ಕೇಜ್ರಿವಾಲ್ ಸಿಂಹ ಇದ್ದಂತೆ, ಜಾಸ್ತಿ ದಿನ ಅವರನ್ನ ಜೈಲಿನಲ್ಲಿ ಇರಿಸಲಾಗದು: ಸುನಿತಾ ಕೇಜ್ರಿವಾಲ್!
ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರದರ್ಶನವಾಗಿದೆ. ಅರವಿಂದ್ ಕೇಜ್ರಿವಾಲ್ ಬಂಧನದ ಹಿನ್ನಲೆಯಲ್ಲಿ ಭಾನುವಾರ ರಾಮಲೀಲಾ ಮೈದಾನದಲ್ಲಿ ನಡೆದ 'ಲೋಕತಂತ್ರ ಬಚಾವೋ' ಸಮಾವೇಶದಲ್ಲಿ ಇಂಡಿಯಾ ಮೈತ್ರಿಯ ನಾಯಕರು ಒಗ್ಗೂಡಿದರು.
ನವದೆಹಲಿ (ಮಾ.31): ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಇಡಿ ಬಂಧನದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ಭಾನುವಾರ ರಾಮಲೀಲಾ ಮೈದಾನದಲ್ಲಿ ಬೃಹತ್ ಲೋಕತಂತ್ರ ಬಚಾವೋ ಸಮಾವೇಶ ನಡೆಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರೊಂದಿಗೆ ಇಡಿ ಬಂಧನಕ್ಕೆ ಒಳಗಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ, ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಪತ್ನಿ ಕಲ್ಪನಾ ಸೊರೆನ್ ಕೂಡ ಹಾಜರಿದ್ದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಎನ್‌ಸಿಪಿ (ಶರದ್‌ಚಂದ್ರ ಪವಾರ್) ನಾಯಕ ಶರದ್ ಪವಾರ್, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಕೂಡ ಸಮಾವೇಶದಲ್ಲಿ ಹಾಜರಿದ್ದರು.
ಈ ವೇಳೆ ಮಾತನಾಡಿದ ಸುನಿತಾ ಕೇಜ್ರಿವಾಲ್, ತಮ್ಮ ಪತಿ ಸಿಂಹ ಇದ್ದಂತೆ, ಜಾಸ್ತಿ ದಿನ ಅವರನ್ನು ಜೈಲಿನಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. 'ನಿಮ್ಮ ಪ್ರೀತಿಯ ಅರವಿಂದ್ ಕೇಜ್ರಿವಾಲ್ ನಿಮಗಾಗಿ ಜೈಲಿನಿಂದ ಸಂದೇಶ ಕಳಿಸಿದ್ದಾರೆ. ಅದನ್ನು ಓದುವ ಮುನ್ನ ನಾನು ನಿಮಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನಮ್ಮ ಪ್ರಧಾನಿ ನರೇಂದ್ರ ಮೋದಿ, ನನ್ನ ಪತಿಯನ್ನು ಜೈಲಿಗೆ ಕಳಿಸಿದ್ದಾರೆ. ಪ್ರಧಾನಿ ಮೋದಿ ಮಾಡಿದ್ದು ಸರಿ ಇದೆಯೇ? ನೀವು ಕೇಜ್ರಿವಾಲ್ ಅವರನ್ನು ಅಪ್ಪಟ ದೇಶಭಕ್ತ ಹಾಗೂ ಪ್ರಾಮಾಣಿಕ ವ್ಯಕ್ತಿ ಎಂದು ನಂಬುತ್ತೀರಾ? ಜೈಲಿನಲ್ಲಿರುವ ಕೇಜ್ರಿವಾಲ್, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅವರು ರಾಜೀನಾಮೆ ನೀಡಬೇಕೇ? ನಿಮ್ಮ ಕೇಜ್ರಿವಾಲ್ ಸಿಂಹ ಇದ್ದಂತೆ, ಅವರು ಜಾಸ್ತಿ ದಿನ ಜೈಲಿನಲ್ಲಿ ಕೇಜ್ರಿವಾಲ್‌ರನ್ನು ಇಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಕೋಟಿ ಜನರ ಹೃದಯದಲ್ಲಿ ಇದ್ದಾರೆ. ಅವರು ಎಷ್ಟು ಸಾಹಹ ಹಾಗೂ ಧೈರ್ಯದಿಂದ ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ನನಗೆ ಅನಿಸುತ್ತದೆ, ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶಕ್ಕಾಗಿ ಹೋರಾಟ ಮಾಡಿ ಸಾವು ಕಂಡ ವ್ಯಕ್ತಿಯಾಗಿದ್ದರು. ಈ ಜನ್ಮದಲ್ಲೂ ಕೇಜ್ರಿವಾಲ್ ಭಾರತ ಮಾತೆಯ ಸಂಘರ್ಷಕ್ಕಾಗಿ ಕಳುಹಿಸಿಕೊಟ್ಟಿದ್ದಾಳೆ ಅನಿಸುತ್ತದೆ ಎಂದಿದ್ದಾರೆ.
ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಅವರ ಸಂದೇಶವನ್ನು ಸುನಿತಾ ಓದಿದ್ದಾರೆ. 'ನಾನು ಇಂದು ಮತ ಕೇಳುತ್ತಿಲ್ಲ ನವ ಭಾರತ ನಿರ್ಮಾಣಕ್ಕೆ 140 ಕೋಟಿ ಭಾರತೀಯರನ್ನು ಆಹ್ವಾನಿಸುತ್ತಿದ್ದೇನೆ. ಭಾರತ ಸಾವಿರಾರು ವರ್ಷಗಳ ನಾಗರಿಕತೆ ಹೊಂದಿರುವ ಮಹಾನ್ ರಾಷ್ಟ್ರ. ಜೈಲಿನೊಳಗಿಂದ ಭಾರತಮಾತೆಯ ಬಗ್ಗೆ ಯೋಚಿಸುತ್ತೇನೆ ಮತ್ತು ಆಕೆ ನೋವಿನಲ್ಲಿದ್ದಾಳೆ. ನವ ಭಾರತ ನಿರ್ಮಾಣ ಮಾಡೋಣ. ಇಂಡಿಯಾ ಮೈತ್ರಿಕೂಟಕ್ಕೆ ಅವಕಾಶ ನೀಡಿದರೆ ನವ ಭಾರತ ನಿರ್ಮಾಣ ಮಾಡುತ್ತೇವೆ. ಇಂಡಿಯಾ ಮೈತ್ರಿಕೂಟದ ಪರವಾಗಿ 6 ಭರವಸೆಗಳನ್ನು ನೀಡುತ್ತೇನೆ. ಮೊದಲನೆಯದಾಗಿ, ಇಡೀ ದೇಶದಲ್ಲಿ ವಿದ್ಯುತ್ ಕಡಿತ ಇರುವುದಿಲ್ಲ. ಎರಡನೆಯದಾಗಿ, ಬಡ ಜನರಿಗೆ ವಿದ್ಯುತ್ ಉಚಿತ. ಮೂರನೆಯದಾಗಿ, ಪ್ರತಿ ಹಳ್ಳಿಯಲ್ಲೂ ಸರ್ಕಾರಿ ಶಾಲೆಗಳನ್ನು ಮಾಡುತ್ತೇವೆ. ನಾಲ್ಕನೆಯದಾಗಿ, ನಾವು ಪ್ರತಿ ಹಳ್ಳಿಯಲ್ಲಿ ಮೊಹಲ್ಲಾ ಕ್ಲಿನಿಕ್‌ಗಳನ್ನು ಮಾಡುತ್ತೇವೆ. ಪ್ರತಿ ಜಿಲ್ಲೆಯಲ್ಲೂ ಮಲ್ಟಿ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಮಾಡುತ್ತೇವೆ. ಎಲ್ಲರಿಗೂ ಉಚಿತ ಚಿಕಿತ್ಸೆ ದೊರೆಯುವಂತೆ ಮಾಡುತ್ತೇವೆ. ಐದನೆಯದಾಗಿ, ರೈತರಿಗೆ ಬೆಳೆಗಳಿಗೆ ಸರಿಯಾದ ಬೆಲೆ ನೀಡುತ್ತೇವೆ. ಆರನೆಯದಾಗಿ ದೆಹಲಿಯ ಜನತೆ 75 ವರ್ಷಗಳಿಂದ ಅನ್ಯಾಯವನ್ನು ಎದುರಿಸಿದ್ದಾರೆ... ದೆಹಲಿಗೆ ರಾಜ್ಯ ಸ್ಥಾನಮಾನ ನೀಡುತ್ತೇವೆ... ಈ 6 ಭರವಸೆಗಳನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸುತ್ತೇವೆ. ಈ ಗ್ಯಾರಂಟಿಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ನಾನು ಎಲ್ಲಾ ಯೋಜನೆಗಳನ್ನು ಮಾಡಿದ್ದೇನೆ..' ಎಂದು ಹೇಳಿದ್ದಾರೆ.
ಪತ್ನಿ ಸುನಿತಾಗೆ ಕೇಜ್ರಿವಾಲ್ ಉತ್ತರಾಧಿಕಾರಿ ಪಟ್ಟ? ಸಿಎಂ ರೇಸ್‌ನಲ್ಲಿದ್ದಾರೆ ಮೂವರು!
ಇದೇ ಸಮಾವೇಶದಲ್ಲಿ ಮಾತನಾಡಿದ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಪತ್ನಿ ಕಲ್ಪನಾ ಸೊರೆನ್,' ಸರ್ವಾಧಿಕಾರದ ವಿರುದ್ಧ (ದೇಶದಲ್ಲಿ) ಇಂದು ಈ ಐತಿಹಾಸಿಕ 'ಸಂಕಲ್ಪ ಸಭೆ'ಯನ್ನು ಆಯೋಜಿಸಲಾಗುತ್ತಿದೆ. ಇಂದು ಇಲ್ಲಿಗೆ ಬಂದಿರುವ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ, ಇದು ಇಂಡಿಯಾ ಮೈತ್ರಿಯನ್ನು ಬಲಪಡಿಸುತ್ತದೆ' ಎಂದು ಹೇಳಿದ್ದಾರೆ.
ಇಂದು ದಿಲ್ಲಿಯಲ್ಲಿ ಇಂಡಿಯಾ ಕೂಟದ ಶಕ್ತಿ ಪ್ರದರ್ಶನ: ಲೋಕತಂತ್ರ ಬಚಾವೋ ರ್‍ಯಾಲಿ
'ಭಾರತದ ಶೇಕಡಾ 50 ರಷ್ಟು ಮಹಿಳಾ ಜನಸಂಖ್ಯೆ ಮತ್ತು ಶೇಕಡಾ 9 ರಷ್ಟು ಬುಡಕಟ್ಟು ಸಮುದಾಯದ ಧ್ವನಿಯಾಗಿ ನಾನು ನಿಮ್ಮ ಮುಂದೆ ನಿಂತಿದ್ದೇನೆ...ಇಂದು ಈ ಐತಿಹಾಸಿಕ ನೆಲದಲ್ಲಿ ನಡೆಯುತ್ತಿರುವ ಈ ಸಭೆಯು ದೇಶದ ಪ್ರತಿಯೊಂದು ಭಾಗದಿಂದ ಬಂದಿದ್ದೀರಿ ಎಂಬುದಕ್ಕೆ ಸಾಕ್ಷಿಯಾಗಿದೆ. ಸರ್ವಾಧಿಕಾರವನ್ನು ಕೊನೆಗಾಣಿಸುತ್ತೇವೆ' ಎಂದು ಹೇಳಿದ್ದಾರೆ.