ಮಹಾರಾಜಾ ಕಾಲೇಜಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ವರದಿ ಮಾಡಿದ ಏಷ್ಯಾನೆಟ್ ನ್ಯೂಸ್ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದು ಕೇರಳದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಅಕ್ರಮದ ವಿರುದ್ಧ ಧ್ವನಿ ಎತ್ತಿದ ಪತ್ರಕರ್ತೆ ವಿರುದ್ಧ ಕೇಸ್ ಹಾಕಿರುವ ಸರ್ಕಾರದ ನಡೆಯನ್ನೇ ಸ್ವತಃ ತಮ್ಮದೇ ಪಕ್ಷದ ನಾಯಕರು ಖಂಡಿಸಿದ್ದಾರೆ.
ತಿರುವನಂತಪುರಂ(ಜೂ.11): ಆಡಳಿತರೂಢ ಪಕ್ಷ ಕಮ್ಯೂನಿಸ್ಟ್ ಪಾರ್ಟಿಯೊಳಗೆ ಇದೀಗ ಅಸಮಾಧಾನ ಸ್ಫೋಟಗೊಂಡಿದೆ. ಮಹಾರಾಜ ಕಾಲೇಜಿನ ಅಕ್ರಮ ಕುರಿತು ವರದಿ ಮಾಡಿದ ಏಷ್ಯಾನೆಟ್ ನ್ಯೂಸ್ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧವೇ ಪೊಲೀಸಲು ಕೇಸ್ ದಾಖಲಿಸಿದ್ದಾರೆ. ಸರ್ಕಾರದ ಈ ನಡೆಯನ್ನು ತಮ್ಮದೇ ಪಕ್ಷದ ಸಿಪಿಐ ನಾಯಕ ಸಿ ದಿವಾಕರನ್, ವರದಿಗಾರ್ತಿ ಅಖಿಲಾ ನಂದಕುಮಾರ್‌ಗೆ ಬೆಂಬಲ ಸೂಚಿಸಿದ್ದಾರೆ.ಅಖಿಲಾ ನಂದಕುಮಾರ್ ವಿರುದ್ಧ ಸರ್ಕಾರ ತೆಗೆದುಕೊಂಡ ನಡೆ ಸರಿಯಲ್ಲ. ಅಕ್ರಮ ವರದಿ ಮಾಡಿದ ವರದಿಗಾರ್ತಿ ಮೇಲೆ ಪ್ರಕರಣ ಹಾಕಿದ್ದು ಯಾಕೆ? ವರದಿಗಾರ್ತಿ ಮಾಡಿದ ತಪ್ಪೇನು? ಎಂದು ಸರ್ಕಾರವನ್ನೇ ಪ್ರಶ್ನಿಸಿದ್ದಾರೆ.
ಸಿಪಿಐ ಹಾಗೂ ಎಡರಂಗ ಪಕ್ಷಗಳು ಮಾಧ್ಯಮ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ. ಓರ್ವ ಸಮರ್ಥ ನಾಯಕ ಟೀಕೆಯನ್ನು ಎದುರಿಸಬೇಕು. ಸಮಾಜ ಓರೆ ಕೋರೆಗಳನ್ನು ಮಾಧ್ಯಮಗಳು ಜನರ ಮುಂದಿಡುತ್ತದೆ. ಅಕ್ರಮಗಳನ್ನು ಬಯಲಿಗೆಳೆಯುತ್ತದೆ. ಈ ಅಕ್ರಮಗಳ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಇಲ್ಲಿ ವರದಿಗಾರ್ತಿ ಮೇಲೆಯೆ ಪ್ರಕರಣ ದಾಖಲಿಸಿದ್ದು ಸರಿಯಲ್ಲ. ಪೊಲೀಸ್ ಬಳಸಿ, ಏಷ್ಯಾನೆಟ್ ನ್ಯೂಸ್ ವರದಿಗಾರ್ತಿ ಮೇಲೆ ದೂರು ದಾಖಲಿಸಿರುವುದು ಸರಿಯಾದ ನಡೆ ಅಲ್ಲ ಎಂದು ದಿವಾಕರನ್ ಹೇಳಿದ್ದಾರೆ. ಸುಳ್ಳು ಆರೋಪವನ್ನು ಮುಂದಿಟ್ಟುಕೊಂಡು, ಪೊಲೀಸರು ಸರ್ಕಾರವನ್ನು ಮೆಚ್ಚಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಅಖಿಲಾ ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದಿವಾಕರನ್ ಹೇಳಿದ್ದಾರೆ.
ಅಂಕಪಟ್ಟಿ ಅಕ್ರಮ ಬಯಲು ಮಾಡಿದ ಏಷ್ಯಾನೆಟ್ ವರದಿಗಾರ್ತಿ ವಿರುದ್ಧ ಕೇಸ್: ಬಿಜೆಪಿ ಖಂಡನೆ
ಸರ್ಕಾರದ ಈ ತಪ್ಪು ನಡೆಯನ್ನು ಸೂಕ್ತ ವೇದಿಕೆಯಲ್ಲಿ ಚರ್ಚಿಸುತ್ತೇನೆ. ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸುತ್ತೇನೆ ಎಂದು ದಿವಾಕರನ್ ಹೇಳಿದ್ದಾರೆ. CPI(M) ಕಾರ್ಯದರ್ಶಿ ಎಂ ಗೋವಿಂದನ್ ಪೊಲೀಸರು ಹಾಗೂ ಸರ್ಕಾಕರದ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಗೋವಿಂದನ್ ಯಾವ ಆಧಾರದಲ್ಲಿ ಈ ಘಟನೆಯನ್ನು ಸಮರ್ಥಿಸುತ್ತಿದ್ದಾರೆ ಅನ್ನೋದೇ ಅರ್ಥವಾಗುತ್ತಿಲ್ಲ ಎಂದು ದಿವಾಕರನ್ ಹೇಳಿದ್ದಾರೆ. ಎಸ್ಎಫ್ಐ ವಿರೋಧಿ ನಡೆ ಯಾರೇ ಮಾಡಿದರೂ ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಮಾಧ್ಯಮದ ಹೆಸರಿನಲ್ಲಿ ಎಸ್‌ಎಫ್ಐ ವಿರೋಧಿಸಿದರೆ ಪ್ರಕರಣ ದಾಖಲಾಗಲಿದೆ ಎಂದು ಅಖಿಲಾ ನಂದಕುಮಾರ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಎಂ ಗೋವಿಂದನ್ ಸಮರ್ಥಿಸಿಕೊಂಡಿದ್ದರು.
ಎರ್ನಾಕುಲಂ ಮಹಾರಾಜಾ ಕಾಲೇಜಿನಲ್ಲಿ ನಡೆದಿರುವ ಅತಿಥಿ ಉಪನ್ಯಾಸಕರ ನೇಮಕ ಅಕ್ರಮ ಕುರಿತು ಏಷ್ಯಾನೆಟ್ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಈ ವರದಿಗೆ ತೆರಳಿದ ವರದಿಗಾರ್ತಿ ಅಖಿಲಾ ನಂದಕುಮಾರ್, ಮಹಾರಾಜಾ ಕಾಲೇಜಿನ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ನೇರ ಪ್ರಸಾರದ ಮೂಲಕ ಕಾಲೇಜಿನ ಪ್ರಾಂಶುಪಾಲರ ಪ್ರತಿಕ್ರಿಯೆ ಜೊತೆಗೆ ಇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಪ್ರತಿಕ್ರಿಯೆ ಪಡೆದಿದ್ದರು. ಈ ವೇಳೆ ಎಸ್ಎಫ್ಐ ಕಾರ್ಯದರ್ಶಿ ಆರ್ಶೂ ನಡೆಸಿರುವ ಮತ್ತೊಂದು ಅಕ್ರಮ ಬಯಲಿಗೆ ಬಂದಿದೆ. ಯಾವುದೇ ಪರೀಕ್ಷೆ ಬರೆಯದಿದ್ದರೂ ಅರ್ಶೂ ಅಂಕಪಟ್ಟಿಯಲ್ಲಿ ಎಲ್ಲಾ ವಿಷಯದಲ್ಲಿ ಪಾಸ್ ಎಂದು ನಮೂಜಿಸಲಾಗಿದೆ. ಈ ಅಕ್ರಮವೂ ಭಾರಿ ಸದ್ದು ಮಾಡಿತ್ತು.
ಅಂಕಪಟ್ಟಿ ಅಕ್ರಮ: ಅಪರಾಧಿಗಳ ಬದಲು ವರದಿ ಮಾಡಿದ್ದ ಪತ್ರಕರ್ತೆ ಹಿಂದೆ ಬಿದ್ದ ಕೇರಳ ಪೊಲೀಸರು
ಮಹಾರಾಜಾ ಕಾಲೇಜಿನ ಅಕ್ರಮಗಳನ್ನು ಏಷ್ಯಾನೆಟ್ ನ್ಯೂಸ್ ದಾಖಲೆ ಸಮೇತ ಬಹಿರಂಗ ಮಾಡಿತ್ತು. ಆದರೆ ಸಿಪಿಐ ವಿದ್ಯಾರ್ಥಿ ಘಟಕವಾಗಿರುವ ಎಸ್ಎಫ್ಐ ವಿರುದ್ಧ ಸುದ್ದಿ ಮಾಡಿದ ಕಾರಣಕ್ಕೆ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ.
