ದೆಹಲಿ ಬ್ಲಾಸ್ಟ್ ಪ್ರಕರಣ, ಬೆಂಗಳೂರು ಸೇರಿ ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅನುಮಾನಸ್ಪದ ವ್ಯಕ್ತಿಗಳು, ಸ್ಥಳಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ವಾಹನ ತಪಾಸಣೆ ಸೇರಿದಂತೆ ಎಲ್ಲಾ ಕಡೆ ಕಟ್ಟೆಚ್ಚರ ವಹಿಸಲು ಸೂಚನೆ

ಬೆಂಗಳೂರು (ನ.10) ದೆಹಲಿ ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣ ಸಮೀಪ ಸಂಭವಿಸಿದ ಭಾರಿ ಸ್ಫೋಟದಲ್ಲಿ 8 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಿಲ್ಲಿಸಿದ್ದ ಎರಡು ಕಾರು ಸ್ಫೋಟಗೊಂಡು ಘಟನೆ ನಡೆದಿದೆ. ಇದು ಭಯೋತ್ಪಾದಕರ ಕೃತ್ಯ ಎಂದು ಶಂಕಿಸಲಾಗಿದೆ. ದೇಶದಲ್ಲಿ ಸಂಭವಿಸಿದ ಅತೀ ದೊಡ್ಡ ಸ್ಫೋಟ ಪ್ರಕರಣದಲ್ಲಿ ಇದೀಗ ದೆಹಲಿ ಕಾರು ಸ್ಫೋಟ ಸೇರಿಕೊಂಡಿದೆ. ಈ ಘಟನೆ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಹಾಗೂ ಕರ್ನಾಟಕದಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ

ರಾಜ್ಯಾದ್ಯಂತ ಹೈ ಅಲರ್ಟ್

ದೆಹಲಿ ಸ್ಫೋಟದ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಇತ್ತ ಮುಂಬೈನಲ್ಲೂ ಹೈಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ ಹೈ ಅಲರ್ಟ್ ಘೋಷಿಲಾಗಿದೆ. ರಾಜ್ಯಾದ್ಯಂತ ಹೈ ಅಲರ್ಟ್ ಇರುವಂತೆ ಡಿಜಿ& ಐಜಿಪಿ ಸೂಚಿಸಿದ್ದಾರೆ. ರಾಜ್ಯದ ಸೂಕ್ಷ್ಮ ಪ್ರದೇಶ, ಜನ ನಿಭಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಚೀತಾ , ಹೊಯ್ಸಳ , ಬೀಟ್ ಪೊಲೀಸರು ಅಲರ್ಟ್ ಇರುವಂತೆ ಸೂಚಿಸಲಾಗಿದೆ. ರಾಜ್ಯಾದ್ಯಂತ ಎಲ್ಲಾ ಎಸ್ ಪಿ ಗಳಿಗೂ ಡಿಜಿ ಕಚೇರಿಯಿಂದ ಸೂಚನೆ ನೀಡಲಾಗಿದೆ.

ನಗರ ಪ್ರದೇಶದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಹೈ ಅಲರ್ಟ್ ಸೂಚಿಸಲಾಗಿದೆ. ಕೂಡಲೇ ಠಾಣಾ ವ್ಯಾಪ್ತಿಯಲ್ಲಿ ಗಸ್ತು, ಕೇಂದ್ರ ಸರ್ಕಾರದ ಅಧೀನದ ಕಚೇರಿಗಳ ಭದ್ರತೆಗೆ ಸೂಚನೆ ನೀಡಲಾಗಿದೆ. ಅನುಮಾನಸ್ಪದ ವ್ಯಕ್ತಿಗಳ ಸ್ಥಳಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ. ಲಾಡ್ಜ್‌ನಲ್ಲಿ ತಂಗಿರೋ ಹೊರ ರಾಜ್ಯದವರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಇದರ ಜೊತೆಗೆ ರಾತ್ರಿಯೂ ಗಸ್ತು ಹೆಚ್ಚಳ, ಬಸ್ ನಿಲ್ದಾಣ ಮೆಟ್ರೋ ನಿಲ್ದಾಣಗಳಲ್ಲೂ ನಿಗಾ ಇಡಲು ಸೂಚಿಸಲಾಗಿದೆ. ನಗರ ಪೊಲೀಸ್ ಆಯುಕ್ತರಿಂದ ನಗರದ ಎಲ್ಲಾ ಇನ್ಸ್ಪೆಕ್ಟರ್,ಎಸಿಪಿ,ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.

ಭಯೋತ್ಪಾದ ಕೃತ್ಯದ ಅನುಮಾನ ಹೆಚ್ಚಳ, ಓರ್ವ ಅರೆಸ್ಚ್

ದೆಹಲಿಯಲ್ಲಿ ಸಂಭವಿಸಿದ ಕಾರು ಸ್ಫೋಟ ಭಯೋತ್ಪಾದಕರು ನಡೆಸಿದ ಕೃತ್ಯ ಅನ್ನೋದು ಮೇಲ್ನೋಟಕ್ಕೆ ಪತ್ತೆಯಾಗುತ್ತಿದೆ. ಈ ಸ್ಫೋಟ ಸಂಬಂಧ ಓರ್ವ ಶಂಕಿತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಂದು ದೆಹಲಿಯ ಫರೀದಾಬಾದ್‌ನಲ್ಲಿ ಸುಮಾರು 2900 ಕೆಜಿ ಸ್ಫೋಟಕಗಳನ್ನು ಪೊಲೀಸರು ಪತ್ತೆ ಹಚ್ಚಿ ಮೂವಕು ಶಂಕಿತ ಉಗ್ರರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣ ಸಮೀಪವೇ ಕಾರು ಸ್ಫೋಟ ಸಂಭವಿಸಿದೆ. ಇದು ಉಗ್ರರ ಕೃತ್ಯ ಅನ್ನೋ ಅನುಮಾನಗಳನ್ನು ಹೆಚ್ಚಾಗುವಂತೆ ಮಾಡಿದೆ. ಸ್ಥಳಕ್ಕೆ ಎನ್ಐಎ ಅಧಿಕಾರಿಗಳ ತಂಡ ಧಾವಿಸಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.