Asianet Suvarna News Asianet Suvarna News

ಜಟಿಲ ಸ್ಥಿತಿ ಸೃಷ್ಟಿ ಆದಾಗ ಸಂವಿಧಾನದ ರಚನೆಯೇ ನಮಗೆ ದಿಕ್ಸೂಚಿ: ಸಿಜೆ ಚಂದ್ರಚೂಡ್‌ ಚಾಟಿ..!

ಜಟಿಲ ಸ್ಥಿತಿ ಸೃಷ್ಟಿ ಆದಾಗ ಸಂವಿಧಾನದ ರಚನೆಯೇ ನಮಗೆ ದಿಕ್ಸೂಚಿ ಎಂದು ಸುಪ್ಸಿರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ಹೇಳಿದ್ದಾರೆ. ಸಂವಿಧಾನ ಕುರಿತ ತೀರ್ಪನ್ನು ಉಪರಾಷ್ಟ್ರಪತಿ ಪ್ರಶ್ನಿಸಿದ್ದರು. ಅದನ್ನು ಉಲ್ಲೇಖಿಸದೆ ನ್ಯಾಯಮೂರ್ತಿ ಚಂದ್ರಚೂಡ್‌ ಚಾಟಿ ಬೀಸಿದ್ದಾರೆ. 

days after vice presidents criticism chief justice of india hails basic structure verdict ash
Author
First Published Jan 23, 2023, 7:48 AM IST

ಮುಂಬೈ (ಜನವರಿ 23, 2023): ‘ಸಂಕೀರ್ಣ ಅಥವಾ ಜಟಿಲ ಪರಿಸ್ಥಿತಿಗಳು ಸೃಷ್ಟಿಯಾದಾಗ ವ್ಯಾಖ್ಯಾನಕಾರರಿಗೆ ಹಾಗೂ ಅನುಷ್ಠಾನಗಾರರಿಗೆ ಸಂವಿಧಾನದ ಮೂಲರಚನೆಯು ಮಾರ್ಗದರ್ಶನ ಮಾಡಿ, ಹೊಸ ದಿಕ್ಕು ತೋರಿಸುತ್ತದೆ’ ಎನ್ನುವ ಮೂಲಕ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು, ಇತ್ತೀಚೆಗೆ ಸುಪ್ರೀಂಕೋರ್ಟ್ ಕಾರ‍್ಯವೈಖರಿ ಬಗ್ಗೆ ಕಿಡಿಕಾರಿದ್ದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರಿಗೆ ಪರೋಕ್ಷ ತಿರುಗೇಟು ಕೊಟ್ಟಿದ್ದಾರೆ.

ನಾನಿ ಎ. ಫಾಲ್ಕಿವಾಲಾ ಸ್ಮಾರಕ ಉಪನ್ಯಾಸ ನೀಡಿದ ನ್ಯಾಯಮೂರ್ತಿ ಚಂದ್ರಚೂಡ್‌, ‘ಬದಲಾದ ಕಾಲದಲ್ಲಿ ಸಾರಕ್ಕೆ ಯಾವುದೇ ಭಂಗವಾಗದಂತೆ ನೋಡಿಕೊಂಡು ಸಂವಿಧಾನದ ಸಾಲುಗಳನ್ನು ವ್ಯಾಖ್ಯಾನಿಸುವುದರಲ್ಲಿ ನ್ಯಾಯಾಧೀಶರಾದವರ ಕಲೆಗಾರಿಕೆ ಅಡಗಿದೆ. ಸಂವಿಧಾನದ ಮೂಲರಚನೆ ಎಂಬುದು ದಿಕ್ಸೂಚಿ ಇದ್ದಂತೆ. ಕಗ್ಗಂಟು ಎದುರಾದಾಗ ಮಾರ್ಗದರ್ಶನ ಮಾಡಿ, ಸಂವಿಧಾನದ ವ್ಯಾಖ್ಯಾನಕಾರರು ಹಾಗೂ ಅನುಷ್ಠಾನಕಾರರಿಗೆ ಹೊಸ ದಿಕ್ಕನ್ನು ಸೂಚಿಸುತ್ತದೆ’ ಎಂದು ಹೇಳಿದರು.

ಇದನ್ನು ಓದಿ: ಮತ್ತೆ ಕೇಂದ್ರ v/s ಸುಪ್ರೀಂ: ಸುಪ್ರೀಂನಿಂದ ಸಂವಿಧಾನ ಹೈಜಾಕ್‌; ನಿವೃತ್ತ ಜಡ್ಜ್‌ ಹೇಳಿಕೆಗೆ ಸಚಿವ ಬೆಂಬಲ

ಉಪರಾಷ್ಟ್ರಪತಿ ಧನಕರ್‌ ಏನು ಹೇಳಿದ್ದರು..?:
ಜನವರಿ 11ರಂದು ಉಪನ್ಯಾಸವೊಂದರಲ್ಲಿ ಮಾತನಾಡಿದ್ದ ಧನಕರ್‌, ‘ಸಂಸತ್ತು ಸಂವಿಧಾನ ತಿದ್ದುಪಡಿ ಮಾಡಬಹುದು, ಆದರೆ ಅದರ ಮೂಲರಚನೆಯನ್ನಲ್ಲ ಎಂದು 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಅದೊಂದು ಕೆಟ್ಟಪರಂಪರೆಯ ತೀರ್ಪು, ಅದನ್ನು ಒಪ್ಪುವುದಿಲ್ಲ. ಏಕೆಂದರೆ, ಆ ತೀರ್ಪು ಇಟ್ಟುಕೊಂಡು ನಾವು ನಮ್ಮ ದೇಶವನ್ನು ಪ್ರಜಾಪ್ರಭುತ್ವ ದೇಶ ಎಂದು ಹೇಳಲಾಗದು’ ಎಂದು ಹರಿಹಾಯ್ದಿದ್ದರು.

‘ಮೂಲರಚನೆಯನ್ನು ಸಂಸತ್ತು ಮುಟ್ಟುವಂತಿಲ್ಲ’ ಎಂಬ ಐತಿಹಾಸಿಕ ತೀರ್ಪಿನಿಂದಾಗಿ ನ್ಯಾಯಾಧೀಶರ ನೇಮಕಾತಿ ಆಯೋಗ ರಚನಾ ಕಾಯ್ದೆ ಸೇರಿ ಕೆಲವೊಂದು ಸಂವಿಧಾನಿಕ ತಿದ್ದುಪಡಿಗಳು ಸುಪ್ರೀಂಕೋರ್ಟ್‌ನಲ್ಲಿ ರದ್ದಾಗಿವೆ ಎಂಬುದು ಗಮನಾರ್ಹ.

ಇದನ್ನೂ ಓದಿ: ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ಸೇರ್ಪಡೆ ಮಾಡಿ: ಸಿಜೆಐಗೆ ಕಾನೂನು ಸಚಿವ ರಿಜಿಜು ಪತ್ರ

ಸ್ಥಳೀಯ ಭಾಷೆಗಳಲ್ಲಿ ತೀರ್ಪು: ಸಿಜೆಐ ಸಲಹೆಗೆ ಮೋದಿ ಸ್ವಾಗತ
ನವದೆಹಲಿ: ಸ್ಥಳೀಯ ಭಾಷೆಗಳಲ್ಲಿ ಕೋರ್ಟ್‌ಗಳು ತೀರ್ಪು ನೀಡುವಂತಾಗಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸುವ ಒಲವು ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೀಡಿದ್ದ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಜಡ್ಜ್‌ಗಳ ನೇಮಕ ವ್ಯವಸ್ಥೆಗೆ ಸಂಬಂಧಿಸಿದಂತೆ ಒಂದೆಡೆ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ಸಂಘರ್ಷ ನಡೆಯುತ್ತಿದ್ದರೆ ಇನ್ನೊಂದೆಡೆ ಮೋದಿ ಅವರು ನ್ಯಾಯಮೂರ್ತಿ ಚಂದ್ರಚೂಡ್‌ರನ್ನು ಪ್ರಶಂಸಿಸಿರುವುದು ಗಮನಾರ್ಹ.

ಶನಿವಾರ ಮಾತನಾಡಿದ್ದ ಚಂದ್ರಚೂಡ್‌, ‘ಸ್ಥಳೀಯ ಭಾಷೆಗಳಲ್ಲಿ ಕೋರ್ಟ್‌ ತೀರ್ಪು ನೀಡುವುದು ಉತ್ತಮ. ಅದಕ್ಕಾಗಿ ನಾವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು’ ಎಂದು ಹೇಳಿದ್ದರು. ಇದನ್ನು ಮೋದಿ ಸ್ವಾಗತಿಸಿದ್ದು, ‘ಇದೊಂದು ಉತ್ತಮ ಸಲಹೆ. ಭಾರತ ಸಾಕಷ್ಟು ಸ್ಥಳೀಯ ಭಾಷೆಗಳನ್ನು ಒಳಗೊಂಡಿದೆ. ಸ್ಥಳೀಯ ಭಾಷೆಗಳಲ್ಲಿ ತೀರ್ಪು ನೀಡುವುದರಿಂದ ಯುವಕರಿಗೂ ಹಾಗೂ ಇತರರಿಗೂ ಸಹಾಯವಾಗಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಜಡ್ಜ್‌ ನೇಮಕ ಪ್ರಕ್ರಿಯೆ ಬಗ್ಗೆ ಮತ್ತೆ ರಿಜಿಜು ಅತೃಪ್ತಿ!

‘ಕೇಂದ್ರ ಸರ್ಕಾರ ಈ ಮೊದಲು ಸ್ಥಳೀಯ ಭಾಷೆಯಲ್ಲಿ ತೀರ್ಪು ನೀಡುವ ಕುರಿತು ಹೇಳಿತ್ತು. ಮಾತೃ ಭಾಷೆಯಲ್ಲೂ ಕಲಿಯವುದಕ್ಕೆ ಸಹಕಾರ ನೀಡಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಈ ರೀತಿಯ ಬದಲಾವಣೆಯಿಂದಾಗಿ ಸ್ಥಳೀಯ ಭಾಷೆಗಳಿಗೂ ಒತ್ತು ನೀಡಿದಂತಾಗುತ್ತದೆ’ ಎಂದು ಮೋದಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಲಿಜಿಯಂ ಕುರಿತು ಕೇಂದ್ರ ಸಚಿವ ರಿಜಿಜು ಹೇಳಿಕೆಗೆ ನಿವೃತ್ತ ಸಿಜೆಐ ಲಲಿತ್ ಆಕ್ಷೇಪ

Follow Us:
Download App:
  • android
  • ios