ಉತ್ತರಪ್ರದೇಶದ ಮಿರ್ಜಾಪುರದ ಚುನಾರ್ ರೈಲ್ವೆ ನಿಲ್ದಾಣದಲ್ಲಿ, ಪ್ಲಾಟ್‌ಫಾರ್ಮ್ ಬದಲು ಹಳಿಗಳ ಮೇಲೆ ಇಳಿದ ನಾಲ್ವರು ಪ್ರಯಾಣಿಕರು ಮತ್ತೊಂದು ವೇಗದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಪ್ಲಾಟ್‌ಫಾರ್ಮ್ ಬದಲು ಮತ್ತೊಂದು ಕಡೆ ಹಳಿಗೆ ಇಳಿದ 4 ಪ್ರಯಾಣಿಕರು ಸಾವು
ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಮಾಡಬಾರದ ಕೆಲಸಗಳ ಬಗ್ಗೆ ಆಗಾಗ ಎಚ್ಚರಿಕೆಯನ್ನು ದೊಡ್ಡದಾದ ಮೈಕ್ ಮೂಲಕ ಉದ್ಘೋಷಕರು ಹೇಳುತ್ತಲೇ ಇರುತ್ತಾರೆ. ಚಲಿಸುವ ರೈಲಿನಿಂದ ಇಳಿಯಬೇಡಿ, ಚಲಿಸುವ ರೈಲನ್ನು ಹಿಡಿಯುವುದಕ್ಕೆ ಓಡಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಇದರ ಜೊತೆಗೆ ರೈಲು ನಿಲ್ದಾಣಕ್ಕೆ ಬಂದಾಗ ಯಾವ ಬದಿಯಿಂದ ಇಳಿಯಬೇಕು ಎಂಬುದು ಕೂಡ ಅಷ್ಟೇ ಅಗತ್ಯ. ಇಲ್ಲದೇ ಹೋದರೆ ಪ್ರಾಣವೇ ಬಲಿಯಾಗುತ್ತದೆ. ಪ್ಲಾಟ್‌ಫಾರ್ಮ್ ಇರುವ ಕಡೆಯೇ ಇಳಿಯಬೇಕು ಎಂಬುದು ರೈಲ್ವೆ ನಿಯಮ ಆದರೆ ಇಲ್ಲೊಂದು ಕಡೆ ಪ್ಲಾಟ್‌ಫಾರ್ಮ್ ಬದಲು ಮತ್ತೊಂದು ಬದಿ ಹಳಿಯ ಮೇಲೆ ಇಳಿದ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದಂತಹ ದಾರುಣ ಘಟನೆ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.
ಹಳಿಯಲ್ಲಿ ನಡೆದು ಹೋಗುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆದ ರೈಲು
ಮತ್ತೊಂದು ಬದಿ ರೈಲು ಹಳಿಯ ಮೇಲೆ ಇಳಿದ ಪ್ರಯಾಣಿಕರ ಮೇಲೆ ರೈಲೊಂದು ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಮಿರ್ಜಾಪುರದ ಚುನಾರ್ ರೈಲ್ವೆ ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಪ್ರಯಾಣಿಕರು ಹಳಿ ಮೇಲೆ ಇಳಿದ ಸಮಯದಲ್ಲೇ ಮತ್ತೊಂದು ಕಡೆಯಿಂದ ಈ ಹಳಿಯ ಮೇಲೆ ರೈಲು ಬಂದಿದ್ದು, ಹಳಿ ಮೇಲೆ ಇದ್ದವರ ಮೇಲೆ ಹರಿದು ಹೋಗಿದೆ. ಈ ರೈಲು ಬಹಳ ವೇಗವಾಗಿ ಬರುತ್ತಿತ್ತು. ಮುಂಜಾನೆ 9.30ರ ಸುಮಾರಿಗೆ ಈ ಘಟನೆ ನಡೆದಿದೆ.
ಶಾರ್ಟ್‌ಕಟ್ ಮಾಡಲು ಹೋಗಿ ಸಾವು ಆಹ್ವಾನಿಸಿದರು
ಹೀಗೆ ರೈಲಡಿಗೆ ಬಿದ್ದು ಸಾವನ್ನಪ್ಪಿದ ಪ್ರಯಾಣಿಕರು ಚೋಪನ್-ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಚುನಾರ್‌ಗೆ ಬಂದಿದ್ದರು. ಇವರು ಬಂದ ರೈಲು ಪ್ಲಾಟ್‌ಫಾರ್ಮ್ 4 ರಲ್ಲಿ ನಿಂತಿತು. ಈ ವೇಳೆ ಕೆಲವು ಪ್ರಯಾಣಿಕರು ಪ್ಲಾಟ್‌ಫಾರ್ಮ್‌ನ ಬದಲು ವಿರುದ್ಧ ದಿಕ್ಕಿಗೆ ಇಳಿದರು. ಪ್ಲಾಟ್‌ಫಾರ್ಮ್‌ನ ಪಕ್ಕದಲ್ಲಿಯೇ ಒಂದು ಪಾದಚಾರಿ ಮೇಲ್ಸೇತುವೆ ಇದ್ದರೂ ಕೂಡ ಕೆಲವರು ಹಳಿಗಳ ಮೂಲಕ ಶಾರ್ಟ್‌ಕಟ್ ಆಯ್ಕೆ ಮಾಡಿಕೊಂಡು ಸಾವನ್ನು ಆಹ್ವಾನಿಸಿಕೊಂಡಿದ್ದಾರೆ. ಹಳಿಗಳ ಮೇಲೆ ನಡೆದರೆ ಕೆಲ ಮೀಟರ್‌ಗಳಲ್ಲಿ ಅವರು ಅಲ್ಲಿಗೆ ತಲುಪಬಹುದು ಎಂದು ನಿರ್ಧರಿಸಿದ್ದೆ ಈಗ ಅವರ ಸಾವಿಗೆ ಕಾರಣವಾಗಿದೆ.
ಕಲ್ಕಾ ಹೌರಾ ಎಕ್ಸ್‌ಪ್ರೆಸ್ ರೈಲಿಗೆ ಬಲಿ
ಮುಖ್ಯ ಮಾರ್ಗವನ್ನು ದಾಟಲು ಅವರು ಹಳಿಗಳ ಮೇಲೆ ನಡೆದುಕೊಂಡು ಹೋದರು. ಆದರೆ ಇದೇ ವೇಳೆ ಅದೇ ಹಳಿಯಲ್ಲಿ ವೇಗವಾಗಿ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲನ್ನು ಅವರು ಗಮನಿಸದೇ ಹೋದರು. ಪರಿಣಾಮ ಅತೀ ವೇಗದಲ್ಲಿ ಬರುತ್ತಿದ್ದ ಕಲ್ಕಾ-ಹೌರಾ ಎಕ್ಸ್‌ಪ್ರೆಸ್ ರೈಲು ಕೆಲವೇ ಕ್ಷಣಗಳಲ್ಲಿ ಅವರಿಗೆ ಡಿಕ್ಕಿ ಹೊಡೆದಿದ್ದು, ಸಾವಿನ ಮನೆ ಸೇರಿದ್ದಾರೆ. ಅಪಘಾತದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ನಂತರ ದೃಢಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಆಡಳಿತವು ತನಿಖೆಗೆ ಆದೇಶಿಸಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆ ಸಿಎಂ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಅವರು ಸೂಚನೆ ನೀಡಿದ್ದಾರೆ. ಅಪಘಾತದ ನಂತರ ರೈಲು ನಿಲ್ದಾಣದ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಅಲ್ಲಿ ದೊಡ್ಡ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಹಿರಿಯ ರೈಲ್ವೆ ಅಧಿಕಾರಿಗಳು ಸಹ ನಿಲ್ದಾಣದಲ್ಲಿ ಹಾಜರಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ : 20 ಜನರ ಸಜೀವ ದಹನಕ್ಕೆ ಕಾರಣವಾದ ಬಸ್ಸಲ್ಲಿ ಚಿನ್ನಕ್ಕಾಗಿ ಹುಡುಕಾಟ
ಇದನ್ನೂ ಓದಿ: ಪಂಜಾಬ್‌ನಲ್ಲಿ ಮತ್ತೊಬ್ಬ ಕಬ್ಬಡಿ ಆಟಗಾರನ ಹತ್ಯೆ: ಒಂದೇ ವಾರದಲ್ಲಿ 2ನೇ ಘಟನೆ: ಹೊಣೆಹೊತ್ತ ಬಿಷ್ಣೋಯ್ ಗ್ಯಾಂಗ್
