ್ರವಾಗಿರುತ್ತದೆ ಮತ್ತು ಹೊರಗೆ ಕಾಣಿಸುತ್ತದೆ.

* ಕಾಂಗ್ರೆಸ್‌ ಪಕ್ಷಕ್ಕೆ 2024ರಲ್ಲಿ ಒಳ್ಳೆಯ ಭವಿಷ್ಯವಿದೆಯೇ?
ನನಗೆ ಹಾಗೇನೂ ಅನ್ನಿಸುವುದಿಲ್ಲ. ಆದರೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಆದರೆ ಕಾಂಗ್ರೆಸಿಗರೇ ಹಾಗೆ ಹಾರೈಸಿಕೊಳ್ಳುತ್ತಿಲ್ಲ. ಇಷ್ಟಕ್ಕೂ ಕೇವಲ ಹಾರೈಕೆಯಿಂದ ಏನೂ ಆಗುವುದಿಲ್ಲ. ಕಾಂಗ್ರೆಸ್‌ ನಾಯಕರು ಪ್ರತಿದಿನ ಪತ್ರಿಕಾಗೋಷ್ಠಿ ನಡೆಸಿ ಮೋದಿ, ಅದಾನಿ, ನನ್ನಂಥವರನ್ನು ಬೈಯುತ್ತಿದ್ದಾರೆಯೇ ಹೊರತು ಬೇರೇನೂ ಮಾಡುತ್ತಿಲ್ಲ. ಅದರಿಂದ ಮತ ಬರುವುದಿಲ್ಲ.

Latest Videos
Follow Us:
Download App:
  • android
  • ios