ರೈತ ಹೋರಾಟಕ್ಕೆ ತೆರೆ: ಇಂದು ಪ್ರಕಟ ನಿರೀಕ್ಷೆ - ಕೇಂದ್ರ ಸರ್ಕಾರದ ಆಫರ್ ಬೆಂಬಲ ಬೆಲೆಗೆ ಕಾಯ್ದೆ, ರೈತರ ಕೇಸು ವಾಪಸ್ ರೈತರಿಗೆ ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ
ನವದೆಹಲಿ (ಡಿ.08): ವಿವಾದಿತ 3 ಕೃಷಿ ಕಾಯ್ದೆಗಳ (Farm law) ರದ್ದತಿ, ಬೆಂಬಲ ಬೆಲೆಗೆ ಕಾನೂನು ಮಾನ್ಯತೆ, ರೈತರ ವಿರುದ್ಧದ ಕೇಸ್‌ಗಳ ಹಿಂಪಡೆತ ಸೇರಿದಂತೆ ರೈತರ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 1 ವರ್ಷದಿಂದ ದಿಲ್ಲಿ ಹೊರವಲಯ ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ (State) ನಡೆಯುತ್ತಿರುವ ರೈತರ ಪ್ರತಿಭಟನೆ (Protest) ಅಂತ್ಯವಾಗುವ ಸುಳಿವು ಕಂಡು ಬಂದಿದೆ. ಬೆಂಬಲ ಬೆಲೆ, ರೈತರ ವಿರುದ್ಧದ ಕೇಸ್‌ಗಳ ರದ್ದತಿ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಚರ್ಚೆ ನಡೆಸುವುದಾಗಿ ಕೇಂದ್ರ ಸರ್ಕಾರವು (Govt of India) ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಐವರು ಸದಸ್ಯರ ಸಮಿತಿಗೆ ಮಂಗಳವಾರ ಲಿಖಿತ ಪ್ರಸ್ತಾವನೆ ರವಾನಿಸಿದೆ. ಇದರ ಬೆನ್ನಲ್ಲೇ ಬುಧವಾರ ಮಧ್ಯಾಹ್ನ 2 ಗಂಟೆಗೆ ಸಭೆ ಕರೆದು ಮುಷ್ಕರ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಧರಣಿನಿರತ ರೈತರ ಮಾತೃ ಸಂಸ್ಥೆಯಾದ ‘ಸಂಯುಕ್ತ ಕಿಸಾನ್ ಮೋರ್ಚಾ’ ಹೇಳಿದೆ.
ಕೇಂದ್ರ ಸರ್ಕಾರದ ಆಫರ್ :
ಕೇಂದ್ರ ಸರ್ಕಾರ (Govt Of India) ಕಳಿಸಿರುವ ಪ್ರಸ್ತಾವನೆಯಲ್ಲಿ, ‘ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡುವ ಬೇಡಿಕೆ ಈಡೇರಿಸಲು ಗಮನ ಹರಿಸಲಾಗುತ್ತದೆ. ಈ ಬೇಡಿಕೆ ಬಗ್ಗೆ ಚರ್ಚಿಸಲು ಸಮಿತಿ ರಚಿಸಲಾಗುತ್ತಿದ್ದು, ಅದರಲ್ಲಿ ಅಧಿಕಾರಿಗಳು, ಕೃಷಿ ತಜ್ಞರು ಹಾಗೂ ರೈತ ಹೋರಾಟಗಾರರು ಇರಲಿದ್ದಾರೆ’ ಎಂದು ತಿಳಿಸಲಾಗಿದೆ. ಬೆಳೆತ್ಯಾಜ್ಯ ಸುಟ್ಟ ಕಾರಣಕ್ಕೆ ರೈತರ ವಿರುದ್ಧ ದಾಖಲಾದ ಕೇಸ್‌ಗಳ ಹಿಂಪಡೆತ ಹಾಗೂ ರೈತ ಹೋರಾಟದ ವೇಳೆಯ ಪ್ರಕರಣ ಹಿಂಪಡೆತ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸಲು ಗಮನ ಹರಿಸಲಾಗುತ್ತದೆ ಎಂದು ಭರವಸೆ ನೀಡಲಾಗಿದೆ.
"
ರೈತರ ಪ್ರತಿಕ್ರಿಯೆ:
ರೈತ ನಾಯಕ ರಾಕೇಶ್ ಟಿಕಾಯತ್ (Rakesh tikayat) ಮಾತನಾಡಿ, ‘ಈ ವಿಷಯದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ತೀರ್ಮಾನ ಅಂತಿಮವಾಗಲಿದೆ. ಬುಧವಾರ ನಿರ್ಣಯ ಹೊರಬೀಳಲಿದೆ’ ಎಂದಿದ್ದಾರೆ. ರೈತ ಮುಖಂಡ ಬಲಬೀರ್ ಸಿಂಗ್ ರಾಜೇವಾಲ್, ‘ಕೇಂದ್ರದ ಈ ಸಮಿತಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹೊರತಾದ ರೈತ ಸಂಘಟನೆಗಳು ಸದಸ್ಯರಾಗಿರಲಿವೆ ಎಂದು ಸರ್ಕಾರ ಹೇಳಿದೆ. ಈ ಬಗ್ಗೆ ನಮಗೆ ಆಕ್ಷೇಪವಿದೆ. ನಮ್ಮನ್ನು ಮೊದಲಿನಿಂದಲೂ ವಿರೋಧಿಸುತ್ತಿರುವವರು ಕೇಂದ್ರ ಸಮಿತಿಯ ಭಾಗವಾಗಬಾರದು. ಈ ಕುರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಬಯಸಿದ್ದೇವೆ. ಜತೆಗೆ ರೈತರ ವಿರುದ್ಧದ ಕೇಸ್‌ಗಳನ್ನು ಹಿಂಪಡೆಯಲು ಪ್ರತಿಭಟನೆಯಿಂದ ಹಿಂದೆ ಸರಿಯಬೇಕು ಎಂಬ ಷರತ್ತನ್ನು ಕೇಂದ್ರ ವಿಧಿಸಿದೆ. ಇದಕ್ಕೆ ನಮ್ಮ ವಿರೋಧವಿದೆ’ ಎಂದು ಹೇಳಿದ್ದಾರೆ.
4 ಭರವಸೆಗಳು
1. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕಾಯ್ದೆ ರೂಪಿಸಲು ಸಮಿತಿ ರಚನೆ
2. ಬೆಂಬಲ ಬೆಲೆ ಬೇಡಿಕೆ ಕುರಿತ ಪರಿಶೀಲನೆ ಸಮಿತಿಯಲ್ಲಿ ರೈತ ನಾಯಕರಿಗೂ ಸ್ಥಾನ
2. ಕೃಷಿ ಕಾಯ್ದೆಗಳ ಹೋರಾಟದ ವೇಳೆ ರೈತರ ವಿರುದ್ಧ ದಾಖಲಾದ ಕೇಸ್‌ಗಳು ರದ್ದು
4. ದಿಲ್ಲಿ ಸುತ್ತ ಬೆಳೆತ್ಯಾಜ್ಯ ಸುಟ್ಟರೈತರ ಮೇಲೆ ದಾಖಲಿಸಿದ್ದ ಕೇಸ್‌ಗಳೂ ಕೂಡ ರದ್ದು
- ರೈತ ಹೋರಾಟಕ್ಕೆ ತೆರೆ: ಇಂದು ಪ್ರಕಟ ನಿರೀಕ್ಷೆ, ಕೇಂದ್ರ ಸರ್ಕಾರದ ಆಫರ್
- - ಬೆಂಬಲ ಬೆಲೆಗೆ ಕಾಯ್ದೆ, ರೈತರ ಕೇಸು ವಾಪಸ್
- - ರೈತರಿಗೆ ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ
- ರಾಜ್ಯಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಅಂತ್ಯವಾಗುವ ಸುಳಿವು
- ಬೆಂಬಲ ಬೆಲೆ, ರೈತರ ವಿರುದ್ಧದ ಕೇಸ್‌ಗಳ ರದ್ದತಿ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಚರ್ಚೆ
