Cyclone Ditwah:ಶ್ರೀಲಂಕಾದಲ್ಲಿ ವಿನಾಶ ಸೃಷ್ಟಿಸಿದ ದಿತ್ವಾ ಚಂಡಮಾರುತವು ತಮಿಳುನಾಡಿಗೆ ಅಪ್ಪಳಿಸಿದ್ದು, ಮೂವರ ಸಾವಿಗೆ ಕಾರಣವಾಗಿದೆ ಮತ್ತು ಅಪಾರ ಹಾನಿಯನ್ನುಂಟುಮಾಡಿದೆ. ಹವಾಮಾನ ಇಲಾಖೆಯು ತಮಿಳುನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಆಂಧ್ರಪ್ರದೇಶಕ್ಕೂ ಭಾರೀ ಮಳೆಯ ಎಚ್ಚರಿಕೆ ನೀಡಿದೆ.
ತಮಿಳುನಾಡಿನಲ್ಲಿ ಮೂವರ ಬಲಿ ಪಡೆದ ದಿತ್ವಾ ಚಂಡಮಾರುತ: ಜನಜೀವನ ಅಸ್ತವ್ಯಸ್ತ:
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅಕ್ಷರಶಃ ಜಲಪ್ರಳಯ ಸೃಷ್ಟಿಸಿ ಜನರ ಬದುಕನ್ನು ನರಕ ಮಾಡಿರುವ ದಿತ್ವಾ ಚಂಡಮಾರುತವೂ ತಮಿಳುನಾಡಿಗೂ ಅಪ್ಪಳಿಸಿದ್ದು, ತಮಿಳುನಾಡಿನಲ್ಲಿ ದಿತ್ವಾ ಚಂಡಮಾರುತದ ಅಬ್ಬರಕ್ಕೆ ಮೂವರು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ತೂತುಕುಡಿ ಹಾಗೂ ತಂಜಾವೂರಿನಲ್ಲಿ ಮಳೆಯ ಆರ್ಭಟಕ್ಕೆ ಗೋಡೆ ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಹಾಗೆಯೇ ಮೈಲಾಡುತುರೈನಲ್ಲಿ 20 ವರ್ಷದ ಯುವಕನೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾನೆ.
ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ 234 ಗುಡಿಸಲುಗಳು ಮತ್ತು ಮಣ್ಣಿನ ಮನೆಗಳು ಹಾನಿಗೊಳಗಾಗಿದ್ದು, 149 ಜಾನುವಾರುಗಳು ಕೂಡ ಸಹ ಸಾವನ್ನಪ್ಪಿವೆ ಎಂದು ರಾಜ್ಯ ಸಚಿವ ಕೆಕೆಎಸ್ಎಸ್ಆರ್ ರಾಮಚಂದ್ರನ್ ಹೇಳಿದ್ದಾರೆ. ನಿರಂತರ ಮಳೆಯಿಂದಾಗಿ ಸುಮಾರು 57,000 ಹೆಕ್ಟೇರ್ ಕೃಷಿ ಭೂಮಿ ಮುಳುಗಡೆಯಾಗಿದೆ.
ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ:
ಶ್ರೀಲಂಕಾದಲ್ಲಿ ಭಾರಿ ಪ್ರಮಾಣದ ವಿನಾಶಕ್ಕೆ ಕಾರಣವಾದ ದಿತ್ವಾ ಚಂಡಮಾರುತವು ಇಂದು ಸಂಜೆ ತಮಿಳುನಾಡು ಪುದುಚೇರಿ ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯೂ (ಐಎಂಡಿ) ಹೇಳಿತ್ತು. ಹವಾಮಾನ ಇಲಾಖೆಯೂ ತಮಿಳುನಾಡಿನ ಕಡಲೂರು, ನಾಗಪಟ್ಟಿಣಂ, ಮೈಲಾಡುತುರೈ, ವಿಲ್ಲುಪುರಂ, ಚೆಂಗಲ್ಪಟ್ಟು ಮತ್ತು ಸಮೀಪದ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ತೀವ್ರ ಭಾರೀ ಮಳೆಯಾಗುವ ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಘಟಕಗಳು ಸೇರಿದಂತೆ 28 ಕ್ಕೂ ಹೆಚ್ಚು ತುರ್ತು ಪ್ರತಿಕ್ರಿಯೆ ತಂಡಗಳನ್ನು ದುರ್ಬಲ ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಹಲವು ತುರ್ತು ವಿಪತ್ತು ಪಡೆಗಳ ನಿಯೋಜನೆ
ಹೆಚ್ಚುವರಿಯಾಗಿ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಬೆಂಬಲಿಸಲು ಮಹಾರಾಷ್ಟ್ರ ಮತ್ತು ಗುಜರಾತ್‌ನ ನೆಲೆಗಳಿಂದ ಇನ್ನೂ 10 ಎನ್‌ಡಿಆರ್‌ಎಫ್ ತಂಡಗಳು ಚೆನ್ನೈಗೆ ಆಗಮಿಸಿವೆ. ಭಾರೀ ಮಳೆಯಿಂದಾಗಿ ವಿಮಾನ ಹಾರಾಟದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಶನಿವಾರ ಚೆನ್ನೈನಲ್ಲಿ 54 ವಿಮಾನ ಹಾರಾಟ ರದ್ದಾದ ಬಗ್ಗೆ ವರದಿಯಾಗಿದೆ. ಚಂಡಮಾರುತದಿಂದಾಗಿ ಪುದುಚೇರಿ ಕೇಂದ್ರೀಯ ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ಮುಂದೂಡಿದೆ ಮತ್ತು ರಜೆ ಘೋಷಿಸಿದೆ.
ಇದನ್ನೂ ಓದಿ: ತಮಿಳುನಾಡಿನ ಕಾರೈಕುಡಿ ಬಳಿ 2 ಬಸ್‌ಗಳ ಮಧ್ಯೆ ಭೀಕರ ಅಪಘಾತ: 12 ಮಂದಿ ಸಾವು
ಮತ್ತೊಂದೆಡೆ ದಿತ್ವಾ ಚಂಡಮಾರುತದಿಂದ ಉಂಟಾದ ವಿನಾಶದಿಂದ ಚೇತರಿಸಿಕೊಳ್ಳಲು ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಸಹಾಯ ಮಾಡಲು ಭಾರತ, ಶನಿವಾರ ಆಪರೇಷನ್ ಸಾಗರ್ ಬಂಧು ಅನ್ನು ಪ್ರಾರಂಭಿಸಿದೆ. ಭಾರತೀಯ ವಾಯುಪಡೆಯ ಐಎಲ್-76 ವಿಮಾನ ಕೊಲಂಬೊ ತಲುಪಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಎಕ್ಸ್ ಮೂಲಕ ಮಾಹಿತಿ ನೀಡಿದ್ದರು. 80 ಎನ್‌ಡಿಆರ್‌ಎಫ್ ಸಿಬ್ಬಂದಿಯ ತಂಡಗಳೊಂದಿಗೆ, ಸರಿಸುಮಾರು 27 ಟನ್ ಪರಿಹಾರ ಸಾಮಗ್ರಿಗಳನ್ನು ಶ್ರೀಲಂಕಾಗೆ ಈಗ ವಾಯು ಮತ್ತು ಸಮುದ್ರದ ಮೂಲಕ ತಲುಪಿಸಲಾಗಿದೆ.
ಆಂಧ್ರಪ್ರದೇಶದಲ್ಲಿ 4 ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ
ದಿತ್ವಾ ಚಂಡಮಾರುತದ ಪ್ರಭಾವದಿಂದಾಗಿ, ನವೆಂಬರ್ 30 ರಿಂದ ಅಂದರೆ ಇಂದಿನಿಂದ ಡಿಸೆಂಬರ್ 3 ರವರೆಗೆ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಚಂಡಮಾರುತವು ಬಂಗಾಳಕೊಲ್ಲಿಯ ನೈಋತ್ಯ ಮತ್ತು ಉತ್ತರ ಶ್ರೀಲಂಕಾದ ಬಳಿ ಇದೆ. ಕಳೆದ ಆರು ಗಂಟೆಗಳಲ್ಲಿ ಇದು ಗಂಟೆಗೆ 10 ಕಿ.ಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸಿತು ಮತ್ತು ಬೆಳಗ್ಗೆ 11:30 ರವರೆಗೆ ಅಲ್ಲಿ ಕೇಂದ್ರೀಕೃತವಾಗಿತ್ತು. ನವೆಂಬರ್ 30 ರಂದು ಅಂದರೆ ಇಂದು ಆಂಧ್ರಪ್ರದೇಶದ ಪ್ರಕಾಶಂ, ನೆಲ್ಲೂರು, ಕಡಪ ಮತ್ತು ಅನ್ನಮಯ್ಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
ಇದನ್ನೂ ಓದಿ: ಬೇರೆ ಜಾತಿ ಎಂದು ಪ್ರೇಮಿಯ ಹೊಡೆದು ಕೊಂದ ಮನೆಯವರು: ಆತನ ಶವವನ್ನೇ ವರಿಸಿದ ಗೆಳತಿ


