ಬೆಂಗಳೂರಿನ ಮಹದೇವಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಬೈಕ್ ಸವಾರರು ಹೆಲ್ಮೆಟ್‌ನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಯುವಕನ ರಕ್ಷಣೆಗೆ ಧಾವಿಸಿದ ಸ್ಥಳೀಯರು ಹಲ್ಲೆಕೋರರಿಗೆ ಗೂಸಾ ನೀಡಿ ಓಡಿಸಿದ್ದು, ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು (ಜ. 9): ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ವಾಹನ ಸವಾರರ ಅಸಹನೆ ಮಿತಿಮೀರುತ್ತಿದೆ. ಮಹದೇವಪುರ ಮುಖ್ಯ ರಸ್ತೆಯಲ್ಲಿ ಗುರುವಾರ ತಡರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಡೆಲಿವರಿ ಬಾಯ್ ಒಬ್ಬನ ಮೇಲೆ ಬೈಕ್ ಸವಾರರು ಮನಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹೆಲ್ಮೆಟ್‌ನಿಂದ ಹೊಡೆದು, ಕಾಲಿನಿಂದ ಒದ್ದು ಅಟ್ಟಹಾಸ ಮೆರೆದ ಪುಂಡರಿಗೆ ಸ್ಥಳೀಯರು ಸ್ಥಳದಲ್ಲೇ ಸರಿಯಾದ ಪಾಠ ಕಲಿಸಿದ್ದಾರೆ.
ನಿಯಂತ್ರಣ ತಪ್ಪಿ ಬಿದ್ದಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ
ಮಹದೇವಪುರ ಮುಖ್ಯ ರಸ್ತೆಯಲ್ಲಿ ಡೆಲಿವರಿ ಬಾಯ್ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ದಿಢೀರನೆ ಬೈಕ್ ಸವಾರರಿಗೆ ಅಡ್ಡ ಬಂದಿದ್ದಾನೆ ಎನ್ನಲಾಗಿದೆ. ಈ ವೇಳೆ ವೇಗವಾಗಿ ಬರುತ್ತಿದ್ದ ಬೈಕ್ ಸವಾರರು ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದಿದ್ದಾರೆ. ಇದರಿಂದ ಕೆರಳಿದ ಯುವಕರು, ಯಾವುದೇ ಮಾತುಕತೆ ನಡೆಸದೆ ನೇರವಾಗಿ ಡೆಲಿವರಿ ಬಾಯ್ ಮೇಲೆ ಮುಗಿಬಿದ್ದಿದ್ದಾರೆ. ರಸ್ತೆಯಲ್ಲೇ ಆತನನ್ನು ಅಡ್ಡಗಟ್ಟಿ ಅಮಾನವೀಯವಾಗಿ ವರ್ತಿಸಿದ್ದಾರೆ.
ಹೆಲ್ಮೆಟ್‌ನಿಂದ ಹಲ್ಲೆ, ಕಾಲಿನಿಂದ ತುಳಿತ: ರೌಡಿಸಂ ಪ್ರದರ್ಶನ
ಕೆಳಗೆ ಬಿದ್ದ ಕೋಪದಲ್ಲಿದ್ದ ಬೈಕ್ ಸವಾರರು ಡೆಲಿವರಿ ಬಾಯ್‌ನನ್ನು ಕಾಲಿನಿಂದ ಒದ್ದು ನೆಲಕ್ಕೆ ಕೆಡವಿದ್ದಾರೆ. ಅಷ್ಟಕ್ಕೇ ನಿಲ್ಲದೆ, ತಮ್ಮ ಕೈಲಿದ್ದ ಹೆಲ್ಮೆಟ್‌ನಿಂದ ಆತನ ತಲೆ ಮತ್ತು ಮೈಮೇಲೆ ಮನಸೋ ಇಚ್ಛೆ ಜಜ್ಜಿದ್ದಾರೆ. ಡೆಲಿವರಿ ಬಾಯ್ ಎಷ್ಟೇ ಕ್ಷಮೆ ಕೇಳಿದರೂ ಬಿಡದ ಪುಂಡರು, ನಡುರಸ್ತೆಯಲ್ಲೇ ಆತನ ಮೇಲೆ ಪ್ರತಾಪ ತೋರಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾದರು.
ಡೆಲಿವರಿ ಬಾಯ್ ನೆರವಿಗೆ ಬಂದ ಸ್ಥಳೀಯರು: ಪುಂಡರಿಗೆ ಗೂಸಾ!
ಯುವಕನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಆತನ ನೆರವಿಗೆ ಧಾವಿಸಿದ್ದಾರೆ. ಹಲ್ಲೆ ಮಾಡುತ್ತಿದ್ದ ಯುವಕರನ್ನು ತಡೆದಿದ್ದಲ್ಲದೆ, ಅವರ ಪುಂಡಾಟಿಕೆಯನ್ನು ಕಂಡು ಕೆರಳಿದ ಸಾರ್ವಜನಿಕರು ಹಲ್ಲೆಕೋರ ಯುವಕರಿಗೆ ಸ್ಥಳದಲ್ಲೇ ಗೂಸಾ ನೀಡಿದ್ದಾರೆ. ಸಾರ್ವಜನಿಕರಿಂದ ಏಟು ಬೀಳುತ್ತಿದ್ದಂತೆ ಕಂಗಾಲಾದ ಯುವಕರು ಅಲ್ಲಿಂದ ಎದ್ನೋ ಬಿದ್ನೋ ಎಂದು ಕಾಲ್ಕಿತ್ತಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಘಟನೆಯ ದೃಶ್ಯ
ಈ ಇಡೀ ಘಟನೆಯ ದೃಶ್ಯಾವಳಿಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


