Asianet Suvarna News Asianet Suvarna News

ಗುಜುರಿ ಗ್ಯಾಂಗ್‌ಸ್ಟಾರ್‌ನ ಗರ್ಲ್‌ಫ್ರೆಂಡ್: ಕೆಲಸ ಅರಸುತ್ತಿದ್ದ ಹುಡುಗಿ 100 ಕೋಟಿ ಬಂಗ್ಲೆಗೆ ಒಡತಿಯಾಗಿದ್ದೇಗೆ

ಮೆಟಲ್ ಗುಜುರಿ ಮಾಫಿಯಾಕ್ಕೆ ಸಂಬಂಧಿಸಿದಂತೆ ಇದುವರೆಗೆ ನೋಯ್ಡಾ ಪೊಲೀಸರು 200 ಕೋಟಿಗೂ ಅಧಿಕ ಆಸ್ತಿಯನ್ನು ಜಪ್ತಿ ಮಾಡಿದ್ದು, ಇದೆಲ್ಲವೂ ಸ್ಕ್ಯಾಪ್ ಮೆಟಲ್ ಮಾಫಿಯಾ ಗ್ಯಾಂಗ್ ಸ್ಟಾರ್ ರವಿ ಕಾನ ಎಂಬಾತನಿಗೆ ಸೇರಿದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Delhi scrap metal mafia case who is Kajal jha once A job searcher now turned owner of 100 crore valued Bungalow akb
Author
First Published Jan 6, 2024, 3:04 PM IST

ನವದೆಹಲಿ:  ಮೆಟಲ್ ಗುಜುರಿ ಮಾಫಿಯಾಕ್ಕೆ ಸಂಬಂಧಿಸಿದಂತೆ ಇದುವರೆಗೆ ನೋಯ್ಡಾ ಪೊಲೀಸರು 200 ಕೋಟಿಗೂ ಅಧಿಕ ಆಸ್ತಿಯನ್ನು ಜಪ್ತಿ ಮಾಡಿದ್ದು, ಇದೆಲ್ಲವೂ ಸ್ಕ್ಯಾಪ್ ಮೆಟಲ್ ಮಾಫಿಯಾ ಗ್ಯಾಂಗ್ ಸ್ಟಾರ್ ರವಿ ಕಾನ ಎಂಬಾತನಿಗೆ ಸೇರಿದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಈ ಮಾಫಿಯಾ ಗ್ಯಾಂಗ್ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಗುಜುರಿ ಮಾಫಿಯಾಕ್ಕೆ ಸಂಬಂಧಿಸಿದಂತೆ ದಾಳಿಯನ್ನು ತೀವ್ರಗೊಳಿಸಿರುವ ನೋಯ್ಡಾ ಪೊಲೀಸರು ಈಗ ಈ ಮಾಫಿಯಾ ಕಿಂಗ್‌ ರವಿ ಕನ ಗೆಳತಿ ಕಾಜಲ್‌ ಜಾಗೆ ಸೇರಿದ್ದ ದಕ್ಷಿಣ ದೆಹಲಿಯಲ್ಲಿದ್ದ 100 ಕೋಟಿ ಮೌಲ್ಯದ ಬಂಗ್ಲೆಯನ್ನು ಕೂಡ ಜಪ್ತಿ ಮಾಡಿದ್ದಾರೆ. 

ಈ ಕಾಜಲ್ ಝಾ ಯಾರು?

ಪ್ರಸ್ತುತ ಮಾಫಿಯಾ ಗ್ಯಾಂಗ್‌ ಸ್ಟಾರ್ ರವಿ ಕನ ಎಂಬಾತನ ಗರ್ಲ್‌ಫ್ರೆಂಡ್ ಆಗಿರುವ ಈ ಕಾಜಲ್ ಝಾ, ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಈ ರವಿ ಕಾನ ನ ಸಂಪರ್ಕಕ್ಕೆ ಬಂದಿದ್ದಳು. ಹೀಗೆ ಈತನ ಗ್ಯಾಂಗ್‌ಗೆ ಸೇರಿದ ಈಕೆ ಕೆಲವೇ ಸಮಯದಲ್ಲಿ ಗ್ಯಾಂಗ್‌ನ ತುಂಬಾ ಮುಖ್ಯವಾದ ವ್ಯಕ್ತಿ ಎನಿಸಿಕೊಂಡಳು. 

ಇದಾದ ನಂತರ ರವಿ ಕಾನ ಈಕೆಗೆ ದಕ್ಷಿಣ ದೆಹಲಿಯಲ್ಲಿರುವ ಮೂರು ಅಂತಸ್ತಿನ ಬಂಗಲೆಯೊಂದನ್ನು ಉಡುಗೊರೆಯಾಗಿ ನೀಡಿದ್ದ. ಇದರ ಮೌಲ್ಯ ಅಂದಾಜು 100 ಕೋಟಿ, ಈ ಐಷಾರಾಮಿ ಬಂಗಲೆ ಮೇಲೆ ಬುಧವಾರ ದಾಳಿ ಮಾಡುವುದಕ್ಕೂ ಮೊದಲು ಈ ಕಾಜಲ್ ಝಾ ಹಾಗೂ ಆಕೆಯ ಸಹವರ್ತಿಗಳು ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಲ್ಲಿಂದ ಪರಾರಿಯಾಗಿದ್ದರು. ನಂತರ ಪೊಲೀಸರು ಈ ಬಂಗ್ಲೆಯನ್ನು ಸೀಲ್ ಮಾಡಿದ್ದರು. 

ರವೀಂದ್ರನಗರ ಪೊಲೀಸರು ನೀಡುವ ಮಾಹಿತಿ ಪ್ರಕಾರ,  ರವಿ ಕಾನ 16 ಸದಸ್ಯರಿರುವ ಗ್ಯಾಂಗೊಂದನ್ನು ನಿರ್ವಹಿಸುತ್ತಿದ್ದ. ಆ ಗ್ಯಾಂಗ್ ಅಕ್ರಮವಾಗಿ ರೀಬಾರ್ ಮತ್ತು ಸ್ಕ್ರ್ಯಾಪ್ ವಸ್ತುಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿತ್ತು. ಇನ್ನು ಈ ತಂಡವನ್ನು ನಿರ್ವಹಿಸುತ್ತಿದ್ದ ಕಾನಾ ಸ್ಕ್ರ್ಯಾಪ್ ಡೀಲರ್ ಆಗಿದ್ದ. ಆದರೆ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಈ ಗುಜರಿ ಸಾಮಾನುಗಳನ್ನು ಸಂಪಾದಿಸಲು ಹಾಗೂ ಮಾರಾಟ ಮಾಡಲು ತಂಡ ರಚಿಸಿ ಸುಲಿಗೆಗಿಳಿದ ನಂತರ ಈತ ಕೋಟ್ಯಾಧಿಪತಿಯಾಗಿದ್ದ.

ಅಲ್ಲದೇ ಈ ರವಿ ಕಾನ ಗ್ರೇಟರ್ ನೋಯ್ಡಾದಲ್ಲಿ ಈಗಾಗಲೇ ಗ್ಯಾಂಗ್‌ಸ್ಟಾರ್ ಆಗಿದ್ದ ಹರೇಂದ್ರ ಪ್ರಧಾನ್ ಎಂಬಾತನ ಸೋದರನಾಗಿದ್ದ. 2014ರಲ್ಲಿ ಈ ಹರೇಂದ್ರ ನಾಥ್‌ನನ್ನು ವಿರೋಧಿ ಗ್ಯಾಂಗ್ 2014ರಲ್ಲಿ ಹತ್ಯೆ ಮಾಡಿತ್ತು. ಇದಾದ ನಂತರ ರವಿ ಕಾನಾ ಈ ವ್ಯವಹಾರವನ್ನು ತನ್ನ ಸುಪರ್ದಿಗೆ ಪಡೆದಿದ್ದ.  ಬರೀ ಇಷ್ಟೇ ಅಲ್ಲ ಈತನಿಗೆ ಪ್ರಾಣ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರಿಂದ ರಕ್ಷಣೆಯನ್ನು ಪಡೆದಿದ್ದ.   ಈತ ಹಲವು ಪೊಲೀಸರ ಭದ್ರತೆಯೊಂದಿಗೆ ಮದುವೆ ಸಮಾರಂಭದಲ್ಲಿ ಹೆಜ್ಜೆ ಇಡುವ ವೀಡಿಯೋವೊಂದು ಕೆಲ ದಿನಗಳ ಹಿಂದೆ ಸಾಕಷ್ಟು ವೈರಲ್ ಆಗಿತ್ತು. 

ಈತನ ವಿರುದ್ಧ ಪೊಲೀಸರು ಈಗಾಗಲೇ 11 ಪ್ರಕರಣಗಳನ್ನು ದಾಖಲಿಸಿದ್ದಾರೆ.  ಇದರಲ್ಲಿ ಅಪಹರಣ ಹಾಗೂ ಕಳ್ಳತನ ಪ್ರಕರಣವೂ ಸೇರಿದೆ.  ಈತನ ಗ್ಯಾಂಗ್‌ನ ಆರು ಜನರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಗ್ರೇಟರ್ ನೋಯ್ಡಾದ ಪೊಲೀಸ್ ಅಧಿಕಾರಿ ಸಾದ್ ಮಿಯಾ ಖಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈತನಿಗೆ ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದ ಹಲವು ಕಡೆ ಗುಜುರಿ ಸಾಮಾನುಗಳ ಗೋದಾಮುಗಳಿದ್ದು, ಅಲ್ಲೆಲ್ಲಾ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಸ್ತುತ ಈತ ಈತನ ಗರ್ಲ್‌ಫ್ರೆಂಡ್ ಹಾಗೂ ಗ್ಯಾಂಗ್ ಇತರ ಸದಸ್ಯರ ಜೊತೆ ಪರಾರಿಯಾಗಿದ್ದು, ಪೊಲೀಸರು ಹುಡುಕಾಟದಲ್ಲಿದ್ದಾರೆ. 

Follow Us:
Download App:
  • android
  • ios