ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಸಾಧುಗಳು ಕ್ರಿಕೆಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸಿಕ್ಸರ್ ಬಾರಿಸಿ ಅಚ್ಚರಿ ಮೂಡಿಸಿದ ಸಾಧುಗಳ ಬಿಂದಾಸ್ ಆಟಕ್ಕೆ ಅಲ್ಲಿದ್ದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾ ತಟದಲ್ಲಿ ನಡೆಯುತ್ತಿರುವ ಕುಂಭ ಮೇಳ ಆರಂಭವಾದಾಗಿನಿಂದಲೂ ಹಲವು ಸಾಧು ಸಂತರ ಚಿತ್ರ ವಿಚಿತ್ರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇದೆ. ಅದೇ ರೀತಿ ಈಗ ಸಾಧುಗಳು ಬಿಂದಾಸ್ ಆಗಿ ಕ್ರಿಕೆಟ್ ಆಡುತ್ತಿರುವ ವೀಡಿಯೋಗಳು ವೈರಲ್ ಆಗಿವೆ. ಈ ಬಾರಿ 144 ವರ್ಷಗಳ ನಂತರ ನಡೆಯುವ ಕುಂಭ ಮೇಳ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದು, ವಿಶ್ವದಲ್ಲೇ ಅತೀ ದೊಡ್ಡ ಧಾರ್ಮಿಕ ಸಮಾಗಮವೆನಿಸಿದ ಈ ಕುಂಭ ಮೇಳದಲ್ಲಿ ಈಗಾಗಲೇ ಕೋಟ್ಯಾಂತರ ಜನ ಪುಣ್ಯಸ್ನಾನ ಮಾಡಿದ್ದಾರೆ. ಈ ಕೋಟ್ಯಾಂತರ ಸಂಖ್ಯೆಯಲ್ಲಿ ಸೇರುವ ಈ ಮಹಾಸಂಗಮವನ್ನು ಮಾಧ್ಯಮಗಳಿಗಿಂತ ಹೆಚ್ಚು ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್‌ಗಳು ಕವರ್ ಮಾಡುತ್ತಿದ್ದು, ಈಗಾಗಲೇ ಕೆಲವು ಕಂಟೆಂಟ್ ಕ್ರಿಯೇಟರ್‌ಗಳ ಪ್ರೊಫೈಲ್‌ನಲ್ಲಿ ಕುಂಭಮೇಳದ ವಿವಿಧ ವಿಭಿನ್ನವಾದ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.
ಅದೇ ರೀತಿ ಈಗ ಗಂಗಾ ತಟದಲ್ಲಿ ಸಾಧುಗಳಿಬ್ಬರು ಕ್ರಿಕೆಟ್ ಆಡ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕೇಸರಿ ವಸ್ತ್ರದಲ್ಲಿರುವ ಸಾಧುಗಳು ಪಂಟರ್‌ಗಳೇ ಕ್ರಿಕೆಟ್ ಆಡುತ್ತಿದ್ದಾರೆ. ಹಲವು ಸೋಶಿಯಲ್ ಮೀಡಿಯಾ ಸೈಟ್‌ಗಳಲ್ಲಿ ಈ ವೀಡಿಯೋ ಪೋಸ್ಟ್ ಆಗಿದೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಜೀತೇಂದ್ರ ಪ್ರತಾಪ್ ಸಿಂಗ್ ಎಂಬುವವರು ಪೋಸ್ಟ್ ಮಾಡಿದ್ದು, ಮಹಾಕುಂಭದಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಸಾಧುಗಳು ಕ್ರಿಕೆಟ್ ಆಡುತ್ತಿದ್ದಾರೆ ಎಂದು ವೀಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಸಾಧುಗಳು ಬಹಳ ಸರಾಗವಾಗಿ ಸಿಕ್ಸರ್ ಬಾರಿಸುತ್ತಿರುವುದಕ್ಕೇ ಚೆಂಡನ್ನು ಬೌಂಡರಿಗಟ್ಟುವುದನ್ನು ನೋಡಬಹುದು. ಸಾಧುಗಳ ಬಿಂದಾಸ್ ಆಟ ನೋಡಿದ ಅಲ್ಲಿದ್ದವರು ಬೊಬ್ಬೆ ಹಾಕಿ ಹರ್ಷೋದ್ಗಾರ ವ್ಯಕ್ತಪಡಿಸುವುದನ್ನು ನೋಡಬಹುದು. ಜೊತೆಗೆ ಈ ದೃಶ್ಯಗಳನ್ನು ತಮ್ಮ ಮೊಬೈಲ್‌ಗಳಲ್ಲಿ ನೋಡುಗರು ಸೆರೆ ಹಿಡಿಯುತ್ತಿರುವುದು ವೀಡಿಯೋದಲ್ಲಿ ಕಂಡು ಬರುತ್ತಿದೆ. ಈ ವಿಡಿಯೋಗೆ ಅಂತರ್ಜಾಲದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಬ್ಬ ಬಳಕೆದಾರರು ಇದಕ್ಕಿಂತ ಸುಂದರವಾದ ದೃಶ್ಯ ಇನ್ನೊಂದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
