ಬಂಧನ ಭೀತಿಯಿಂದ ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು, ಸಮನ್ಸ್ ಹಿಂಪಡೆಯಲು ಹೋರಾಟ!
ದೆಹಲಿ ಅಬಕಾರಿ ಹಗರಣದಲ್ಲಿ ಸಿಲುಕಿರುವ ದೆಹಲಿ ಆಪ್ ಸರ್ಕಾರದ ಬುಡ ಅಲುಗಾಡುತ್ತಿದೆ. ಒಬ್ಬರ ಹಿಂದೊಬ್ಬರು ಜೈಲು ಸೇರುತ್ತಿದ್ದಾರೆ. ಇಂದು ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್ ನೀಡಿತ್ತು. ಬಂಧನ ಭೀತಿಯಲ್ಲಿರುವ ಕೇಜ್ರಿವಾಲ್ ವಿಚಾರಣೆಗೆ ಗೈರಾಗಿದ್ದಾರೆ. ಇದೇ ವೇಳೆ ತಮಗೆ ನೀಡಿರುವ ಸಮನ್ಸ್ ಹಿಂಪಡೆಯಲು ಇಡಿ ವಿರುದ್ಧವೇ ಹೋರಾಟ ಆರಂಭಿಸಿದ್ದಾರೆ.

ನವದೆಹಲಿ(ನ.02) ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಬಕಾರಿ ನೀತಿ ಹಗರಣದಲ್ಲಿ ಸಂಪುಟದ ಒಬ್ಬೊಬ್ಬ ಸಚಿವರು ಜೈಲು ಸೇರುತ್ತಿದ್ದಾರೆ. ಇದೀಗ ಇದೇ ಅಬಕಾರಿ ಅಕ್ರಮ ಅರವಿಂದ್ ಕೇಜ್ರಿವಾಲ್ ಕೊರಳಿಗೆ ಸುತ್ತಿಕೊಂಡಿದೆ. ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಇತ್ತ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗಲು ಕೇಜ್ರಿವಾಲ್‌ಗೆ ಸಮನ್ಸ್ ನೀಡಿದ್ದರು. ಇದರಂತೆ ಇಂದು ಕೇಜ್ರಿವಾಲ್ ದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಬಂಧನ ಭೀತಿಯಲ್ಲಿರುವ ಕೇಜ್ರಿವಾಲ್ ವಿಚಾರಣೆಗೆ ಗೈರಾಗಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯ ದಾಳ ಉರುಳಿಸಿದ್ದಾರೆ. ತಮಗೆ ನೀಡಿರುವ ನೋಟಿಸ್ ರಾಜಕೀಯ ಪ್ರೇರಿತವಾಗಿದೆ. ಈ ಸಮನ್ಸ್ ಹಿಂಪಡೆಯಬೇಕು ಎಂದು ಹೋರಾಟ ಆರಂಭಿಸಿದ್ದಾರೆ.
ನವೆಂಬರ್ 2 ರಂದು ಬೆಳಗ್ಗೆ 11 ಗಂಟೆಗೆ ಇಡಿ ಕಚೆರಿಗೆ ವಿಚಾರಣೆ ಹಾಜರಾಗಲು ಸಮನ್ಸ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಇಂದು ಇಡಿಗೆ ಪತ್ರ ಬರೆದಿರುವ ಕೇಜ್ರಿವಾಲ್, ತಮಗೆ ನೀಡಿರುವ ಸಮನ್ಸ್ ಅಕ್ರಮವಾಗಿದೆ. ಇದು ರಾಜಕೀಯ ಪ್ರೇರಿತ.ಹೀಗಾಗಿ ತಕ್ಷಣವೇ ಈ ಸಮನ್ಸ್ ಹಿಂಪಡೆಯಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಕೇಜ್ರಿವಾಲ್‌ಗೆ ಸಂಕಷ್ಟ ಶುರು, ನಿವಾಸ ನವೀಕರಣ ಅಕ್ರಮ ಸಿಬಿಐ ತನಿಖೆಗೆ ಆದೇಶಿಸಿದ ಕೇಂದ್ರ!
ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಭೋಪಾಲ್‌ಗೆ ತೆರಳಿರುವ ಅರವಿಂದ್ ಕೇಜ್ರಿವಾಲ್ ಸಮನ್ಸ್ ಹಿಡಿದುಕೊಂಡೇ ಮತ್ತೊಂದು ರಾಜಕೀಯ ರಣತಂತ್ರ ಹೂಡಲು ಸಜ್ಜಾಗಿದ್ದರೆ. ಪಂಚ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಪ್ರಚಾರ ಆಪ್ ಪಕ್ಷಕ್ಕೆ ಅತೀ ಮುಖ್ಯವಾಗಿದೆ. ಆದರೆ ಇಡಿ ವಿಚಾರಣೆ ಬಳಿಕ ಕೇಜ್ರಿವಾಲ್ ಬಂಧನ ಸಾಧ್ಯತೆಯನ್ನು ಸ್ವತಃ ಆಪ್ ಪಕ್ಷದ ಸಚಿವರೇ ಬಹಿರಂಗಪಡಿಸಿದ್ದರು. ಇತ್ತ ಬಿಜೆಪಿ ನಾಯಕರು ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದರು. ಇಡಿ ಬಂಧನಕ್ಕೊಳಗಾದರೆ ಕನಿಷ್ಠ ಒಂದು ತಿಂಗಳು ಜೈಲಿನಲ್ಲೇ ಕೊಳೆಯಬೇಕಾಗುತ್ತದೆ. ಈ ವೇಳೆ ಪಂಚ ರಾಜ್ಯ ಚುನಾವಣೆ ಅಂತ್ಯಗೊಳ್ಳಲಿದೆ. ಇದು ಆಪ್‌ಗೆ ಬಾರಿ ಹಿನ್ನಡೆಯಾಗಲಿದೆ.
ಇದರ ಜೊತೆಗೆ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಅನ್ನೋ ಆರೋಪವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಲು ಅರವಿಂದ್ ಕೇಜ್ರಿವಾಲ್ ಇದೇ ಇಡಿ ಸಮನ್ಸ್ ಬಳಸಿಕೊಳ್ಳುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣಗಳಿಂದ ಕೇಜ್ರಿವಾಲ್ ಇಡಿ ಸಮನ್ಸ್ ಧಿಕ್ಕಿರಿಸಿದ್ದಾರೆ. ಇದೀಗ ಇಡೀ ಅಧಿಕಾರಿಗಳು ಹೊಸ ಸಮನ್ಸ್ ಹೊರಡಿಸುವ ಸಾಧ್ಯತೆ ಇದೆ. ನಿಯಮದ ಪ್ರಕಾರ ಇಡಿ ಗರಿಷ್ಠ 3 ಸಮನ್ಸ್ ನೀಡಲಿದೆ. ಬಳಿಕ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಹೊರಡಿಸಲಿದೆ.
ಕಾಂಗ್ರೆಸ್ ಮುಂದೆ ಮೈತ್ರಿ ಪ್ರಸ್ತಾವನೆ ಮುಂದಿಟ್ಟ ಆಮ್ ಆದ್ಮಿ ಪಾರ್ಟಿ, ಸೀಟು ಹಂಚಿಕೆ ಚರ್ಚೆ!