Crime news ವೃದ್ಧನೊಬ್ಬನನ್ನು ಆತನ ಸೊಸೆ ಹಾಗೂ ಆಕೆಯ ಗೆಳೆಯ ಜೀವಂತವಾಗಿ ಸುಟ್ಟು ಹಾಕಿದ ಆರೋಪ ಕೇಳಿಬಂದಿದ್ದು, ಗಂಭೀರ ಗಾಯಗೊಂಡಿರುವ ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕಡಲೂರು (ತಮಿಳುನಾಡು): ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸುವಂತಹ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ವೃದ್ಧನೊಬ್ಬನನ್ನು ಆತನ ಸೊಸೆ ಹಾಗೂ ಆಕೆಯ ಗೆಳೆಯ ಜೀವಂತವಾಗಿ ಸುಟ್ಟು ಹಾಕಿದ ಆರೋಪ ಕೇಳಿಬಂದಿದ್ದು, ಗಂಭೀರ ಗಾಯಗೊಂಡಿರುವ ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Add Asianetnews Kannada as a Preferred SourcegooglePreferred

ಪೊಲೀಸರ ಮಾಹಿತಿ ಪ್ರಕಾರ, 64 ವರ್ಷದ ರಾಜೇಂದ್ರನ್ ಎಂಬವರು ತಮ್ಮ ಸೊಸೆ ಜಯಪ್ರಿಯಾ ಮತ್ತು ಆಕೆಯ ಗೆಳೆಯ ಮಣಿಕಂದನ್ ನಡುವಿನ ಅಕ್ರಮ ಸಂಬಂಧವನ್ನು ಪ್ರಶ್ನಿಸುತ್ತಿದ್ದರು. ಈ ವಿಚಾರ ಹಲವು ದಿನಗಳಿಂದ ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಿದ್ದು, ಇದೇ ದ್ವೇಷ ಕೊನೆಗೆ ಭೀಕರ ಕೃತ್ಯಕ್ಕೆ ತಿರುಗಿದೆ ಎನ್ನಲಾಗಿದೆ.

ರಸ್ತೆ ಮಧ್ಯ ಪೆಟ್ರೋಲ್ ಸುರಿದು ಬೆಂಕಿ

ಘಟನೆಯ ದಿನ ರಾಜೇಂದ್ರನ್ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಆರೋಪಿ ಮಣಿಕಂದನ್ ಹಾಗೂ ಆತನ ಸಹಚರರು ಮಾರ್ಗಮಧ್ಯೆ ತಡೆದಿದ್ದಾರೆ. ಬಳಿಕ ಎಲ್ಲರ ಎದುರಲ್ಲೇ ರಾಜೇಂದ್ರನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬೆಂಕಿಯಲ್ಲಿ ಸಿಲುಕಿದ ರಾಜೇಂದ್ರನ್ ಅವರ ಕಿರುಚಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ವೈದ್ಯರ ಮಾಹಿತಿ ಪ್ರಕಾರ, ರಾಜೇಂದ್ರನ್ ಅವರ ದೇಹದ ಮೇಲೆ ಶೇಕಡಾ 70ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ನಾಲ್ವರು ಆರೋಪಿಗಳ ಬಂಧನ

ಪ್ರಕರಣ ದಾಖಲಿಸಿಕೊಂಡ ಕಡಲೂರು ಪೊಲೀಸರು ತ್ವರಿತವಾಗಿ ತನಿಖೆ ಆರಂಭಿಸಿದ್ದು, ಪ್ರಮುಖ ಆರೋಪಿ ಮಣಿಕಂದನ್, ಸೊಸೆ ಜಯಪ್ರಿಯಾ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾಹೇತರ ಸಂಬಂಧಗಳಿಂದ ಹೆಚ್ಚುತ್ತಿರುವ ಅಪರಾಧಗಳು

ವಿವಾಹೇತರ ಸಂಬಂಧಗಳು ಕೇವಲ ಕುಟುಂಬ ಕಲಹಕ್ಕಷ್ಟೇ ಸೀಮಿತವಾಗದೇ, ಪ್ರಾಣಾಪಾಯಕ್ಕೂ ಕಾರಣವಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಪೊಲೀಸರು ಹೇಳಿದ್ದಾರೆ. ಇಂತಹ ಪ್ರಕರಣಗಳಲ್ಲಿ ನಿರಪರಾಧಿಗಳ ಜೀವಕ್ಕೂ ಅಪಾಯ ಎದುರಾಗುತ್ತಿರುವುದು ಸಮಾಜದ ದೊಡ್ಡ ಎಚ್ಚರಿಕೆಯ ಸಂಕೇತವಾಗಿದೆ.