ಪೆಟ್ರೋಲ್ ಅಥವಾ ಡೀಸೆಲ್ ವಾಹನವೇ ಆಗಿರಲಿ, ಆದರೆ EOL ಆಗಿದ್ದರೆ ಅಂತಹ ವಾಹನಗಳಿಗೆ ಇಂಧನ ಸಿಗುವುದಿಲ್ಲ. ರಾಜಧಾನಿ ವ್ಯಾಪ್ತಿಯ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಸಿಗುವುದಿಲ್ಲ. ಇಷ್ಟೇ ಅಲ್ಲ ನಿಯಮ ಉಲ್ಲಂಘಿಸಿದರೆ 5 ರಿಂದ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ.

ನವದೆಹಲಿ (ಜೂ. 30) ಕಾರು, ಬೈಕ್ ಸೇರಿದಂತೆ ಯಾವುದೇ ವಾಹನ ಖರೀದಿಸುವಾಗ ಕೆಲ ಕಡ್ಡಾಯ ನಿಯಮ ಪಾಲಿಸಬೇಕು. ಇನ್ನು ರಸ್ತೆಗಿಳಿದ ಬಳಿಕ ಟ್ರಾಫಿಕ್ ನಿಯಮ ಪಾಲನೆ ಕಡ್ಡಾಯವಾಗಿದೆ. ಯಾವುದೇ ನಿಯಮ ಉಲ್ಲಂಘಿಸಿದರೂ ದುಬಾರಿ ದಂಡ ಪಾವತಿ ಮಾತ್ರವಲ್ಲ, ವಾಹನ ಸೀಝ್ ಆಗಲಿದೆ. ಇದೀಗ ದೇಶದ ರಾಜಜಧಾನಿಯಲ್ಲಿ ಜುಲೈ 1ರಿಂದ ನಿಯಮ ಬದಲಾಗುತ್ತಿದೆ. EOL ವಾಹನಗಳಿಗೆ ರಾಜಧಾನಿ ವ್ಯಾಪ್ತಿಯ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಸಿಗುವುದಿಲ್ಲ. ಇಷ್ಟೇ ಅಲ್ಲ ನಿಯಮ ಉಲ್ಲಂಘಿಸಿ ವಾಹನ ರಸ್ತೆಗಿಳಿಸಿದರೆ 5,000 ರೂಪಾಯಿಯಿಂದ 10,000 ರೂಪಾಯಿವರೆಗೆ ದಂಡ ಪಾವತಿಬೇಕು. ಹೌದು ದೆಹಲಿ ರಾಜಧಾನಿ ವ್ಯಾಪ್ತಿಯಲ್ಲಿ ಜುಲೈ 1 ರಿಂದ ನಿಯಮ ಮತ್ತಷ್ಟು ಕಠಿಣವಾಗುತ್ತಿದೆ.

ಏನಿದು ಹೊಸ ನಿಯಮ

ಜುಲೈ 1 ರಿಂದ ಹೊಸ ನಿಯಮ ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಜಾರಿಯಾಗುತ್ತಿದೆ. ಹೊಸ ನಿಯಮದ ಪ್ರಕಾರ ಹಳೇ ವಾಹನ ಅಂದರೆ ಅವಧಿ ಮುಗಿದ ವಾಹನ (EOL ) ರಸ್ತೆಗೆ ಇಳಿಸುವಂತಿಲ್ಲ. ಈ ವಾಹನಗಳಿಗೆ ಯಾವುದೇ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ನೀಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ವಿಧಿಸುವ, ವಾಹನ ಸೀಝ್ ಮಾಡಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.

ಯಾವನ ವಾಹನ EOL?

ಪೆಟ್ರೋಲ್ ಹಾಗೂ ಡೀಸೆಲ್ ಹಳೇ ವಾಹನಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ. 15 ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನ ಹಾಗೂ 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳನ್ನು EOL ವಾಹನ ಎಂದು ಪರಿಗಣಿಸಲಾಗುತ್ತದೆ. ಈ ವಾಹನಗಳನ್ನು ರಸ್ತೆಗಿಳಿಸಲು ಹಲವು ನಿಯಮ ಪಾಲಿಸಬೇಕು. ಉದಾಹರಣೆಗೆ ಅವಧಿ ಮುಗಿದ ವಾಹನ ರಸ್ತೆಗಿಳಿಸಲು ಅಥವಾ ಓಡಾಡಲು ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕು. ಇನ್ನು ವಾಹನದ ಪಿಯುಸಿ ಸರ್ಟಿಫೀಕಟ್ ( ಮಾಲಿನ್ಯ ನಿಯಂತ್ರಣಕ್ಕೆ ಒಳಪಟ್ಟಿದೆ) ಮಾಡಿಸಬೇಕು. ಆದರೆ ಅವಧಿ ಮುಗಿದ ವಾಹನಗಳಿಗೆ ಈ ಸರ್ಟಿಫಿಕೇಟ್ ಮಾಡಿಸುವುದು ಸುಲಭದ ಕೆಲಸವಲ್ಲ. ಕಾರಣ ಮಾಲಿನ್ಯ, ವಾಹನದ ಫಿಟ್ನೆಸ್ ಸರಿಯಾಗಿದ್ದರೆ ಮಾತ್ರ ಈ ಸರ್ಟಿಫಿಕೇಟ್ ಸಿಗಲಿದೆ.

ಮಾಲಿನ್ಯ ನಿಯಂತ್ರಣಕ್ಕೆ ಕ್ರಮ

ಹೊಸ ನಿಯಮವನ್ನು ಮುಖ್ಯವಾಗಿ ದೆಹಲಿಯಲ್ಲಿ ಆಗುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸಲು ಜಾರಿಗೆ ತರಲಾಗುತ್ತಿದೆ. ಹಳೇ ವಾಹನಗಳು ಹೊಗೆ ಉಗುಳುವುದು ಹೆಚ್ಚು. ಇದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಸದ್ಯ ಹೊಸ ವಾಹನಗಳ ಎಂಜಿನ್ ಬಿಎಸ್ 6 ಎಮಿಶನ್ ನಿಯಮಕ್ಕೆ ಒಳಪಟ್ಟಿದೆ. ಹೀಗಾಗಿ ಹಳೇ ವಾಹನಗಳಿಂದ ಕಾರ್ಬನ್ ಪ್ರಮಾಣ ಹಾಗೂ ಮಾಲಿನ್ಯ ಹೆಚ್ಚಾಗುತ್ತಿದೆ. ದೆಹಲಿ ಅಂಟಿಕೊಂಡಿರುವ ಅತೀ ಮಾಲಿನ್ಯ ನಗರ ಅನ್ನೋ ಹಣೆ ಪಟ್ಟಿ ತೆಗೆದು ಹಾಕಲು ಇದೀಗ ಬಿಜೆಪಿ ಸರ್ಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಪೆಟ್ರೋಲ್ ಬಂಕ್‌ಗಳಲ್ಲಿ ಎಎನ್‌ಪಿಆರ್ ಅಳವಡಿಕೆ

ಹಳೇ ವಾಹನ, 15 ವರ್ಷ ಅಥವಾ 10 ವರ್ಷ ಮೇಲ್ಪಟ್ಟ ವಾಹನ ಎಂದು ಪತ್ತೆ ಹಚ್ಚುವುದು ಪೆಟ್ರೋಲ್ ಬಂಕ್ ಸಿಬ್ಬಂದಿಗಳಿಗೆ ತಲೆನೋವಾಗಲಿದೆ. ಇದಕ್ಕಾಗಿ ದೆಹಲಿ ಸರ್ಕಾರ ಸದ್ಯ 500 ಪೆಟ್ರೋಲ್ ಬಂಕ್‌ಗಳಲ್ಲಿ ಎಎನ್‌ಪಿಆರ್ ( ಆಟೋಮೇಟೆಡ್ ಪ್ಲೇಟ್ ರೆಕಗ್ನೀಶನ್) ಕ್ಯಾಮೆರಾ ಅಳವಡಿಸಿದೆ. ಈ ಎಐ ಕ್ಯಾಮೆರಾಗಳು ಪೆಟ್ರೋಲ್ ಬಂಕ್‌ಗೆ ಬರವು ವಾಹನಗಳ ಮಾಹಿತಿ ನೀಡಲಿದೆ. ತಕ್ಷಣಕ್ಕೆ ವಾಹನದ ಅವಧಿ ಮುಗಿದಿದೆಯಾ ಅಥವಾ ಮಾನ್ಯವಾಗಿದೆಯಾ ಅನ್ನೋದು ಸೂಚಿಸಲಿದೆ. ಈ ಮೂಲಕ ಪೆಟ್ರೋಲ್ ಬಂಕ್ ಮಾಲೀಕರು ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಿಕೊಳ್ಳಲು ಅನುವು ಮಾಡಿಕೊಡುತ್ತಿದೆ.

ದಂಡದ ಸ್ವರೂಪ

ಅವಧಿ ಮುಗಿದ ವಾಹನವಾಗಿದ್ದರೆ ದಂಡ ಖಚಿತ. ಅದು ನಾಲ್ಕು ಚಕ್ರದ ವಾಹನವಾಗಿದ್ದರೆ ಗರಿಷ್ಠ 10,00 ರೂಪಾಯಿ, ದ್ವಿಚಕ್ರ ವಾಹನವಾಗಿದ್ದರೆ 5,000 ರೂಪಾಯಿ ದಂಡ ಹಾಕಲಾಗುತ್ತದೆ.