ತಾಂತ್ರಿಕ ಸಮಸ್ಯೆಯಿಂದಾಗಿ ತರಬೇತಿ ವಿಮಾನವೊಂದು ರಾಷ್ಟ್ರೀಯ ಹೆದ್ದಾರಿಯಲ್ಲೇ ತುರ್ತು ಲ್ಯಾಂಡಿಂಗ್ ಆದಂತಹ ಘಟನೆ ನಡೆದಿದೆ. ಆಕಾಶದಲ್ಲಿ ಹಾರಾಡುತ್ತಿದ್ದ ವೇಳೆ ಈ ತರಬೇತಿ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ವಿಮಾನವೂ ಹೆದ್ದಾರಿಯಲ್ಲೇ ಇಳಿದಿದೆ.

ಹೆದ್ದಾರಿಯಲ್ಲಿ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್:

ಪುದುಕೊಟೈ: ತಾಂತ್ರಿಕ ಸಮಸ್ಯೆಯಿಂದಾಗಿ ತರಬೇತಿ ವಿಮಾನವೊಂದು ರಾಷ್ಟ್ರೀಯ ಹೆದ್ದಾರಿಯಲ್ಲೇ ತುರ್ತು ಲ್ಯಾಂಡಿಂಗ್ ಆದಂತಹ ಘಟನೆ ನಡೆದಿದೆ. ಆಕಾಶದಲ್ಲಿ ಹಾರಾಡುತ್ತಿದ್ದ ವೇಳೆ ಈ ತರಬೇತಿ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ವಿಮಾನವೂ ಹೆದ್ದಾರಿಯಲ್ಲೇ ಇಳಿದಿದೆ. ವಿಮಾನ ಇಳಿಯುವುದಕ್ಕೆ ಹೆದ್ದಾರಿಯೇ ರನ್ ವೇಯಾಗಿ ಬದಲಾಗಿದೆ. ಖಾಸಗಿ ಸಂಸ್ಥೆಯೊಂದರ ತರಬೇತಿ ವಿಮಾನ ಇದಾಗಿದ್ದು, ತಮಿಳುನಾಡಿ ಪುಟುಕೊಟೈ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ವಿಮಾನದಲ್ಲಿದ್ದ ಪೈಲಟ್ ಹಾಗೂ ಟ್ರೈನಿ ಪೈಲಟ್ ಇಬ್ಬರು ಯಾವುದೇ ಹಾನಿಗೊಳಗಾಗದೇ ಪ್ರಾಣಪಾಯದಿಂದ ಪಾರಾಗಿದ್ದಾರೆ.

ವಿಮಾನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು

ಘಟನೆಗೆ ಸಂಬಂಧಿಸಿದಂತೆ ಪುದುಕೊಟೈ ಪೊಲೀಸರು ಹೇಳಿಕೆ ನೀಡಿದ್ದು, ಕೇರಳ ಮೂಲದ ಖಾಸಗಿ ವಿಮಾನ ಹಾರಾಟ ತರಬೇತಿ ಸಂಸ್ಥೆ ಇಕೆವಿ ಏರ್‌ ಗೆ ಸೇರಿದ ಸೆಸ್ಸ್ನಾ172 ಎಂಬ ಹೆಸರಿನ ಖಾಸಗಿ ತರಬೇತಿ ವಿಮಾನ ಇದಾಗಿದೆ. ಈ ವಿಮಾನವೂ ಸೇಲಂ ವಿಮಾನ ನಿಲ್ದಾಣದಿಂದ ಶಿವಗಂಗಾ ಜಿಲ್ಲೆಯ ಕಾರೈಕುಡಿ ವಿಮಾನ ನಿಲ್ದಾಣದತ್ತ ಪ್ರಯಾಣಿಸುತ್ತಿತ್ತು. ಈ ವೇಳೆ ವಿಮಾನದ ಪೈಲಟ್‌ಗೆ ವಿಮಾನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಆಗಿರುವುದು ಕಾಣಿಸಿದೆ. 12.45ರ ಸುಮಾರಿಗೆ ಇದು ಪೈಲಟ್ ಗಮನಕ್ಕೆ ಬಂದಿದೆ. ಹೀಗಾಗಿ ಹೆಚ್ಚಿನ ಅನಾಹುತವಾಗದಂತೆ ತಡೆಯುವುದಕ್ಕಾಗಿ ವಿಮಾನದ ಪೈಲಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ.

ತಮಿಳುನಾಡಿನ ಪುದುಕೊಟೈಯಲ್ಲಿ ಘಟನೆ:

ನಂತರ ವಿಮಾನದ ಪೈಲಟ್‌ ತಿರುಚಿಯಿಂದ ಪುದುಕೊಟೈಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 336ರಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡುವುದಕ್ಕೆ ಮುಂದಾಗಿದ್ದಾರೆ. ನಂತರ ಅಮ್ಮಚಥಿರಂ ಗ್ರಾಮದಲ್ಲಿ ಕೀರನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ವಿಮಾನದಲ್ಲಿದ್ದವರನ್ನು ಕೇರಳದ ವಿಮಾನ ಪೈಲಟ್ 30 ವರ್ಷದ ರಾಹುಲ್ ಹಾಗೂ ತರಬೇತಿಯಲ್ಲಿರುವ ಪೈಲಟ್ 27 ವರ್ಷದ ಹಸೀರ್ ಎಂದು ಗುರುತಿಸಲಾಗಿದೆ.

ಈ ವಿಮಾನವೂ ಮುಂಬೈ ಮೂಲದ ಸಚಿನ್ ಭಾನೆ ಎಂಬುವವರಿಗೆ ಸೇರಿದ ವಿಮಾನವಾಗಿದೆ. ಮತ್ತು ಈ ವಿಮಾನವನ್ನು ಇಲ್ಲಿಂದ ಸ್ಥಳಾಂತರಿಸುವ ಮೊದಲು ಪರಿಶೀಲಿಸಲು ಮತ್ತು ಸರಿಪಡಿಸಲು ಚೆನ್ನೈನಿಂದ ತಾಂತ್ರಿಕ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಹಾಗೂ ಸಾರ್ವಜನಿಕ ಆಸ್ತಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿ:

ಆದರೆ ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಮಾತ್ರ ಬಹಳ ತೊಂದರೆಯಾಗಿತ್ತು. ಆದರೆ ನಂತರ ವಿಮಾನವನ್ನು ಬೇರೆಡೆ ಸ್ಥಳಾಂತರಿಸಿದ ನಂತರ ಸಂಚಾರ ಮರು ಆರಂಭವಾಯ್ತು. ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಂಸ್ಥೆಯ ಮಹಾನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ನಾಯಿ ಕಚ್ಚಿದ್ದಕ್ಕೆ ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ: 3 ತಿಂಗಳ ಬಳಿಕ ರೇಬೀಸ್‌ಗೆ ಯುವಕ ಬಲಿ

ಇದನ್ನೂ ಓದಿ: ಹಾರ್ನ್ ಮಾಡಿದ್ರು ಅಂತ ಸ್ಕೂಟಿಯಲ್ಲಿ ಸಾಗ್ತಿದ್ದ ಕುಟುಂಬಕ್ಕೆ ಡಿಕ್ಕಿ ಹೊಡೆದ ಕಾರು

View post on Instagram