ಕರಾಳ ವೀಕೆಂಡ್: ಸಾಲು ಸಾಲು ಅನಾಹುತ, ಅಪಘಾತ : ಬಸ್‌ಗೆ ಟ್ರಕ್ ಡಿಕ್ಕಿ : 11 ಯಾತ್ರಾರ್ಥಿಗಳ ಸಾವು
ನಿನ್ನೆ ಸಂಜೆಯಿಂದಲೇ ಹಲವೆಡೆ ಸರಣಿ ದುರಂತಗಳು ಸಂಭವಿಸುತ್ತಿದ್ದು, ಅಪಘಾತ ಹಾಗೂ ಬೆಂಕಿ ಅನಾಹುತಗಳು ಸೇರಿ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಮೃತರಾದವರ ಸಂಖ್ಯೆ 50ರ ಗಡಿ ದಾಟಿದೆ.
ಲಕ್ನೋ: ನಿಂತಿದ್ದ ಬಸ್‌ಗೆ ಟ್ರಕ್ಕೊಂದು ಡಿಕ್ಕಿ ಹೊಡೆದ ಬಸ್ ಮೇಲೆಯೇ ಉರುಳಿ ಬಿದ್ದ ಪರಿಣಾಮ ಬಸ್‌ನಲ್ಲಿದ್ದ 11 ಯಾತ್ರಾರ್ಥಿಗಳು ಮೃತಪಟ್ಟು 10 ಜನ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಶಹ್ರಾನ್‌ಪುರದಲ್ಲಿ ನಡೆದಿದೆ. ಇದು ಸೇರಿದಂತೆ ನಿನ್ನೆ ಸಂಜೆಯಿಂದಲೇ ಹಲವೆಡೆ ಸರಣಿ ದುರಂತಗಳು ಸಂಭವಿಸುತ್ತಿದ್ದು, ಅಪಘಾತ ಹಾಗೂ ಬೆಂಕಿ ಅನಾಹುತಗಳು ಸೇರಿ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಮೃತರಾದವರ ಸಂಖ್ಯೆ 50ರ ಗಡಿ ದಾಟಿದೆ.
ಈ ಅಪಘಾತವೂ ಕೂಡ ನಿನ್ನೆ ರಾತ್ರಿ ನಡೆದಿದೆ. ಯಾತ್ರಾರ್ಥಿಗಳಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್ ಜಲ್ಲಿ ಕಲ್ಲು ಸಾಗಣೆ ಮಾಡುತ್ತಿತ್ತು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಖುತರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗೋಲ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಯಾತ್ರಾರ್ಥಿಗಳ ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಶಹಜಹಾನ್‌ಪುರದ ಢಾಬಾವೊಂದರ ಬಳಿ ಊಟಕ್ಕಾಗಿ ನಿಲ್ಲಿಸಿದ್ದ ವೇಳೆ ಜಲ್ಲಿ ಕಲ್ಲು ಸಾಗಣೆ ಮಾಡುತ್ತಿದ್ದ ಟ್ರಕ್ಕೊಂದು ಬಸ್‌ಗೆ ಡಿಕ್ಕಿ ಹೊಡೆದು ಬಸ್ ಮೇಲೆಯೇ ಉರುಳಿ ಬಿದ್ದಿದೆ. ಪರಿಣಾಮ, ಬಸ್‌ನಲ್ಲಿದ್ದ 11 ಮೃತಪಟ್ಟು 10 ಜನ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಮಡಿದವರಲ್ಲಿ ಮಕ್ಕಳು ಮಹಿಳೆಯರು ಸೇರಿದ್ದಾರೆ.
ದೆಹಲಿ ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 7 ನವಜಾತ ಶಿಶುಗಳ ದಾರುಣ ಸ ...
ಬಸ್ ಮೇಲೆಯೇ ಟ್ರಕ್ ಮಗುಚಿದ ಪರಿಣಾಮ ಗಾಯಾಳುಗಳ ರಕ್ಷಣೆಗೆ ಮೂರು ಗಂಟೆ ಹಿಡಿದಿದೆ. ಕೆಲವು ದೇಹಗಳನ್ನು ಟ್ರಕ್ ಅಡಿಯಿಂದ ಎಳೆದು ತೆಗೆಯಲಾಗಿದೆ. ಟ್ರಕ್ ಅಡಿಯಲ್ಲಿ ನಜ್ಜುಗುಜ್ಜಾದ ಯಾತ್ರಿಕರನ್ನು ಹೊರತೆಗೆಯಲು ರಕ್ಷಣಾ ತಂಡಗಳು ಕ್ರೇನ್ ಅನ್ನು ಬಳಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾತ್ರಿ 11.30 ರ ಸುಮಾರಿಗೆ ಗೋಲಾ ಬೈಪಾಸ್ ರಸ್ತೆಯಲ್ಲಿ ಕಲ್ಲು ತುಂಬಿದ ಟ್ರಕ್ ಢಾಬಾ ಬಳಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಅದರ ಮೇಲೆ ಪಲ್ಟಿಯಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿತು. ಘಟನೆ ನಡೆದ ವೇಳೆ ಕೆಲವರು ಢಾಬಾದಲ್ಲಿ ಆಹಾರ ಸೇವಿಸುತ್ತಿದ್ದರು ಮತ್ತೆ ಕೆಲವರು ಬಸ್‌ನೊಳಗೆ ಕುಳಿತಿದ್ದರು. 11 ಮಂದಿ ಮೃತರಾಗಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ. ನಾವು ಎಲ್ಲಾ ದೇಹಗಳನ್ನು ಹೊರತೆಗೆದಿದ್ದೇವೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಶಹಜಹಾನ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮೀನಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗಾಯಾಳುಗಳೆಲ್ಲರನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
25 ಮಕ್ಕಳ ಬಲಿ ಪಡೆದ ಗುಜರಾತ್ ಗೇಮಿಂಗ್ ಸೆಂಟರ್ ಅಗ್ನಿ ಅನಾಹುತ: ಮೃತ ...
ಗೇಮಿಂಗ್ ಸೆಂಟರ್‌ಗೆ ಬೆಂಕಿ: 35 ಸಾವು
ನಿನ್ನೆ ಸಂಜೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿನ ಗೇಮಿಂಗ್ ಸೆಂಟರ್‌ಗೆ ಬೆಂಕಿ ಬಿದ್ದ ಪರಿಣಾಮ 25 ಮಕ್ಕಳು ಸೇರಿದಂತೆ 35 ಜನ ಮೃತಪಟ್ಟಿದ್ದಾರೆ. 99 ರೂಪಾಯಿಗೆ ಗೇಮಿಂಗ್ ಸೆಂಟರ್‌ಗೆ ಪ್ರವೇಶ ನೀಡಿದ್ದರಿಂದ ಜನ ಕಿಕ್ಕಿರಿದು ತುಂಬಿದ್ದರು. ಜೊತೆಗೆ ಗೇಮಿಂಗ್‌ಗಾಗಿ ಸಾವಿರ ಲೀಟರ್ ಲೆಕ್ಕದಲ್ಲಿ ಪೆಟ್ರೋಲ್ ಡಿಸೇಲ್ ಸಂಗ್ರಹಿಸಿದ್ದರು. ಇದೇ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅದು ನಂತರ ತೈಲ ಇದ್ದ ಜಾಗಕ್ಕೂ ವಿಸ್ತರಿಸಿ ಭಾರಿ ಅನಾಹುತ ಸಂಭವಿಸಿದೆ. ಹೊರಗೆ ಹೋಗುವುದಕ್ಕೆ ಒಂದೇ ಒಂದು ಎಕ್ಸಿಟ್ ದ್ವಾರವಿದ್ದಿದ್ದು ಅವಘಡದ ತೀವ್ರತೆಯನ್ನು ಹೆಚ್ಚಿಸಿದೆ.
ಮಕ್ಕಳ ಆಸ್ಪತ್ರೆಗೆ ಬೆಂಕಿ 7 ನವಜಾತ ಶಿಶುಗಳು ಬಲಿ
ಇನ್ನೊಂದೆಡೆ ದೆಹಲಿ ಆಸ್ಪತ್ರೆಯೊಂದರ ನವಜಾತ ಶಿಸುಗಳನ್ನು ಇಟ್ಟಿದ್ದ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, 7 ಮಕ್ಕಳು ಈ ದುರಂತದಲ್ಲಿ ಮಡಿದಿವೆ. ಅಗ್ನಿ ಶಾಮಕ ಸಿಬ್ಬಂದಿ ಒಟ್ಟು 12 ಮಕ್ಕಳನ್ನು ರಕ್ಷಿಸಿದ್ದು, ಅದರಲ್ಲಿ 7 ಮಕ್ಕಳು ಚಿಕಿತ್ಸೆ ವೇಳೆ ಪ್ರಾಣಬಿಟ್ಟಿವೆ.
ಹಾಸನದಲ್ಲಿ ಟ್ರಕ್ ಕಾರು ಮಧ್ಯೆ ಡಿಕ್ಕಿ: 6 ಮಂದಿ ಸಾವು
ಹಾಗೆಯೇ ಇಂದು ಮುಂಜಾನೆ ಹಾಸನದಲ್ಲಿ ಟ್ರಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾಸನ ಹೊರವಲಯದ ಕಂದಲಿ ಸಮೀಪದ ಈಚನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿದ್ದ ಮೂವರು ಮಹಿಳೆಯರು, ಇಬ್ಬರು ಪುರುಷರು, ಒಂದು ಮಗು ಸೇರಿ ಆರು ಜನರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ದೇವನಹಳ್ಳಿಯವರು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸರಣಿ ದುರಂತಗಳು ಈ ವಾರದ ವೀಕೆಂಡ್‌ನ್ನು ಕರಾಳ ದಿನವನ್ನಾಗಿಸಿದೆ.