ನವದೆಹಲಿ (ನ. 13): ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ಸೃಷ್ಟಿಯಾಗಿರುವ ವಾಯುಮಾಲಿನ್ಯದ ಬಗ್ಗೆ ಪಂಜಾಬ್‌, ಹರ್ಯಾಣ ಹಾಗೂ ಉತ್ತರ ಪ್ರದೇಶ ಸರ್ಕಾರಗಳ ಮೇಲೆ ಮತ್ತೆ ಬೆಂಕಿ ಕಾರಿರುವ ಸುಪ್ರೀಂ ಕೋರ್ಟ್‌, ‘ಬೆಳೆ ತ್ಯಾಜ್ಯ ಸುಡುವ ರೈತರು ವಾಯುಮಾಲಿನ್ಯಕ್ಕೆ ಕಾರಣ ಎಂದು ಕೇವಲ ರೈತರ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಿ. ಬೆಳೆ ತ್ಯಾಜ್ಯ ಸುಡುವಿಕೆ ತಡೆಯಲು ವಿಫಲರಾದ ಅಧಿಕಾರಿಗಳಿಗೆ ಶಿಕ್ಷೆ ನೀಡುವ ಸಮಯ ಬಂದಿದೆ’ ಎಂದು ಖಡಕ್‌ ನುಡಿಗಳನ್ನಾಡಿದೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಸರಿಯಾಗುವುದು ಮನೋಜ್ ತಿವಾರಿ ಹೇಳಿದ್ದು ಕೇಳಿದರೆ..!

ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬುಧವಾರ ಮುಂದುವರಿಸಿದ ನ್ಯಾ

ಅರುಣ್‌ ಮಿಶ್ರಾ ಅವರ ನೇತೃತ್ವದ ಪೀಠ, ‘ದಿಲ್ಲಿ ಹಾಗೂ ಸುತ್ತಲಿನ ಜನರ ಸಾವು-ಬದುಕಿನ ಪ್ರಶ್ನೆ ಇದು. ಇದಕ್ಕೆ ನೀವು ಅವಕಾಶ ನೀಡುತ್ತೀರಾ? ದೇಶವನ್ನು 100 ವರ್ಷ ಹಿಂದಕ್ಕೆ ಹೋಗಲು ನೀವು ಬಿಡುತ್ತೀರಾ?’ ಎಂದು ಪ್ರಶ್ನಿಸಿತು.

ಇದೇ ವೇಳೆ, ‘ಬೆಳೆ ತ್ಯಾಜ್ಯವನ್ನು ಸುಡದೇ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 100 ರು.ನಂತೆ ಸಹಾಯಧನ ನೀಡಬೇಕು. ಒಂದು ವಾರದೊಳಗೆ ಈ ಸಬ್ಸಿಡಿ ವಿತರಣೆ ಆಗಬೇಕು’ ಎಂದು ಮೂರೂ ರಾಜ್ಯ ಸರ್ಕಾರಗಳಿಗೆ ಕೋರ್ಟ್‌ ತಾಕೀತು ಮಾಡಿತು.

ಬೆಳೆ ತ್ಯಾಜ್ಯವನ್ನು ಸರ್ಕಾರವೇ ಖರೀದಿಸಿ ಅದನ್ನು ಸಂಸ್ಕರಣೆ ಮಾಡಲು ಸಾಧ್ಯವಿಲ್ಲವೇ ಎಂದೂ ಪ್ರಶ್ನಿಸಿದ ಪೀಠ, ‘3 ತಿಂಗಳೊಳಗೆ ಪರಿಸರ ಮಾಲಿನ್ಯ ನಿಯಂತ್ರಣದ ಬಗ್ಗೆ ಸಮಗ್ರ ಯೋಜನೆ ಸಿದ್ಧಪಡಿಸಬೇಕು’ ಎಂದು ಮೂರೂ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಆದೇಶಿಸಿತು.

ಯಾವ ಲೆಕ್ಕ ಹುಲು ಮಾನವರು?: ವಾಯು ಮಾಲಿನ್ಯದಿಂದ ಮಾಸ್ಕ್ ಧರಿಸಿದ ದೇವರು!

ಪಂಜಾಬ್‌ ಸಿಎಸ್‌ಗೆ ತಪರಾಕಿ:

ಪಂಜಾಬ್‌ ಮುಖ್ಯ ಕಾರ್ಯದರ್ಶಿಯನ್ನೂ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ‘ನಿಮ್ಮ ಆಡಳಿತ ಎಂದರೆ ಇದೇನಾ? ಬೆಳೆ ತ್ಯಾಜ್ಯ ಸುಡುವಿಕೆ ನಿಮ್ಮ ವೈಫಲ್ಯ. ನೀವೇಕೆ ಪಂಜಾಬ್‌ನ ಮುಖ್ಯ ಕಾರ್ಯದರ್ಶಿ ಆಗಿದ್ದೀರಿ? ನಿಮ್ಮನ್ನು ಇಲ್ಲೇ ಸಸ್ಪೆಂಡ್‌ ಮಾಡಿಬಿಡುತ್ತೇವೆ ಹುಷಾರ್‌’ ಎಂದು ಗುಡುಗಿತು.

‘ಬೆಳೆ ತ್ಯಾಜ್ಯ ಸುಡುವಿಕೆಗೆ ಸರ್ಕಾರವನ್ನೇ ಜವಾವ್ದಾರಿ ಮಾಡಬೇಕಾಗುತ್ತದೆ. ಸರ್ಕಾರಿ ಯಂತ್ರಕ್ಕೆ ಇದನ್ನೇಕೆ ನಿಯಂತ್ರಿಸಲು ಆಗದು? ಜನರ ಮೇಲೆ ಕಾಳಜಿ ಇರದೇ ಹೋದರೆ ಸರ್ಕಾರ ನಡೆಸುವ ಅಧಿಕಾರ ನಿಮಗಿಲ್ಲ. ಬಡವರ ಬಗ್ಗೆ ಕಾಳಜಿ ನಿಮಗಿಲ್ಲವೇ ಕಲ್ಯಾಣ ಸರ್ಕಾರದ ಪರಿಕಲ್ಪನೆಯೇ ನಿಮಗೆ (ಸರ್ಕಾರಗಳಿಗೆ) ಮರೆತು ಹೋಗಿದೆ’ ಎಂದು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತು.

ದಿಲ್ಲಿ ಪರಿಸ್ಥಿತಿ ಸುಧಾರಣೆ:

ಈ ನಡುವೆ, 500ರ ಗಡಿ ದಾಟಿ ಗಂಭೀರ ಸ್ಥಿತಿಗೆ ತಲುಪಿದ್ದ ದಿಲ್ಲಿ ಮಾಲಿನ್ಯ ಸೂಚ್ಯಂಕ ಬುಧವಾರ ಸುಧಾರಿಸಿದೆ. ಮಾಲಿನ್ಯ ಸೂಚ್ಯಂಕ ಮಧ್ಯಾಹ್ನ 1.30ಕ್ಕೆ 216 ಇತ್ತು. ಗಾಳಿಯ ದಿಕ್ಕಿನಲ್ಲಿ ಬದಲಾವಣೆ ಆಗಿರುವುದೇ ಸ್ಥಿತಿ ಸುಧಾರಣೆಗೆ ಕಾರಣ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.