ಅಮೆರಿಕಾದಿಂದ ತಾಯ್ನಾಡಿಗೆ ಬರುತ್ತಿದ್ದ ಮಹಿಳೆಯೊಬ್ಬರು ವಿಮಾನದಲ್ಲೇ ಕೊನೆಯುಸಿರೆಳೆದ ಆಘಾತಕಾರಿ ಘಟನೆ ಏರ್ ಇಂಡಿಯಾ ವಿಮಾನದಲ್ಲಿ ನಡೆದಿದೆ.  

ಬೆಂಗಳೂರು: ಅಮೆರಿಕಾದಿಂದ ತಾಯ್ನಾಡಿಗೆ ಬರುತ್ತಿದ್ದ ಮಹಿಳೆಯೊಬ್ಬರು ವಿಮಾನದಲ್ಲೇ ಕೊನೆಯುಸಿರೆಳೆದ ಆಘಾತಕಾರಿ ಘಟನೆ ಏರ್ ಇಂಡಿಯಾ ವಿಮಾನದಲ್ಲಿ ನಡೆದಿದೆ. ಬೆಂಗಳೂರು ಮೂಲದ 69 ವರ್ಷದ ಮಹಿಳೆಯೊಬ್ಬರು ಅಮೆರಿಕಾ ಸ್ಯಾನ್‌ ಫ್ರಾನ್ಸಿಸ್ಕೋದಿಂದ ತಾಯ್ನಾಡು ಭಾರತದ ಬೆಂಗಳೂರಿಗೆ ಏರ್ ಇಂಡಿಯಾದಲ್ಲಿ ಆಗಮಿಸುತ್ತಿದ್ದರು. ಆದರೆ ಮಾರ್ಗಮಧ್ಯೆಯೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಈ ಏರ್ ಇಂಡಿಯಾ ವಿಮಾನವೂ ಅಮೆರಿಕಾದಿಂದ ಭಾರತದ ಬೆಂಗಳೂರಿಗೆ ನೇರವಾಗಿ ಬರುತ್ತಿದ್ದ ಸುಧೀರ್ಘ ವಿಮಾನವಾಗಿತ್ತು. ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಆಗುವ ಮೊದಲು ಏರ್ ಇಂಡಿಯಾದ ಪೈಲಟ್ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಈ ವಿಚಾರ ತಿಳಿಸಿದ್ದರು. ಈ ವಿಮಾನವೂ ಗುರುವಾರ ಬೆಳಗ್ಗೆ 7.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ನೀಡಿದ ಮಾಹಿತಿಯಂತೆ ಈ ಮಹಿಳೆ ಮಂಗಳವಾದ ಅಮೆರಿಕಾದ, ಸ್ಯಾನ್ ಫ್ರಾನ್ಸಿಸ್ಕೋದಿಂದ (San Francisco) ತನ್ನ ಮಗನೊಂದಿಗೆ ಏರ್ ಇಂಡಿಯಾ ವಿಮಾನವನ್ನು (AI176) ಹತ್ತಿದ್ದರು. ಈ ವಿಮಾನವೂ ಅಮೆರಿಕಾದಿಂದ ಬೆಂಗಳೂರಿಗೆ ದೀರ್ಘಾವಧಿಯ ನೇರ ವಿಮಾನಯಾನವಾಗಿದೆ.

Viral Video: ತಂದೆಯನ್ನು ಮೊದಲ ಬಾರಿ ವಿಮಾನದಲ್ಲಿ ಕೊಂಡೊಯ್ದ ಮಗ, ಅಪ್ಪನ ರಿಯಾಕ್ಷನ್ ನೋಡಿ..

ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಮಹಿಳೆಗೆ ವೈದ್ಯಕೀಯ ತುರ್ತು (medical emergency) ಪರಿಸ್ಥಿತಿ ಏರ್ಪಟ್ಟಿತ್ತು. ಈ ವೇಳೆ ವಿಮಾನದ ಸಿಬ್ಬಂದಿ ಅವರನ್ನು ಉಳಿಸಿಕೊಳ್ಳಲು ಎಲ್ಲಾ ಸಹಾಯವನ್ನು ಒದಗಿಸಿದರು. ಆದರೆ ಮಹಿಳೆ ವಿಮಾನದಲ್ಲಿ ಸಾವನ್ನಪ್ಪಿದರು ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದಾರೆ. 

ವಿಮಾನದಲ್ಲಿ ಅವರು ಉಸಿರಾಡಲು ಕಷ್ಟವಾಗುತ್ತಿದೆ ಎಂದು ಹೇಳಿದ್ದರು. ವಯೋಸಹಜವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಮೇಲ್ನೊಟಕ್ಕೆ ಕಂಡು ಬಂದಿದೆ. 
ನಂತರ ಗುರುವಾರ ಬೆಳಗ್ಗೆ 7:30ರ ಸುಮಾರಿಗೆ ವಿಮಾನ ಲ್ಯಾಂಡ್ ಆಗುವ ಮುನ್ನ ಪೈಲಟ್‌ಗಳು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಈ ವಿಚಾರ ತಿಳಿಸಿದ್ದಾರೆ. ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ವಿಮಾನ ಲ್ಯಾಂಡ್ ಆದ ಬಳಿಕ ಮಹಿಳೆಯ ದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ವಿಮಾನ ನಿಲ್ದಾಣದ ಆಸ್ಪತ್ರೆಗೆ (airport hospital) ಕೊಂಡೊಯ್ಯಲಾಯಿತು. ಅಲ್ಲಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು ಎಂದು ತಿಳಿದು ಬಂದಿದೆ.

ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಚ್ಚಿದ ಚೇಳು!

2021 ರಲ್ಲಿಯೂ ಇದೇ ರೀತಿಯ ಘಟನೆಯೊಂದು ಸಂಭವಿಸಿತ್ತು. ಯುನೈಟೆಡ್ ಸ್ಟೇಟ್ಸ್‌ನ (United States) ನೆವಾರ್ಕ್‌ನಿಂದ(Newark) ದೆಹಲಿಗೆ ಹಿಂತಿರುಗುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದರು. ಮೃತರು ಅಮೆರಿಕದವರಾಗಿದ್ದು, ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದರು.