ದೆಹಲಿಯಲ್ಲಿ ಭಾರೀ ಮಳೆಯಿಂದಾಗಿ ಬೃಹತ್ ಮರವೊಂದು ಬಿದ್ದು ಬೈಕ್ ಸವಾರ ಮೃತಪಟ್ಟಿದ್ದಾರೆ. ಕಲ್ಕಾಜಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೃಹದಾಕಾರದ ಮರವೊಂದು ಮುರಿದು ವಾಹನಗಳ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಮುಂಜಾನೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಈ ಮಳೆಗೆ ರಸ್ತೆಗಳು ನೀರಿನಿಂದ ತುಂಬಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರ ನಡುವೆ ರಸ್ತೆಬದಿ ಇದ್ದ ಬೃಹದಾಕಾರದ ಬೇವಿನ ಮರವೊಂದು ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಬಿದ್ದಿದೆ. ಪರಿಣಾಮ ಬೈಕ್ ಸವಾರ ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು 50 ವರ್ಷದ ಸುಧೀರ್ ಕುಮಾರ್ ಎಂದು ಗುರುತಿಸಲಾಗಿದೆ ಅವರು ತಮ್ಮ ಪುತ್ರಿ 22 ವರ್ಷದ ಪ್ರಿಯಾ ಅವರ ಹಿಂದೆ ಸ್ಕೂಟಿಯಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ:
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಬೆಳಗ್ಗೆ 9:50 ರ ಸುಮಾರಿಗೆ ದೆಹಲಿಯ ಕಲ್ಕಾಜಿಯಲ್ಲಿ ಹಳೆಯ ಬೇವಿನ ಮರವೊಂದು ಬುಡಮೇಲಾಗಿ ವಾಹನಗಳ ಮೇಲೆ ಬಿದ್ದಿದೆ. ನಿಧಾನವಾಗಿ ಕೆಳಗೆ ಬಿದ್ದ ಮರದಿಂದ ತಪ್ಪಿಸಿಕೊಂಡು ಹೋಗುವಲ್ಲಿ ಕಾರೊಂದು ಯಶಸ್ವಿಯಾಯ್ತು ಆದರೆ ನಂತರ ಬಂದ ಬೈಕ್ ಈ ಅನಾಹುತದಿಂದ ಪಾರಾಗುವುದಕ್ಕೆ ಸಾಧ್ಯವಾಗಲಿಲ್ಲ. ಕೂಡಲೇ ಅಲ್ಲಿದ್ದ ಜನ ಬೈಕ್ ಅಡಿಗೆ ಬಿದ್ದ ವ್ಯಕ್ತಿಯನ್ನು ಅಲ್ಲಿಂದ ಹೊರತೆಗೆದರಾದರೂ ಅವರು ಬದುಕುಳಿಯಲಿಲ್ಲ.
ತಂದೆ ಸಾವು ಬದುಕುಳಿದ ಮಗಳು:
ಪಿಸಿಆರ್ ಕರೆಗೆ ಪೊಲೀಸರು ತ್ವರಿತವಾಗಿ ಸ್ಪಂದಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಮರದಡಿ ಸಿಕ್ಕ ಇಬ್ಬರು ಗಾಯಾಳುಗಳನ್ನು ಹೊರತೆಗೆದು ಇಬ್ಬರು ಬಲಿಪಶುಗಳನ್ನು ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು. ತಂದೆ ಮತ್ತು ಮಗಳು ಇಬ್ಬರನ್ನೂ ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಯಿತು. ಆದರೆ ಗಾಯಗಳಿಂದಾಗಿ ಆ ವ್ಯಕ್ತಿ ಸಾವನ್ನಪ್ಪಿದರು. ಇದರ ಜೊತೆಗೆ ಆ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಕಾರೊಂದು ಜಖಂಗೊಂಡಿದೆ. ಹಾಗೆಯೇ ಮತ್ತೊಂದು ಸಿಸಿಟಿವಿ ದೃಶ್ಯದಲ್ಲಿ ಮರ ಬಿದ್ದಿದ್ದರಿಂದ ಇಡೀ ರಸ್ತೆಯೇ ಬ್ಲಾಕ್ ಆಗಿರುವುದು ಕಂಡು ಬಂದಿದೆ. ಮರವನ್ನು ಸಣ್ಣ ಭಾಗಗಳಾಗಿ ಕತ್ತರಿಸಿ ರಸ್ತೆಯಿಂದ ತೆಗೆದುಹಾಕಲು ಜೆಸಿಬಿಯನ್ನು ನಿಯೋಜಿಸಲಾಗಿತ್ತು.
ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಪರಿಣಾಮ ಭಾರತ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ಮುಂಬರುವ ಗಂಟೆಗಳಲ್ಲಿ ಇನ್ನು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ನೀರು ನಿಂತಿದ್ದು, ಸಂಚಾರ ನಿಧಾನಗೊಂಡಿದ್ದು, ಜನದಟ್ಟಣೆಯ ಸಮಯದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಲಜಪತ್ ನಗರ, ರೋಹ್ಟಕ್ ರಸ್ತೆ, ಆನಂದ್ ಪರ್ಬತ್, ಜಹಾಂಗೀರ್‌ಪುರಿಯ ಜಿಟಿಕೆ ಡಿಪೋ, ಆದರ್ಶ ನಗರ, ರಿಂಗ್ ರಸ್ತೆ ಬಳಿಯ ಹಳೆಯ ಜಿಟಿ ರಸ್ತೆ, ಮಥುರಾ ರಸ್ತೆಯ ಆಶ್ರಮದಿಂದ ಮೂಲ್‌ಚಂದ್ ಕಡೆಗೆ ಸಾಗುವ ರಸ್ತೆ ಮತ್ತು ಧೌಲಾ ಕುವಾನ್-ಗುರುಗ್ರಾಮ್ ರಸ್ತೆಗಳು ನೀರಿನಿಂದ ಆವೃತವಾಗಿದ್ದವು.
ದೆಹಲಿ ಸಂಚಾರ ಪೊಲೀಸರು ಹಲವಾರು ಎಚ್ಚರಿಕೆಗಳನ್ನು ನೀಡಿದ್ದು, ಮೂಲ್‌ಚಂದ್ ಅಂಡರ್‌ಪಾಸ್, ಏಮ್ಸ್ ಫ್ಲೈಓವರ್ ಮತ್ತು ಸೌತ್ ಎಕ್ಸ್‌ಟೆನ್ಶನ್ ಲೂಪ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವುದರ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿ, ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದರು. ದೆಹಲಿ ವಿಮಾನ ನಿಲ್ದಾಣವು ಸಹ ಈ ಬಗ್ಗೆ ತನ್ನ ವಿಮಾನ ಪ್ರಯಾಣಿಕರಿಗೆ ಸೂಚನೆ ಹೊರಡಿಸಿದೆ, ನೀರು ನಿಲ್ಲುವಿಕೆ ಮತ್ತು ವಾಹನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವಿಳಂಬವನ್ನು ತಪ್ಪಿಸಲು ಮೆಟ್ರೋದಲ್ಲಿ ಪ್ರಯಾಣಿಸುವಂತೆ ಸೂಚಿಸಿತ್ತು.
