ಇತ್ತೀಚೆಗೆ ದೆಹಲಿಯಲ್ಲಿ ಕಾರು ಚಾಲಕನನ್ನು ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕಾರನ್ನು ನಡುರಸ್ತೆಯಲ್ಲಿ ಅಡ್ಡಹಾಕಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಪರಾರಿಯಾಗಿದ್ದರು.
ನವದೆಹಲಿ: ಇತ್ತೀಚೆಗೆ ದೆಹಲಿಯಲ್ಲಿ ಕಾರು ಚಾಲಕನನ್ನು ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕಾರನ್ನು ನಡುರಸ್ತೆಯಲ್ಲಿ ಅಡ್ಡಹಾಕಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಪರಾರಿಯಾಗಿದ್ದರು. ಆದರೆ ಕಾರು ಚಾಲಕನ ಅದೃಷ್ಟ ಎಂಬಂತೆ ಕಾರಿನ ಮುಂಭಾಗದಲ್ಲಿದ್ದ ಕ್ಯಾಮರಾ ದುಷ್ಕರ್ಮಿಗಳ ಕೃತ್ಯವನ್ನು ಸೆರೆ ಹಿಡಿದಿದ್ದು, ಈಗ ಹಲ್ಲೆಕೋರರನ್ನು ಕಂಬಿ ಹಿಂದೆ ಕೂರಿಸುವಲ್ಲಿ ಯಶಸ್ವಿಯಾಗಿದೆ.
ಹಲ್ಲೆಗೊಳಗಾದ ಕಾರು ಚಾಲಕ ಈ ದೃಶ್ಯವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಅದರಂತೆ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಈಗ ದೆಹಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಪ್ರವೀಣ್ ಜಂಗ್ರಾ ಅವರು ಈ ದೃಶ್ಯವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಕೆಲ ಕಿಡಿಗೇಡಿಗಳು ನನ್ನನ್ನು ರಸ್ತೆ ಮಧ್ಯೆ ನಿಲ್ಲಿಸಿ ಥಳಿಸಿದ್ದಾರೆ. ಇದೆಲ್ಲ ನಡೆದಿದ್ದು ನಂಗ್ಲೋಯ್ ರೈಲು ನಿಲ್ದಾಣ ಸಮೀಪದ ಮೆಟ್ರೋ ಬಳಿ. ದೇಶದ ರಾಜಧಾನಿಯಲ್ಲಿ ಈ ರೀತಿಯ ಗೂಂಡಾಗಿರಿ ಸಾಮಾನ್ಯವಾಗಿದೆ. @ದೆಹಲಿ ಪೋಲೀಸರು (Delhi police) ಈ ಬಗ್ಗೆ ಪರಿಶೀಲನೆ ನಡೆಸಿ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬರೆದುಕೊಂಡ ಅವರು ಅದನ್ನು ದೆಹಲಿ ಪೊಲೀಸರಿಗೆ ಟ್ವಿಟ್ ಟ್ಯಾಗ್ ಮಾಡಿದ್ದರು.
ಗಂಡ ಹೆಂಡತಿ ಮಧ್ಯೆ ಜಗಳ ತಂದಿಟ್ಟ ಟ್ರಾಫಿಕ್ ಕ್ಯಾಮರಾ... ಜೈಲು ಪಾಲಾದ ಗಂಡ
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು, ಕೂಡಲೇ ಕಾರ್ಯಾಚರಣೆಗೆ ಇಳಿದಿದ್ದು, ದಾರಿಮಧ್ಯೆ ಕಾರು ಚಾಲಕನನ್ನು ಅಡ್ಡ ಹಾಕಿ ಥಳಿಸಿದ ನಾಲ್ವರು ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ದೆಹಲಿ ಪೊಲೀಸರು ಪ್ರವೀಣ್ ಜಂಗ್ರಾ (Praveen Jangra) ಅವರ ವಿಡಿಯೋವನ್ನು ಶೇರ್ ಮಾಡಿಕೊಂಡು ಅವರು ಹೀಗೆ ಮಾಡಿದರು ನಾವು ಹೀಗೆ ಮಾಡಿದೆವು ಎಂದು ಬಂಧಿತರ ಫೋಟೋ ಜೊತೆ ಟ್ವಿಟ್ ಮಾಡಿದ್ದಾರೆ.
ವೀಡಿಯೋದಲ್ಲಿ ಕಾಣಿಸುವಂತೆ ಮೂರು ರಾಯಲ್ ಎನ್‌ಫೀಲ್ಡ್‌ನಲ್ಲಿ (Royal enfield) ಬಂದ ನಾಲ್ವರು ನಡುರಸ್ತೆಯಲ್ಲಿ ಕಾರಿನ ಮುಂದೆ ಬೈಕ್ ತಂದು ಅಡ್ಡ ನಿಲ್ಲಿಸಿ ಕಾರು ಚಾಲಕನ ಬಳಿ ಬರುವುದು ಕಾಣಿಸುತ್ತದೆ. ನಂತರ ಕಾರು ಚಾಲಕನಿಗೆ ಅವಾಚ್ಯವಾಗಿ ನಿಂದಿಸುವುದು ಕೇಳಿಸುತ್ತಿದೆ. ಈ ವೇಳೆ ಕಾರು ಚಾಲಕ (car driver) ತನ್ನ ಮೇಲೆ ಹಲ್ಲೆಗೆ ಕಾರಣ ಏನು ಎಂದು ಕೇಳುತ್ತಿರುವುದು ಹಾಗೂ ಕ್ಷಮಿಸುವಂತೆ ಕೇಳುವುದು ಕೇಳಿಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗಿದೆ ಎಂದು ದೆಹಲಿ ಡೆಪ್ಯೂಟಿ ಕಮೀಷನರ್ ಹರೇಂದ್ರ ಕೆ. ಸಿಂಗ್ ಟ್ವಿಟ್ ಮಾಡಿದ್ದಾರೆ.