ಒಡಿಶಾ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ ಓಡಿಸಿದ್ದ ‘ಡಕೋಟಾ’ ವಿಮಾನ ಇನ್ನು ಸ್ಮಾರಕವಾಗಲಿದೆ. ಕೋಲ್ಕತಾದಲ್ಲಿ ಇರುವ ವಿಮಾನ ಶೀಘ್ರ ಭುವನೇಶ್ವರಕ್ಕೆ ಬರಲಿದ್ದು, ಏರ್‌ಪೋರ್ಟಲ್ಲಿ 1.1 ಎಕರೆ ಜಾಗದಲ್ಲಿ ಸ್ಮಾರಕ ಸ್ಥಾಪನೆಯಾಗಲಿದೆ. ಹಾಗೂ, ಅಲ್ಲಿಯೇ ಡಕೋಟಾ ವಿಮಾನವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು ಎಂದು ತಿಳಿದುಬಂದಿದೆ. 

ಭುವನೇಶ್ವರ: ಖುದ್ದು ಪೈಲಟ್‌ ಆಗಿದ್ದಲ್ಲದೆ, ಕಳಿಂಗ ವಿಮಾನ ಕಂಪನಿಯನ್ನೂ (Kalinga Airline) ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ (Biju Patnaik) ಅವರ ಖ್ಯಾತ ‘ಡಕೋಟಾ’ (Dakota) ವಿಮಾನವನ್ನು ಕೋಲ್ಕತಾದಿಂದ ಮರಳಿ ರಾಜ್ಯಕ್ಕೆ ತರಲು ಹಾಗೂ ಅದರ ಸ್ಮಾರಕ ನಿರ್ಮಿಸಲು ಒಡಿಶಾ (Odisha) ಸರ್ಕಾರ ಸಜ್ಜಾಗಿದೆ. ದಶಕಗಳಿಂದಲೂ ಕೋಲ್ಕತಾದ ವಿಮಾನ ನಿಲ್ದಾಣದಲ್ಲಿ (Kolkata Airport) ಸ್ಕ್ರಾಪ್‌ ಆಗಿ ನಿಂತಿದ್ದ ಈ ಪ್ರಸಿದ್ಧ ವಿಮಾನವನ್ನು ಒಡಿಶಾಕ್ಕೆ ಸ್ಥಳಾಂತರಿಸಲು ಕಳೆದ 2 ವರ್ಷಗಳಿಂದಲೂ ಸರ್ಕಾರ ಪ್ರಯತ್ನಿಸುತ್ತಿತ್ತು. ಆ ಪ್ರಯತ್ನ ಈಗ ಸಫಲವಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (Airport Authority of India) ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಒಡಿಶಾ ಸರ್ಕಾರ ಸಲ್ಲಿಸಿದ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದಾರೆ. ಭುವನೇಶ್ವರ ವಿಮಾನ ನಿಲ್ದಾಣದ ಆವರಣದಲ್ಲಿ ಗುತ್ತಿಗೆ ಆಧಾರದ ಮೇಲೆ ನೀಡಲಾಗುವ 1.1 ಎಕರೆ ಜಾಗದಲ್ಲಿ ಸ್ಮಾರಕವನ್ನು ನಿರ್ಮಿಸಿ ಅಲ್ಲಿ ಪ್ರಸಿದ್ಧ ಡಕೋಟಾ ವಿಮಾನ ಪ್ರದರ್ಶನಕ್ಕಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಮಾನದ ಭಾಗಗಳನ್ನು ಬೇರ್ಪಡಿಸಿ ರಸ್ತೆಯ ಮೂಲಕ ಕೋಲ್ಕತಾ ವಿಮಾನ ನಿಲ್ದಾಣದಿಂದ ಭುವನೇಶ್ವರಕ್ಕೆ (Bhubaneshwar) ತರಲಾಗುವುದು. ಬಳಿಕ ವಿಮಾನದ ಭಾಗಗಳನ್ನು ಅಗತ್ಯ ರಿಪೇರಿ ಮಾಡಿಸಿ ಮರುಜೋಡಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಗಣತಂತ್ರ ದಿನ ರಾಜಪಥದಲ್ಲಿ 'ಪರಶುರಾಮನ' ಪರಾಕ್ರಮ!

ಡಕೋಟಾಗೂ ಬಿಜುಗೂ ನಂಟು:
ಒಡಿಶಾದ ಪ್ರಸ್ತುತ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ (Naveen Patnaik) ಅವರ ತಂದೆ, ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ ಅವರು ಕೋಲ್ಕತಾದಲ್ಲಿ ಕಳಿಂಗ ಎಂಬ ಖಾಸಗಿ ಏರ್‌ಲೈನ್‌ ಆರಂಭಿಸಿದ್ದರು. ಮುಖ್ಯ ಪೈಲಟ್‌ ಆಗಿ ಇವರೇ ಡಕೋಟಾ ವಿಮಾನ ಚಾಲನೆ ಮಾಡುತ್ತಿದ್ದರು.

ಆಗಿನ ಪ್ರಧಾನಿ ನೆಹರು ಅವರ ಆದೇಶದ ಮೇರೆಗೆ ಪಟ್ನಾಯಕ್‌ 1947ರಲ್ಲಿ ಡಚ್ಚರ ದಾಳಿಯ ವೇಳೆ ಇಂಡೋನೇಷ್ಯಾದ ಉಪಾಧ್ಯಕ್ಷರಾಗಿದ್ದ ಹಟ್ಟಾ ಹಾಗೂ ಪ್ರಧಾನಿ ಸ್ಜಹ್ರೀರ್‌ ಅವರನ್ನು ಡಕೋಟಾ ವಿಮಾನ ಬಳಸಿ ಸುರಕ್ಷಿತವಾಗಿ ಸ್ಥಳಾಂತರಿಸಿದ್ದರು. ದಶಕಗಳಿಂದಲೂ ಕೋಲ್ಕತಾದಲ್ಲಿ ಗುಜರಿ ರೀತಿ ಬಿದ್ದ ಈ ವಿಮಾನವನ್ನು ಕಂಡ ಅನಿಲ್‌ ಧೀರ್‌ ಎಂಬ ಸಂಶೋಧಕ, ವಿಮಾನದ ಮಹತ್ವದ ಬಗ್ಗೆ ಒಡಿಶಾ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಇದನ್ನೂ ಓದಿ: ರಾಜಪಥದಲ್ಲಿ ಹಾರಲಿದೆ ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ವಿಂಟೇಜ್ ಡಕೋಟಾ!

ಡಕೋಟಾ ವಿಮಾನ 64 ಅಡಿ ಹಾಗೂ 8 ಇಂಚು ಉದ್ದವಿದ್ದು, ವಿಮಾನದ ರೆಕ್ಕೆಗಳು 95 ಅಡಿವರೆಗೆ ವಿಸ್ತರಿಸಿವೆ.

ಇದನ್ನೂ ಓದಿ: ಏರ್ ಶೋನಲ್ಲಿ ಹಾರಲಿದೆ 70 ವರ್ಷ ಹಳೆಯ ಡಕೋಟಾ ಯುದ್ಧ ವಿಮಾನ!