‘ಇಷ್ಟು ದಿನ ನಾನು ‘ಜಬ್‌ ತಕ್‌ ದವಾಯಿ ನಹಿ ಧಿಲಾಯಿ ನಹಿ’ (ಔಷಧಿ ಬರುವವರೆಗೆ ಮೈಮರೆಯುವಂತಿಲ್ಲ) ಎನ್ನುತ್ತಿದ್ದೆ. ಆದರೆ 2021ರಲ್ಲಿ ನಮ್ಮ ಮಂತ್ರ ‘ದವಾಯಿ ಭೀ, ಕಡಾಯಿ ಭಿ’ (ಔಷಧಿಯೂ ಇದೆ, ಎಚ್ಚರಿಕೆಯೂ ಇದೆ) ಎಂಬುದಾಗಬೇಕು ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್‌(ಜ.01): ಜಗತ್ತಿನ ಅತಿದೊಡ್ಡ ಲಸಿಕೆ ವಿತರಣಾ ಆಂದೋಲನಕ್ಕೆ ಭಾರತ ಸಂಪೂರ್ಣ ಸಿದ್ಧವಾಗಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದಲ್ಲಿ ಕೊರೋನಾ ವೈರಸ್‌ಗೆ ಭಾರತದಲ್ಲಿ ಲಸಿಕೆ ವಿತರಣೆ ಆರಂಭವಾಗಲಿದೆ ಎಂಬ ನಿಚ್ಚಳ ಸುಳಿವು ನೀಡಿದ್ದಾರೆ.

‘ಇಷ್ಟು ದಿನ ನಾನು ‘ಜಬ್‌ ತಕ್‌ ದವಾಯಿ ನಹಿ ಧಿಲಾಯಿ ನಹಿ’ (ಔಷಧಿ ಬರುವವರೆಗೆ ಮೈಮರೆಯುವಂತಿಲ್ಲ) ಎನ್ನುತ್ತಿದ್ದೆ. ಆದರೆ 2021ರಲ್ಲಿ ನಮ್ಮ ಮಂತ್ರ ‘ದವಾಯಿ ಭೀ, ಕಡಾಯಿ ಭಿ’ (ಔಷಧಿಯೂ ಇದೆ, ಎಚ್ಚರಿಕೆಯೂ ಇದೆ) ಎಂಬುದಾಗಬೇಕು. ಲಸಿಕೆ ತೆಗೆದುಕೊಂಡ ಮೇಲೂ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಭಾರತವು ಕೊರೋನಾ ವೈರಸ್‌ ವಿರುದ್ಧ ಜಗತ್ತಿನಲ್ಲೇ ಅತಿದೊಡ್ಡ ಲಸಿಕೆ ಆಂದೋಲನ ಜಾರಿಗೊಳಿಸಲು ಸನ್ನದ್ಧವಾಗಿದೆ’ ಎಂದು ತಿಳಿಸಿದ್ದಾರೆ.

ದೇಶಾದ್ಯಂತ ಕೊರೋನಾ ಲಸಿಕೆ ತಾಲೀಮು

ಗುಜರಾತ್‌ನ ರಾಜಕೋಟ್‌ನಲ್ಲಿ ಸ್ಥಾಪಿಸಲಿರುವ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ (ಏಮ್ಸ್‌) ಆಸ್ಪತ್ರೆಗೆ ವಿಡಿಯೋ ಕಾನ್ಛರೆನ್ಸ್‌ ಮೂಲಕ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ, ಜನರು ಲಸಿಕೆಯ ಬಗ್ಗೆ ವದಂತಿಗಳನ್ನು ನಂಬಬಾರದು. ಕೆಲವರು ಈಗಾಗಲೇ ಸುಳ್ಳುಸುದ್ದಿ ಹರಡಲು ಆರಂಭಿಸಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್‌ ಹರಡುವ ಪ್ರಮಾಣ ಇಳಿಕೆಯಾಗುತ್ತಿದೆ. 2020ರಲ್ಲಿ ಎಲ್ಲೆಡೆ ಬೇಸರ ಹಾಗೂ ಹತಾಶೆಯ ವಾತಾವರಣವಿತ್ತು. ಆದರೆ, 2021 ಹೊಸ ಆಶಾಕಿರಣದೊಂದಿಗೆ ಬರುತ್ತಿದೆ. ಏಕೆಂದರೆ ಕೊರೋನಾಗೆ ಲಸಿಕೆ ದೊರೆತಿದೆ ಎಂದು ಹೇಳಿದರು.

ಮೇಡ್‌ ಇನ್‌ ಇಂಡಿಯಾ ಕೊರೋನಾ ಲಸಿಕೆ ಆದಷ್ಟುಬೇಗ ದೊರಕುವಂತೆ ಮಾಡಲು ಎಲ್ಲ ಪ್ರಯತ್ನ ನಡೆಯುತ್ತಿದೆ. ಕೊರೋನಾದಿಂದ ಉಂಟಾದ ಸಾವು ಹಾಗೂ ಸೋಂಕಿನ ವಿಷಯದಲ್ಲಿ ಇತರ ದೇಶಗಳಿಗಿಂತ ಭಾರತ ಉತ್ತಮ ಸ್ಥಿತಿಯಲ್ಲಿದೆ. ಸಕಾಲಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರಿಂದ ಇದು ಸಾಧ್ಯವಾಯಿತು ಎಂದೂ ಮೋದಿ ಅಭಿಪ್ರಾಯಪಟ್ಟರು.

ಬಡವರ 30,000 ಕೋಟಿ ರುಪಾಯಿ ಉಳಿತಾಯ

ಆಯುಷ್ಮಾನ್‌ ಭಾರತ್‌ ಉಚಿತ ಆರೋಗ್ಯ ವಿಮೆ ಯೋಜನೆಯಿಂದಾಗಿ ದೇಶದ ಬಡವರಿಗೆ 30,000 ಕೋಟಿ ರು. ಉಳಿತಾಯವಾಗಿದೆ. ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳು ಶೇ.90ರಷ್ಟುಕಡಿಮೆ ಬೆಲೆಗೆ ಸಿಗುತ್ತಿದ್ದು, 3.5 ಲಕ್ಷ ಬಡ ರೋಗಿಗಳು ನಿತ್ಯ ಈ ಔಷಧಿಗಳನ್ನು ಬಳಸುತ್ತಾರೆ. 2021 ಭಾರತಕ್ಕೆ ಆರೋಗ್ಯ ಪರಿಹಾರಗಳ ವರ್ಷವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.