13 ರಾಜ್ಯದಲ್ಲಿ ಇಳಿಕೆ, 22 ಕಡೆ ಭಾರಿ ಏರಿಕೆ| ಕೊರೋನಾ: ಏಕಕಾಲಕ್ಕೆ ಸಿಹಿ-ಕಹಿ ಸುದ್ದಿ| 2ನೇ ಅಲೆ ಇಳಿಕೆ ಲಕ್ಷಣದ ಸುಳಿವಿತ್ತ ಕೇಂದ್ರ
ನವದೆಹಲಿ(ಮೇ.04): ದೇಶಾದ್ಯಂತ ನಿತ್ಯ 4 ಲಕ್ಷದಷ್ಟುಹೊಸ ಸೋಂಕು ದಾಖಲಾಗುತ್ತಿರುವಾಗಲೇ, 13 ರಾಜ್ಯಗಳಲ್ಲಿ ಸೋಂಕು ಏರಿಕೆ ಸ್ಥಗಿತಗೊಂಡಿರುವ ಇಲ್ಲವೇ ಇಳಿಕೆಯಾಗುತ್ತಿರುವ ಸಣ್ಣ ಸುಳಿವು ಸಿಕ್ಕಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಜೊತೆಗೆ ಕರ್ನಾಟಕ ಸೇರಿದಂತೆ 22 ಕಡೆ (ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು) ಸೋಂಕಿನ ಪ್ರಮಾಣ ಇನ್ನೂ ಏರು ಗತಿಯಲ್ಲೇ ಇದೆ. ಹೀಗಾಗಿ ಸೋಂಕಿನ ಸರಪಳಿ ಮುರಿಯಲು ನಿಯಂತ್ರಣಾ ಕ್ರಮಗಳನ್ನು ಇನ್ನಷ್ಟುಕಟ್ಟುನಿಟ್ಟಾಗಿ ಪಾಲಿಸಬೇಕಾದ ಅಗತ್ಯವಿದೆ ಎಂದು ಹೇಳಿದೆ.
"
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್, ‘ದೆಹಲಿ, ಛತ್ತೀಸ್‌ಗಢ, ಮಹಾರಾಷ್ಟ್ರ, ಪಂಜಾಬ್, ಜಾರ್ಖಂಡ್, ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ, ಉತ್ತರಾಖಂಡ, ದಮನ್ ಮತ್ತು ದಿಯು, ಲಡಾಕ್ ಹಾಗೂ ಲಕ್ಷದ್ವೀಪ’ದಲ್ಲಿ ನಿತ್ಯದ ಸೋಂಕಿನ ಪ್ರಮಾಣ ಏರಿಕೆಗೆ ಬ್ರೇಕ್ ಬಿದ್ದಿರುವ ಇಲ್ಲವೇ ಅಲ್ಪ ಇಳಿಕೆಯ ಗತಿ ಕಂಡುಬಂದಿದೆ. ಆದರೆ ಇದು ಕೇವಲ ಆರಂಭಿಕ ಸುಳಿವು. ಈಗ ಸಿಕ್ಕಿರುವ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ನಾವು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಸೋಂಕು ನಿಯಂತ್ರಣಾ ಕ್ರಮಗಳನ್ನು ಇನ್ನಷ್ಟುಕಠಿಣವಾಗಿ ಮುಂದುವರೆಸಬೇಕು. ಆಗ ಹೊಸ ಪ್ರಕರಣಗಳನ್ನು ಇನ್ನಷ್ಟುಇಳಿಸಬಹುದು ಎಂದು ಹೇಳಿದ್ದಾರೆ.
"
22 ರಾಜ್ಯಗಳಲ್ಲಿ ಏರಿಕೆ:
ಇದೇ ವೇಳೆ ಕರ್ನಾಟಕ, ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಹರ್ಯಾಣ, ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕೇರಳ, ಪುದುಚೇರಿ, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಪಶ್ಚಿಮ ಬಂಗಾಳ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಸೋಂಕಿನ ಪ್ರಮಾಣ ಈಗಲೂ ಏರು ಗತಿಯಲ್ಲಿದೆ ಎಂದು ಲವ್ ಅಗರ್‌ವಾಲ್ ತಿಳಿಸಿದ್ದಾರೆ.
ಚುನಾವಣಾ ರಾಜ್ಯಗಳಲ್ಲಿ ಏರಿಕೆ:
ಹೀಗೆ ಏರುಗತಿಯಲ್ಲಿರುವ ರಾಜ್ಯಗಳ ಪೈಕಿ ಇತ್ತೀಚೆಗೆ ಚುನಾವಣೆ ನಡೆದ ಕೇರಳ, ಪುದುಚೇರಿ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದೆ ಎಂಬುದು ವಿಶೇಷ.
ಸಕ್ರಿಯ ಕೇಸ್:
12 ರಾಜ್ಯಗಳಲ್ಲಿ ಸಕ್ರಿಯ ಕೇಸುಗಳ ಸಂಖ್ಯೆ 1 ಲಕ್ಷಕ್ಕಿಂತ ಹೆಚ್ಚಿದೆ, 7 ರಾಜ್ಯಗಳಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 50000-1 ಲಕ್ಷದ ಮಿತಿಯಲ್ಲಿ, 17 ರಾಜ್ಯಗಳಲ್ಲಿ 50000ಕ್ಕಿಂತ ಹೆಚ್ಚು ಸಕ್ರಿಯ ಸೋಂಕಿತರಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
