ದೆಹಲಿಯಲ್ಲಿ ಇಂದು ಮುಂಜಾನೆಯಿಂದ ಭಾರಿ ಮಳೆ ಸುರಿಯುತ್ತಿದೆ. ದೆಹಲಿ ಹಾಗೂ ರಾಜಧಾನಿ ವ್ಯಾಪ್ತಿಯಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಭಾರಿ ಮಳೆಯಿಂದ 40 ವಿಮಾನ ಹಾರಾಟ ಮಾರ್ಗ ಬದಲಾಯಿಸಲಾಗಿದೆ. ಇನ್ನು 100ಕ್ಕೂ ಹೆಚ್ಚು ವಿಮಾನ ವಿಳಂಬವಾಗಿದೆ.
ದೆಹಲಿ(ಮೇ.02) ದೇಶದ ಹಲವು ಭಾಗದಲ್ಲಿ ಮಳೆಯಾಗುತ್ತಿದೆ. ಇಂದು ಬೆಳಗ್ಗೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ದೆಹಲಿಯ ರಸ್ತೆಗಳು ಜಲಾವೃತವಾಗಿದೆ. ತಗ್ಗು ಪ್ರದೇಶದಲ್ಲಿ ನೀರು ನಿಂತುಕೊಂಡು ರಸ್ತೆಗಳು ಬಂದ್ ಆಗಿದೆ. ಗುಡುಗು ಸಿಡಿಲು ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮ ದೆಹಲಿ ವಿಮಾನ ನಿಲ್ದಾಣ ಸಂಪೂರ್ಣ ಜಾಮ್ ಆಗಿದೆ. 40 ವಿಮಾನದ ಮಾರ್ಗ ಬದಲಾಯಿಸಲಾಗಿದೆ. ಇನ್ನು ದೆಹಲಿಗೆ ಆಗಮಿಸುವ 100ಕ್ಕೂ ಹೆಚ್ಚು ವಿಮಾನ ವಿಳಂಬವಾಗಲಿದೆ. ವಿಮಾನ ಪ್ರಯಾಣಿಕರು ಪರದಾಡುವಂತಾಗಿದೆ.
ಕಳೆದೆರಡು ಗಂಟೆಗೂ ಹೆಚ್ಚು ಕಾಲದಿಂದ ನಿರಂತರವಾಗಿ ದೆಹಲಿಯಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ದೆಹಲಿ ಹಾಗೂ ರಾಷ್ಟ್ರ ರಾಧಾನಿ ವ್ಯಾಪ್ತಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪ್ರಯಾಣ ಮಾಡಲು ಸಾಧ್ಯವಾಗದೆ ಉಳಿದಿದ್ದಾರೆ. ಇತ್ತ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಆಗದೇ ಬೇರೆ ಬೇರೆ ನಗರದ ವಿಮಾನ ನಿಲ್ದಾಣಗಳಿಗೆ ಡೈವರ್ಡ್ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ವಿಮಾನ ನಿಲ್ದಾಣ ಸಂಪರ್ಕಿಸುವ ಕೆಲ ರಸ್ತೆಗಳು ಜಲಾವೃತಗೊಂಡಿದೆ. ಹೀಗಾಗಿ ನಿಲ್ದಾಣದಿಂದ ಮರಳಲು ಸಾಧ್ಯವಾಗದೇ, ತೆರಳಲು ಸಾಧ್ಯವಾಗದೆ ಪ್ರಯಾಣಿಕರು ಪರಿತಪಿಸುವಂತಾಗಿದೆ.
Bengaluru rains: ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ
ಬಿಸಿಲ ಬೇಗೆಯಿಂದ ಕಂಗೆಟ್ಟ ಜನತೆಗೆ ನೆಮ್ಮದಿ
ಮೇ ತಿಂಗಳ ಆರಂಭದಲ್ಲಿ ದೆಹಲಿ ಕಾದ ಕಬ್ಬಿಣದಂತಾಗಿತ್ತು. ಭಾರಿ ಉರಿ ಬಿಸಿಲಿನಿಂದ ಜನರು ಕಂಗೆಟ್ಟಿದ್ದರು. ಇಂದು ಬೆಳಗ್ಗೆಯಿಂದಲೇ ಮಳೆ ಆಗಮನವಾಗಿದೆ. ಬಿಸಿಲ ಬೇಗೆಗೆ ಮಳೆರಾಯ ತಂಪೆರೆದಿದ್ದಾನೆ. ಆದರೆ ಒಂದೇ ಬಾರಿ ಸುರಿದ ಅತೀಯಾದ ಮಳೆಯಿಂದ ಜನರು ಹೈರಾಣಾಗಿದ್ದಾರೆ.
ದೆಹಲಿಯ ಹಲವು ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡಿದೆ. ವಾಹನ ಸವಾರರು ತೆರಳಲು ಸಾಧ್ಯಾಗದೇ ಪರದಾಡಿದ್ದಾರೆ. ಹಲವು ರಸ್ತೆಗಳು ನೀರಿನಲ್ಲಿ ಮುಳುಗಿದೆ. ಬೆಳಗ್ಗೆಯಿಂದಲೇ ಸುರಿದ ಮಳೆಗೆ ದೆಹಲಿಯಲ್ಲಿ ಅವಾಂತರ ಸೃಷ್ಟಿಯಾಗಿದೆ. ಭಾರಿ ಗಾಳಿ ಕಾರಣ ಹಲವು ಮರಗಳು ಧರೆಗುರುಳಿಸಿದೆ. ಚರಂಡಿಗಳ ನೀರು ರಸ್ತೆ ಮೇಲೆ ಹರಿಯುತ್ತಿದೆ.
ದೆಹಲಿಯ ದ್ವಾರದದಲ್ಲಿ ಪ್ರಾಣ ತೆಗೆದ ಮರ
ದೆಹಲಿಯ ದ್ವಾರಕ ಬಳಿ ದೊಡ್ಡ ಗಾತ್ರದ ಮರವೊಂದು ಧರೆಗುರುಳಿದೆ. ಇದರ ಪರಿಣಾಮ ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವು ಕಡೆ ರಸ್ತೆಗೆ ಮರಗಳು ಉರುಳಿ ಬಿದ್ದಿದೆ. ನಿಲ್ಲಿಸಿದ್ದ ವಾಹನಗಳ ಮೇಲೂ ಮರಗಳು ಬಿದ್ದಿವೆ. ಇಂದು ಬೆಳಗ್ಗೆ ಆರಂಭಗೊಂಡ ಮಳೆಗೆ ದೆಹಲಿಯಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ.


