ತಡರಾತ್ರಿ ಇಲಿ ವಿಷ ಆರ್ಡರ್ ಮಾಡಿದ ಮಹಿಳೆ, ಪಾರ್ಸೆಲ್ ಹಿಡಿದು ಮಹಿಳೆಯ ಮನೆ ವಿಳಾಸಕ್ಕೆ ತೆರಳುತ್ತಿದ್ದಂತೆ ಡೆಲಿವರಿ ಎಜೆಂಟ್ ಅಪಾಯ ಊಹಿಸಿದ್ದಾನೆ. ಮಹಿಳೆಗೆ ಆರ್ಡರ್ ಡೆಲಿವರಿ ಮಾಡಲು ಬಾಗಿಲು ತಟ್ಟಿದ್ದಾನೆ, ಮುಂದೇನಾಯ್ತು?
ಆನ್‌ಲೈನ್ ಮೂಲಕ ಎಷ್ಟೇ ಹೊತ್ತಿನಲ್ಲಿ ಆರ್ಡರ್ ಮಾಡಿದರೂ ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಆರ್ಡರ್ ಬಂದಿರುತ್ತದೆ. ಭಾರತದಲ್ಲಿ ಇ ಕಾಮರ್ಸ್ ಡೆಲಿವರಿ ಸೇವೆಗಳು ಇತರ ಎಲ್ಲಾ ಸೇವೆಗಳಿಗಿಂತ ಮುಂಚೂಣಿಯಲ್ಲಿದೆ. ಬಹುತೇಕರು ಇದೇ ಆನ್‌ಲೈನ್ ಆರ್ಡರ್‌ನ್ನೇ ಅವಲಂಬಿಸಿದ್ದಾರೆ. ಹೀಗೆ ಮಹಿಳೆಯೊಬ್ಬರು ತಡ ರಾತ್ರಿ ಇಲಿ ವಿಷ ಆರ್ಡರ್ ಮಾಡಿದ್ದಾಳೆ. ಮೂರು ಪ್ಯಾಕೆಟ್ ಇಲಿ ವಿಷ ಆರ್ಡರ್ ಹಿಡಿದು ಮಹಿಳೆಯ ಮನೆಗೆ ತೆರಳಿದ ಡೆಲಿವರಿ ಎಜೆಂಟ್, ಅಪಾಯವನ್ನು ಊಹಿಸಿದ್ದಾನೆ. ಮಹಿಳೆಗೆ ಆರ್ಡರ್ ಡೆಲಿವರಿ ಮಾಡಲು ಹೋಗಿ ಹೀರೋ ಆದ ರೋಚಕ ಘಟನೆಯನ್ನು ಖದ್ದು ಡೆಲಿವರಿ ಎಜೆಂಟ್ ಹಂಚಿಕೊಂಡಿದ್ದಾನೆ.
ಪಾರ್ಸೆಲ್ ಹಿಡಿದು ಹೊರಟ ಡೆಲಿವರಿ ಎಜೆಂಟ್
ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ. ಡೆಲಿವರಿ ಎಜೆಂಟ್ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾನೆ. ಡೆಲಿವರಿ ಎಜೆಂಟ್ ತಡ ರಾತ್ರಿ ಡೆಲಿವರಿ ಮಾಡುತ್ತಾ ತನ್ನ ಕೆಲಸ ಮುಂದುವರಿಸಿದ್ದಾನೆ. ಈ ವೇಳೆ ಮಹಿಳೆಯೊಬ್ಬರು ಮೂರು ಪ್ಯಾಕೆಟ್ ಇಲಿ ವಿಷ ಆರ್ಡರ್ ಮಾಡಿದ್ದಾರೆ. ಈ ಆರ್ಡರ್ ಪಾರ್ಸೆಲ್ ಮಾಡಿ, ವಿಳಾಸದಲ್ಲಿ ಕೊಂಚ ಗೊಂದಲವಿದ್ದ ಕಾರಣ ಕರೆ ಮಾಡಿದ್ದಾನೆ. ಅತ್ತ ಮಹಿಳೆ ವಿಳಾಸ ಹೇಳಿದ್ದಾಳೆ. ಆದರೆ ಆಕೆಯ ಮಾತಿನಲ್ಲಿ ಏನೋ ಸಮಸ್ಯೆ ಇದೆ ಅನ್ನೋದನ್ನು ಬ್ಲಿಂಕಿಟ್ ಡೆಲಿವರಿ ಎಜೆಂಟ್ ಊಹಿಸಿದ್ದಾನೆ. ಕಾರಣ ಆಕೆಯ ಮಾತುಗಳು ತೀವ್ರ ನೋವು, ಕಣ್ಣೀರಿನಿಂದ ಕೂಡಿತ್ತು. ಹೀಗಾಗಿ ಅಪಾಯ ಅರಿತಿದ್ದಾನೆ.
ಮಹಿಳೆಗೆ ಸುಳ್ಳು ಹೇಳಿದ ಡೆಲಿವರಿ ಎಜೆಂಟ್
ಮಹಿಳಯ ವಿಳಾಸ ತಲುಪಿದ ಡೆಲಿವರಿ ಎಜೆಂಟ್, ಬಾಗಿಲು ತಟ್ಟಿದ್ದಾನೆ. ಕೆಲ ಹೊತ್ತಲ್ಲೇ ಮಹಿಳೆ ಬಾಗಿಲು ತೆರದಿದ್ದಾಳೆ. ಮಹಿಳೆಯನ್ನು ನೋಡಿದ ಡೆಲಿವರಿ ಎಜೆಂಟ್‌ಗೆ ಅಪಾಯದ ತೀವ್ರತೆ ಸ್ಪಷ್ಟವಾಗಿದೆ. ಕಾರಣ ಡೆಲಿವರಿ ಎಜೆಂಟ್ ಹೇಳಿದಂತೆ ಆಕೆಯ ಮಾತುಗಳು ತೊದಲುತ್ತಿತ್ತು, ಕಣ್ಣೀರು ಜಿನಗುತ್ತಿತ್ತು. ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಆದರೆ ಗಟ್ಟಿ ನಿರ್ಧಾರ ಮಾಡಿ ಆರ್ಡರ್ ಮಾಡಿದ್ದಾಳೆ ಅನ್ನೋದು ಸ್ಪಷ್ಟವಾಗಿತ್ತು. ಮಹಿಳೆ ಬಾಗಿಲು ತೆರೆದಾಗ ಡೆಲಿವರಿ ಎಜೆಂಟ್ ಅತೀ ವಿನಯದಿಂದ ಮೇಡಮ್, ತಕ್ಕ ಸಮಯಕ್ಕೆ ಆರ್ಡರ್ ತಲುಪಿಸಲು ವೇಗವಾಗಿ ಬರುವ ಸಂದರ್ಭದಲ್ಲಿ ನಿಮ್ಮ ಆರ್ಡರ್ ಎಲ್ಲೋ ಬಿದ್ದು ಹೋಗಿದೆ. ಕೆಳಗೆ ಬಂದು ನೋಡಿದಾಗ ಆರ್ಡರ್ ಮಿಸ್ಸಾಗಿರುವುದು ಪತ್ತೆಯಾಗಿದೆ. ಹೀಗಾಗಿ ಹೇಳಿ ಹೋಗೋಣ ಎಂದು ಬಂದೆ ಎಂದಿದ್ದಾನೆ. ಆಕೆ ಮರುಮಾತು ಆಡಲಿಲ್ಲ. ತಕ್ಷಣವೇ ನೀವು ಇಲಿ ವಿಷವನ್ನು ಈ ಹೊತ್ತಿನಲ್ಲಿ ಆರ್ಡರ್ ಮಾಡಿರುವ ಉದ್ದೇಶ ನನಗೆ ಗೊತ್ತು. ಆದರೆ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮಹಿಳೆಗೆ ಹೇಳಿದ್ದಾನೆ.
ಮಹಿಳೆಯ ಮನ ಒಲಿಸಿದ ಎಜೆಂಟ್
ಇಲಿಗಳು ಹೆಚ್ಚಾಗಿದೆ, ಹಾಗಾಗಿ ಆರ್ಡರ್ ಮಾಡಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಇದಕ್ಕೆ ಉತ್ತರಿಸಿದ ಡೆಲಿವರಿ ಎಜೆಂಟ್, ಈ ಹೊತ್ತಿನಲ್ಲಿ ಮೂರು ಪ್ಯಾಕೆಟ್ ಆರ್ಡರ್ ಮಾಡಿದ್ದೀರಿ. ನಿಮ್ಮ ಕಣ್ಣೀರು, ನೋವು ಸ್ಪಷ್ಟವಾಗಿ ಕಾಣಿಸುತ್ತಿದೆ. ದಯವಟ್ಟು ದುಡುಕಿನ ನಿರ್ಧಾರ ಬೇಡ. ಈ ಕಷ್ಟದ ಸಂದರ್ಭ, ಸಮಯ ಕೆಲವೇ ಕ್ಷಣಗಳು ಮಾತ್ರ, ಬಳಿಕ ಎಲ್ಲವೂ ಸರಿಯಾಗಲಿದೆ. ನಿಮ್ಮ ಜೀವ ಅಮೂಲ್ಯ, ಪೋಷಕರು, ಕುಟುಂಬಸ್ಥರು,ಆಪ್ತರು ಎಲ್ಲರು ನಿಮ್ಮೊಂದಿಗಿದ್ದಾರೆ. ಆದರೆ ನೀವು ದುಡುಕಿನ ನಿರ್ಧಾರ ತೆಗೆದುಕೊಂಡರೆ ಅವರ ಪಾಡೇನು? ಅವರ ನೋವು ಅರಿತಿದ್ದಿರಾ. ನಿಮ್ಮ ನಿರ್ಧಾರ ಬದಲಿಸಬೇಕು ಎಂದು 30 ಗಂಟೆಗೂ ಹೆಚ್ಚು ಕಾಲ ಮಹಿಳೆಯ ಮನ ಒಲಿಸುವ ಪ್ರಯತ್ನ ಮಾಡಿದ್ದಾನೆ.
ಮಹಿಳೆ ಕಣ್ಣೀರಿಡುತ್ತಲೆ ಮಾತನಾಡಿದ್ದಾಳೆ. ಆಕೆಯನ್ನು ಸಮಾಧಾನ ಪಡಿಸಿದ ಡಿಲೆವರಿ ಎಜೆಂಟ್ ಮನ ಪರಿವರ್ತಿಸಿದ್ದಾನೆ. ಬಳಿಕ, ನಿಮ್ಮ ಆರ್ಡರ್ ನನ್ನ ಬಳಿ ಇದೆ. ಆದರೆ ಈ ಆರ್ಡರ್ ನೀವು ಕ್ಯಾನ್ಸಲ್ ಮಾಡಬೇಕು ಎಂದು ಮನವಿ ಮಾಡಿದ್ದಾನೆ. ಇದರಂತೆ ಆಕೆ ಆರ್ಡರ್ ಕ್ಯಾನ್ಸಲ್ ಮಾಡಿದ್ದಾಳೆ. ಆಕೆಯ ಮನೆಯಿಂದ ಹೊರಬಂದು ದಾರಿಯಲ್ಲಿ ನಿಂತು ಡೆಲಿವರಿ ಎಜೆಂಟ್ ನಡೆದ ಘಟನೆಯ ವಿಡಿಯೋ ಮಾಡಿದ್ದಾನೆ. ಇದೀಗ ಈ ಡೆಲಿವರಿ ಎಜೆಂಟ್ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.


