Delhi Jal Board official murder:ದೆಹಲಿ ಜಲ ಮಂಡಳಿ ಅಧಿಕಾರಿಯೊಬ್ಬರು ರೋಹಿಣಿಯಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕತ್ತಲ್ಲಿ ಚೂರಿಯಿಂದ ಇರಿದ ಗಾಯದ ಗುರುತಿದ್ದು ಅವರ ಪುತ್ರ ತಂದೆಯ ಕೊಲೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ದೆಹಲಿ ಜಲಮಂಡಳಿಯ ಹಿರಿಯ ಅಧಿಕಾರಿ ನಿಗೂಢ ಸಾವು
ನವದೆಹಲಿ: ದೆಹಲಿ ಜಲ ಮಂಡಳಿ ಅಧಿಕಾರಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅವರ ದೇಹದಲ್ಲಿ ಚೂರಿಯಿಂದ ಇರಿದ ಗಾಯದ ಗುರುತುಗಳಿದ್ದು, ಕೊಲೆಯಾದ ಶಂಕೆ ವ್ಯಕ್ತವಾಗಿದೆ. ಇವರು ರಾಷ್ಟ್ರೀಯ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ (ಎನ್‌ಎಸ್‌ಜಿ) ಮೇಜರ್ ಓರ್ವರ ತಂದೆಯೂ ಆಗಿದ್ದು, ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೀಡಾಗಿರುವ ಜಲ ಮಂಡಳಿ ಅಧಿಕಾರಿಯನ್ನು 59 ವರ್ಷದ ಸುರೇಶ್ ಕುಮಾರ್ ರಥಿ ಎಂದು ಗುರುತಿಸಲಾಗಿದೆ. ದೆಹಲಿಯ ರೋಹಿಣಿಯಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ರಕ್ತದ ಮಡುವಿನಲ್ಲಿ ಅವರು ಬಿದ್ದಿದ್ದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ
ಅಧಿಕಾರಿ ಪುತ್ರ ಎನ್‌ಎಸ್‌ಜಿ ಮೇಜರ್ ಅಂಕುರ್ ರಥಿಯಿಂದ ಪೊಲೀಸರಿಗೆ ದೂರು
ಅವರ ಮಗ ಎನ್‌ಎಸ್‌ಜಿ ಮೇಜರ್ ಅಂಕುರ್ ರಥಿ ಅವರು, ತನ್ನ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ರೋಹಿಣಿ ಸೆಕ್ಟರ್ -24 ರಲ್ಲಿ ಇರುವ ಮನೆಯಲ್ಲಿ ಈ ಘಟನೆ ನಡೆದಿದೆ.
ಕುಡಿಯುವುದಕ್ಕಾಗಿ ತಮ್ಮದೇ ಮತ್ತೊಂದು ಮನೆಗೆ ಹೋಗುತ್ತಿದ್ದ ಸುರೇಶ್‌ಕುಮಾರ್
ರಥಿ ಅವರ ಕುಟುಂಬಕ್ಕೆ ದೆಹಲಿಯ ರೋಹಿಣಿ ಸೆಕ್ಟರ್ -24ರಲ್ಲಿ ಎರಡು ಮನೆಗಳಿವೆ. ಸುರೇಶ್ ಕುಮಾರ್ ರಥಿ ಅವರು ಸಾವಿಗೀಡಾದ ಮೃತರಾದ ಮನೆಯನ್ನು ಸುಮಾರು ನಾಲ್ಕು ವರ್ಷಗಳ ಹಿಂದೆ ಖರೀದಿಸಲಾಗಿತ್ತು. ಮತ್ತೊಂದು ಮನೆ ಇದ್ದಿದ್ದರಿಂದ ಸುರೇಶ್‌ಕುಮಾರ್ ಅವರು ಅಪರೂಪಕ್ಕೆ ಈ ಮನೆಗೆ ಮದ್ಯ ಸೇವನೆಗಾಗಿ ಮಾತ್ರ ಬರುತ್ತಿದ್ದರು. ಹೀಗೆ ಬಂದ ಸಮಯದಲ್ಲೇ ಸುರೇಶ್‌ಕುಮಾರ್ ರಥಿ ನಿಧನರಾಗಿದ್ದಾರೆ. ಹೀಗೆ ಮತ್ತೊಂದು ಮನೆಗೆ ಹೋದ ರಥಿ ಎರಡು ದಿನಗಳಾದರೂ ದಿನವೂ ವಾಸ ಮಾಡುವ ತಮ್ಮ ಮೊದಲಿನ ಮನೆಗೆ ಹಿಂತಿರುಗಿರಲಿಲ್ಲ ಮತ್ತು ಫೋನ್ ಕರೆಯನ್ನು ಸ್ವೀಕರಿಸಿರಲಿಲ್ಲ, ಹೀಗಾಗಿ ಚಿಂತೆಗೀಡಾದ ಮಗ ಅಂಕುರ್ ತಮ್ಮ ತಂದೆಯನ್ನು ನೋಡಲು ಅವರಿದ್ದ ಮನೆಗೆ ಹೋದಾಗ ಮನೆ ಲಾಕ್ ಆಗಿರುವುದು ಕಂಡುಬಂದಿದೆ.
ನಂತರ ಅಂಕುರ್ ಬೇರೆ ಕೀ ಬಳಸಿ ಮನೆಯ ಬೀಗ ತೆರೆದಾಗ ಸ್ನಾನಗೃಹದಲ್ಲಿ ತನ್ನ ತಂದೆಯ ಶವ ಪತ್ತೆಯಾಗಿದೆ. ನಂತರ ಭಾನುವಾರ ಮಧ್ಯಾಹ್ನ 3:30 ರ ಸುಮಾರಿಗೆ ಅಂಕುರ್ ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಕರೆ ಮಾಡಿ ತನ್ನ ತಂದೆಯ ಕೊಲೆಯಾದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ರೊಹಿಣಿ ಪ್ರದೇಶದ ಉಪ ಪೊಲೀಸ್ ಆಯುಕ್ತ ರಾಜೀವ್ ರಂಜನ್ ತಿಳಿಸಿದ್ದಾರೆ.
ಕತ್ತಿನ ಬಲಭಾಗ ಗಾಯದ ಗುರುತು
ಸ್ಥಳಕ್ಕೆ ಬಂದ ಪೊಲೀಸರಿಗೆ ಎರಡು ಮಲಗುವ ಕೋಣೆಗಳಿರುವ ಈ ಅಪಾರ್ಟ್‌ಮೆಂಟ್‌ನ ಲಿವಿಂಗ್ ರೂಮಿನ ಮಧ್ಯದ ಮೇಜಿನ ಮೇಲೆ ಮದ್ಯದ ಬಾಟಲಿಗಳು, ಮತ್ತೊಂದು ಕೋಣೆಯಲ್ಲಿ ಮೊಬೈಲ್ ಫೋನ್, ದಾಖಲೆಗಳಿದ್ದ ಕೈಚೀಲ ಮತ್ತು ಕಾರಿನ ಕೀಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಜೊತೆಗೆ ಸುರೇಶ್ ಕುಮಾರ್ ಅವರ ಕತ್ತಿನ ಬಲಭಾಗದಲ್ಲಿ ಇರಿತದ ಗುರುತನ್ನು ಪೊಲೀಸರು ಗಮನಿಸಿದ್ದು, ಘಟನಾ ಸ್ಥಳವನ್ನು ಪರಿಶೀಲಿಸಲು ಅಪರಾಧ ತಂಡ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯವನ್ನು (FSL)ಸ್ಥಳಕ್ಕೆ ಕರೆಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ಕಳುಹಿಸಲಾಗಿದೆ.
ಪರಿಚಿತರೇ ಕೊಲೆ ಮಾಡಿರುವ ಶಂಕೆ
ತನಿಖೆ ಮುಂದುವರೆದಿದ್ದು, ಆರೋಪಿಗಳ ಪತ್ತೆಗೆ ಎಫ್‌ಐಆರ್ ದಾಖಲಿಸಲಾಗಿದ್ದು, ತಂಡ ರಚಿಸಲಾಗಿದೆ. ಸುರೇಶ್ ಅವರ ಪುತ್ರಿ ಮೇಜರ್ ಜ್ಯೋತಿ ರಥಿ, ಅವರು ಪರಿಚಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಬಲವಂತದ ಪ್ರವೇಶ ಅಥವಾ ದರೋಡೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ. ಕೊಲೆ ಮಾಡಿದವನಿಗೆ ಸುರೇಶ್‌ಕುಮಾರ್ ಅವರ ಪರಿಚಯವಿದೆ ಹಾಗೂ ಆತನ ಕೃತ್ಯದ ಉದ್ದೇಶ ಏನಿರಬಹುದು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೋಹಿಣಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಅಪರಾಧ ಸ್ಥಳಕ್ಕೆ ಭೇಟಿ ನೀಡಿದ್ದು, ಭೀಕರ ಕೊಲೆಗೆ ಕಾರಣವೇನಿರಬಹುದು ಎಂದು ತನಿಖೆ ನಡೆಸುತ್ತಿದ್ದು, ಸುತ್ತಮುತ್ತಲಿನ ಅನೇಕ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ಪೊಲೀಸರ ಪ್ರಕಾರ, ಆಭರಣಗಳು ಸೇರಿದಂತೆ ಕೆಲವು ವಸ್ತುಗಳು ಫ್ಲಾಟ್‌ನಿಂದ ಕಾಣೆಯಾಗಿರುವುದರಿಂದ ದರೋಡೆಯ ಸಮಯದಲ್ಲಿ ಈ ಕೊಲೆ ನಡೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತನ ಬಳಿ 500 ರೂ ಸಾಲ ಮಾಡಿ ಟಿಕೆಟ್ ಖರೀದಿಸಿದನಿಗೆ ಮಗುಚಿದ 11 ಕೋಟಿ ಲಾಟರಿ
ಇದನ್ನೂ ಓದಿ: ಪ್ಲಾಟ್‌ಫಾರ್ಮ್ ಬದಲು ಮತ್ತೊಂದು ಬದಿಯಲ್ಲಿ ಇಳಿದವರ ಮೇಲೆ ಚಲಿಸಿದ ರೈಲು: ನಾಲ್ವರು ಸಾವು
