ದೆಹಲಿ ಸ್ಫೋಟ ಪ್ರಕರಣ, ವಿಮಾನ ಪ್ರಯಾಣಿಕರಿಗೆ ಬೆಂಗಳೂರು ಏರ್‌ಪೋರ್ಟ್‌ನಿಂದ ವಿಶೇಷ ಸೂಚನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರು ವಿಮಾನ ನಿಲ್ದಾಣ ಮಹತ್ವದ ಸೂಚನೆ ನೀಡಿದೆ.

ಬೆಂಗಳೂರು (ನ.11) ದೆಹಲಿ ಕೆಂಪು ಕೋಟೆ ಬಳಿ ನಡೆದಿರುವ ಕಾರು ಸ್ಫೋಟ ಪ್ರಕರಣ ದೇಶದ ಮೇಲೆ ನಡೆದ ದಾಳಿಯಾಗಿದೆ. ಭಯೋತ್ಪಾದಕರ ಕೃತ್ಯ ಅನ್ನೋದಕ್ಕೆ ಹಲವು ದಾಖಲೆಗಳು ಲಭ್ಯವಾಗಿದೆ. ಈ ಕಾರು ಸ್ಫೋಟ ಪ್ರಕರಣದಲ್ಲಿ 10 ಮಂದಿ ಮೃತಪಟ್ಟಿದ್ದರೆ, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎನ್ಐಎ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಪ್ರಕರಣ ಸಂಬಂಧ ಕೆಲ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸ್ಪೋಟ ಪ್ರಕರಣದಿಂದ ದೇಶದ ಎಲ್ಲಾ ನಗರ, ಪಟ್ಟಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೋ ಸೇರಿದಂತೆ ಜನ ನಿಬಿಡ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೈ ಅಲರ್ಟ್ ಘೋಷಣೆ ಬೆನ್ನಲ್ಲೇ ಬೆಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಮಹತ್ವದ ಸೂಚನೆ ನೀಡಿದೆ.

ಬೆಂಗಳೂರು ವಿಮಾನ ಪ್ರಯಾಣಿಕರಿಗೆ ವಿಶೇಷ ಮನವಿ

ದೆಹಲಿಯ ಕೆಂಪು ಕೋಟೆಯ ಬಳಿ ಸ್ಫೋಟ‌ ಪ್ರಕರಣದಿಂದ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ತಪಾಸಣೆ ಪ್ರಕ್ರಿಯೆಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಏರ್ಪೋರ್ಟ್ ಆಡಳಿತ ಮಂಡಳಿಯಿಂದ ಪ್ರಯಾಣಿಕರಲ್ಲಿ ಮನವಿ ಮಾಡಲಾಗಿದೆ. ಅವಧಿಗಿಂತ ಮುಂಚಿತವಾಗಿ ಆಗಮಿಸುವಂತೆ ಮನವಿ ಮಾಡಿದೆ. ತೀವ್ರ ತಪಾಸಣೆ ಪ್ರಕ್ರಿಯೆ ನಡೆಯುತ್ತಿರುವ ಕಾರಣ ವಿಳಂಬವಾಗಲಿದೆ ಎಂದಿದೆ.

ಭದ್ರತಾ ಪರಿಶೀಲನೆ ಪೂರ್ಣಗೊಳಿಸಲು ಸಾಕಷ್ಟು ಸಮಯ ಬೇಕು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಬೇಗ ಏರ್ಪೋರ್ಟ್‌ಗೆ ಆಗಮಿಸಿ ತಪಾಸಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇದರಿಂದ ನಿಮ್ಮ ಪ್ರಯಾಣಕ್ಕೂ ಅನುಕೂಲವಾಗಲಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮನವಿ ಮಾಡಲಾಗಿದೆ ಎಂದು ಬೆಂಳೂರು ವಿಮಾನ ನಿಲ್ದಾಣ ಆಡಳಿತ ಮಂಡಳಿ ಮನವಿ ಮಾಡಿದೆ.

ದೆಹಲಿ ಸ್ಫೋಟದ ಹಿಂದೆ ಫರೀದಾಬಾದ್ ಉಗ್ರರ ಸಂಚು

ಹರ್ಯಾಣದ ಫರೀದಾಬಾದ್‌ನಲ್ಲಿ ನಿನ್ನೆ (ನ.10) ವೈದ್ಯರ ಮನೆಯಿಂದ 2900 ಕೆಜಿ ಸ್ಫೋಟಕ ವಶ ಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣ ಸಂಬಂಧ ಮೂವರು ವೈದ್ಯರ ಸೋಗಿನಲ್ಲಿದ್ದ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಇಂದು ದೆಹಲಿ ಸ್ಫೋಟ ಪ್ರಕರಣ ಸಂಬಂಧ ಮತ್ತಿಬ್ಬರು ವೈದ್ಯರನ್ನು ಅರೆಸ್ಟ್ ಮಾಡಲಾಗಿದೆ. ಫರೀಬಾದ್ ಸೆಕ್ಟರ್ 56ರಲ್ಲಿ ಸ್ಫೋಟಕ ವಶಕ್ಕ ಪಡೆಯಲಾಗಿತ್ತು. ಬೆಳಗ್ಗೆ ಸ್ಫೋಟಕ ವಶಪಡಿಸಿಕೊಂಡಿದ್ದರೆ, ಸಂಜೆ ದೆಹಲಿಯಲ್ಲಿ ಫರೀದಾಬಾದ್ ಸಂಪರ್ಕದಲ್ಲಿದ್ದವರೆ ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟಿಸಿ 10 ಜನರ ಸಾವಿಗೆ ಕಾರಣರಾಗಿದ್ದಾರೆ. ಜೈಷ್ ಎ ಮೊಮ್ಮದ್ ಮಹಿಳಾ ಘಟದ ನೇತೃತ್ವದ ವಹಿಸಿದ ಫರೀದಾಬಾದ್ ವೈದ್ಯೆ ಶಾಹೀನ್ ಕೂಡ ಅರೆಸ್ಟ್ ಆಗಿದ್ದಾರೆ. ಈ ಮಹಿಳಾ ಉಗ್ರ ಕಾರಿನಿಂದ ಸ್ಫೋಟಕ ವಶಪಡಿಸಿಕೊಳ್ಳಲಾಗಿದೆ.