ಸಿಬಿಐ ವಿಚಾರಣೆ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್‌ಗೆ ಬಂಧನ ಭೀತಿ, ತುರ್ತು ಸಭೆ ನಡೆಸಿದ ಆಪ್!
ಅಬಕಾರಿ ಹಗರಣ ತನಿಖೆ ನಡೆಸುತ್ತಿರುವ ಸಿಬಿಐ, ಇದೀಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿಚಾರಣೆ ನಡೆಸಿದೆ. ಇದೀಗ ಸಿಸೋಡಿಯಾ ರೀತಿ ಕೇಜ್ರಿವಾಲ್ ಕೂಡ ಬಂಧನವಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇತ್ತ ತೀವ್ರ ಪ್ರತಿಭಟನೆ ನಡೆಸುತ್ತಿದ್ದ ಆಮ್ ಆದ್ಮಿ ಪಾರ್ಟಿ ದಿಢೀರ್ ತುರ್ತು ಸಭೆ ನಡೆಸಿದೆ.
ನವದೆಹಲಿ(ಏ.16): ದೆಹಲಿ ಸರ್ಕಾರದ ಅಬಕಾರಿ ನೀತಿ ಆಮ್ ಆದ್ಮಿ ಸರ್ಕಾರಕ್ಕೆ ಸಂಕಷ್ಟದ ಸರಮಾಲೆಯನ್ನೇ ತಂದಿಟ್ಟಿದೆ. ಮನೀಶ್ ಸಿಸೋಡಿಯಾ ಈಗಾಲೇ ಜೈಲು ಸೇರಿದ್ದಾರೆ. ಇತ್ತ ಅಬಕಾರಿ ಹಗರಣದ ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಚಾರಣೆ ನಡೆಸಿದ್ದಾರೆ. ಸಿಬಿಐ ನಡೆ ಹಿಂದೆ ಕೇಂದ್ರ ಬಿಜೆಪಿ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿದೆ. ಆದರೆ ಕೇಜ್ರಿವಾಲ್ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿ ಭೀತಿ ಹೆಚ್ಚಾಗಿದೆ. ಮನೀಶ್ ಸಿಸೋಡಿಯಾ ರೀತಿ, ಕೇಜ್ರಿವಾಲ್ ಕೂಡ ಬಂಧನ ಸಾಧ್ಯತೆ ಇದೆ ಅನ್ನೋ ಮಾತುಗಳು ಹರಿದಾಡತೊಡಗಿದೆ.ಇದರ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ನಾಯಕರು ದಿಢೀರ್ ತುರ್ತು ಸಭೆ ನಡೆಸಿದ್ದಾರೆ.
ದೆಹಲಿಯ ಆಪ್ ಕಚೇರಿಯಲ್ಲಿ ಸಂಜೆ 5 ಗಂಟೆಗೆ ತುರ್ತು ಸಭೆ ನಡೆಸಲಾಗಿದೆ. ಸಿಬಿಐ ವಿಚಾರಣೆಯಿಂದ ಆಪ್ ಕೆರಳಿದೆ. ಇತ್ತ ಕೇಜ್ರಿವಾಲ್ ಬಂಧನ ಸಾಧ್ಯತೆ ಮಾತುಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಈ ಸಭೆ ನಡೆಸಲಾಗಿದೆ.ಮುಂದಿನ ಕಾರ್ಯತಂತ್ರಗಳು, ಪ್ರತಿಭಟನೆ ಸ್ವರೂಪ ಸೇರಿದಂತೆ ಹಲವು ವಿಚಾರಗಳು ಚರ್ಚೆ ನಡೆಸಿದ್ದಾರೆ
ಸಿಸೋಡಿಯಾ ಬಂಧನ ಬಳಿಕ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಕೇಜ್ರಿವಾಲ್ ವಿಚಾರಣೆ ನಡೆಸಲಾಗಿದೆ. ದೆಹಲಿ ಮದ್ಯ ನೀತಿ ಅಂಗೀಕಾರಕ್ಕೂ ಮುನ್ನ ನೀತಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ವರದಿ, ಸಾರ್ವಜನಿಕರು ಮತ್ತು ಕಾನೂನು ತಜ್ಞರ ಅಭಿಪ್ರಾಯಗಳನ್ನು ಒಳಗೊಂಡ ದಾಖಲೆಗಳನ್ನು ದೆಹಲಿ ಸಚಿವ ಸಂಪುಟದ ಮುಂದೆ ಮಂಡಿಸಲಾಗಿತ್ತು. ಆದರೆ ಇದೀಗ ಆ ಫೈಲ್ ಕಾಣೆಯಾಗಿದೆ. ಈ ಕುರಿತು ಕೇಜ್ರಿವಾಲ್ ವಿಚಾರಣೆ ನಡೆಸಲಾಗಿದೆ.
ಇದರ ಜೊತೆಗೆ ಕೆಲ ಉದ್ಯಮಿಗಳಿಗೆ ಲಾಭ ಮಾಡಿಕೊಡುವಂತೆ ಮತ್ತು ದಕ್ಷಿಣದ ಲಾಬಿಗೆ ಮಣಿದು ನೀತಿ ರೂಪಿಸಲಾಗಿತ್ತು ಎಂಬ ಕೆಲ ಆರೋಪಿಗಳು ನೀಡಿರುವ ಹೇಳಿಕೆ ಬಗ್ಗೆ, ಮದ್ಯ ನೀತಿ ರಚನೆಯಲ್ಲಿ ನಿಮ್ಮ ಪಾತ್ರವೇನು? ಕೆಲ ಉದ್ಯಮಿಗಳು ಮತ್ತು ದಕ್ಷಿಣದ ಲಾಬಿ ಬೀರಿರುವ ಪ್ರಭಾವದ ಬಗ್ಗೆ ನಿಮಗೆ ಏನು ಮಾಹಿತಿ ಇತ್ತು? ನೀತಿಗೆ ಅಂತಿಮ ಅನುಮೋದನೆ ನೀಡುವ ಮುನ್ನ ಆ ಪ್ರಕ್ರಿಯೆಯಲ್ಲಿ ನೀವು ಭಾಗಿಯಾಗಿದ್ದೀರಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಕೇಜ್ರಿವಾಲ್‌ರಿಂದ ಉತ್ತರ ಪಡೆಯುವ ಯತ್ನವನ್ನು ಅಧಿಕಾರಿಗಳು ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್‌ಗೆ ಮತ್ತೊಂದು ಹಿನ್ನಡೆ, ಆಪ್‌ನ 6 ಕಾರ್ಪೋರೇಟರ್ ಬಿಜೆಪಿ ಸೇರ್ಪಡೆ!
ಅಬಕಾರಿ ಪ್ರಕರಣ ಸಂಬಂಧ ನನ್ನ ಮತ್ತು ಸಿಸೋಡಿಯಾ ಹೆಸರು ಪ್ರಸ್ತಾಪಿಸುವಂತೆ ಜನರ ಮೇಲೆ ಒತ್ತಡ ಹೇರಲಾಗುತ್ತಿದೆ. ನಮಗೆ ನಂಟೇ ಇಲ್ಲದೇ, ಪ್ರಕರಣದ ಓರ್ವ ಆರೋಪಿ ಚಂದನ್ ರೆಡ್ಡಿ ಅವರ ವೈದ್ಯಕೀಯ ವರದಿಯಲ್ಲಿ ತನಿಖೆ ವೇಳೆ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಪ್ರಸ್ತಾಪಿಸಲಾಗಿದೆ. ಆರೋಪಿತರಿಗೆ ತನಿಖಾಧಿಕಾರಿಗಳು ದೈಹಿಕ, ಮಾನಸಿಕ ಹಿಂಸೆ ನೀಡುವ ಮೂಲಕ ಸುಳ್ಳು ಹೇಳಿಕೆ ನೀಡುವಂತೆ ಮಾಡಲಾಗುತ್ತಿದೆ. ಇನ್ನೊಬ್ಬ ವ್ಯಕ್ತಿಗೆ ನಾಳೆ ನಿಮ್ಮ ಮಗಳು ಹೇಗೆ ಕಾಲೇಜಿಗೆ ಹೋಗುತ್ತಾಳೆ ಎಂದು ಬೆದರಿಕೆ ಹಾಕಿದ್ದಾರೆ. ಮತ್ತೊಬ್ಬರ ವ್ಯಕ್ತಿಯ ಪತ್ನಿ ಮತ್ತು ತಂದೆಯನ್ನು ಪಕ್ಕದ ಕೊಠಡಿಯಲ್ಲಿ ಕೂರಿಸಿ ಜೈಲಿಗೆ ಹಾಕುವ ಬೆದರಿಕೆ ಹಾಕಲಾಗಿದೆ’ಎಂದು ಕೇಜ್ರಿವಾಲ್ ಸಮನ್ಸ್ ನೀಡಿದ ಬೆನ್ನಲ್ಲೇ ಆರೋಪ ಮಾಡಿದ್ದರು.