ಹಂತಹಂತವಾಗಿ ವಿವಿಧ ಕಂಪನಿಗಳಿಗೆ ಲಸಿಕೆ ಬಿಡುಗಡೆಗೆ ಅನುಮತಿ | ಖಾಸಗಿಯಾಗಿ ಸಿಗುವ ಲಸಿಕೆಗೂ ಬೆಲೆ ಸರ್ಕಾರದಿಂದಲೇ ನಿಗದಿ ಸಾಧ್ಯತೆ
ನವದೆಹಲಿ(ಡಿ.25): ಮುಂದಿನ ವರ್ಷದ ಏಪ್ರಿಲ್-ಜೂನ್ ನಡುವೆ ಭಾರತದ ಮುಕ್ತ ಮಾರುಕಟ್ಟೆಯಲ್ಲಿ ಕೊರೋನಾ ಲಸಿಕೆ ಜನರಿಗೆ ಸಿಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಆರಂಭದಲ್ಲಿ ಆದ್ಯತಾ ವಲಯದ ಜನರಿಗೆ ಸರ್ಕಾರವೇ ಲಸಿಕೆ ನೀಡಿದ ನಂತರ ಬೇರೆ ಬೇರೆ ಕೊರೋನಾ ಲಸಿಕೆಗಳು ಸರ್ಕಾರದ ಅನುಮತಿ ಪಡೆದು ಸಾಕಷ್ಟುಪ್ರಮಾಣದಲ್ಲಿ ಪೂರೈಕೆಯಾದರೆ ಅವುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ಸಿಗುವಂತೆ ಮಾಡುವ ಚಿಂತನೆಯನ್ನು ಸರ್ಕಾರ ಹೊಂದಿದೆ.
ಬ್ರಿಟನ್‌ನಿಂದ ಬಂದ ಮತ್ತೆ ನಾಲ್ವರಲ್ಲಿ ಸೋಂಕು ಪತ್ತೆ
ಜನವರಿ ವೇಳೆಗೆ ಯಾವುದಾದರೂ ಒಂದು ಲಸಿಕೆಗೆ ಒಪ್ಪಿಗೆ ನೀಡಿ, ಅದನ್ನು ಸರ್ಕಾರದಿಂದಲೇ ವೈದ್ಯಕೀಯ ಸಿಬ್ಬಂದಿಗೆ ಹಾಗೂ ವಯಸ್ಸಾದವರಿಗೆ ನೀಡಲಾಗುತ್ತದೆ. ಆದರೆ, ಈ ವೇಳೆಗೆ ಸಾಕಷ್ಟುಲಸಿಕೆ ಪೂರೈಕೆಯಾಗುತ್ತಿರುವುದಿಲ್ಲ. ನಂತರ ಮಾಚ್‌ರ್ ಮತ್ತು ಏಪ್ರಿಲ್ ವೇಳೆಗೆ ಇನ್ನೂ 2-3 ಲಸಿಕೆಗಳು ಸರ್ಕಾರದ ಒಪ್ಪಿಗೆ ಪಡೆಯುವ ಸಾಧ್ಯತೆಯಿದೆ. ಆ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ಲಭಿಸುವಂತೆ ಮಾಡಲಾಗುತ್ತದೆ. ಆದರೆ, ಆ ಲಸಿಕೆಗೂ ಸರ್ಕಾರವೇ ಬೆಲೆ ನಿಗದಿಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಭಾರತ ಬಹು-ಲಸಿಕೆ ನೀತಿ ಅಳವಡಿಸಿಕೊಳ್ಳಲಿದೆ. ಹೀಗಾಗಿ ಮೊದಲಿಗೆ ಸಿಕ್ಕ ಲಸಿಕೆಯನ್ನು ಸರ್ಕಾರದಿಂದಲೇ ಆದ್ಯತಾ ವರ್ಗಕ್ಕೆ ನೀಡಿ, ನಂತರ ಬರುವ ಲಸಿಕೆಗಳನ್ನು ಎಲ್ಲರಿಗೂ ಸಿಗುವಂತೆ ಮಾಡಲಿದೆ. ಸದ್ಯ ದೇಶದಲ್ಲಿ ಐದು ಕೊರೋನಾ ಲಸಿಕೆಗಳು ಮನುಷ್ಯನ ಮೇಲಿನ ಟ್ರಯಲ್ ಹಂತದಲ್ಲಿವೆ. ಅವುಗಳಲ್ಲಿ ಸೀರಂ ಸಂಸ್ಥೆಯ ಕೋವಿಶೀಲ್ಡ್ (ಆಕ್ಸ್‌ಫರ್ಡ್) ಲಸಿಕೆ, ಭಾರತ್ ಬಯೋಟೆಕ್‌ನ ಕೋವಾಕ್ಸಿನ್, ಡಾ ರೆಡ್ಡೀಸ್‌ನ (ರಷ್ಯಾ ಮೂಲದ) ಸ್ಪುಟ್ನಿಕ್-5 ಹಾಗೂ ಜೈಡಸ್ ಕ್ಯಾಡಿಲಾ ಲಸಿಕೆಗಳು 3ನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿವೆ. ಅಮೆರಿಕದ ಫೈಝರ್ ಕಂಪನಿ ಆ ದೇಶದ ಟ್ರಯಲ್‌ಗಳನ್ನೇ ಆಧರಿಸಿ ಭಾರತದಲ್ಲಿ ಅನುಮತಿ ಕೋರಿದೆ.
32 ಲಕ್ಷ ಗ್ರಾಹಕರನ್ನು ವಂಚಿಸಿದ ಅಗ್ರಿಗೋಲ್ಡ್‌ನ 4109 ಕೋಟಿ ರು. ಆಸ್ತಿ ಜಪ್ತಿ
ಮಾಚ್‌ರ್ ವೇಳೆಗೆ ಇವುಗಳಲ್ಲಿ ಸರ್ಕಾರದ ಒಪ್ಪಿಗೆ ಪಡೆದ ಲಸಿಕೆಗಳ ಸುಮಾರು 50 ಕೋಟಿ ಡೋಸ್‌ಗಳು ಲಭಿಸುವ ಸಾಧ್ಯತೆಯಿದೆ. ಆಗ ಮೆಡಿಕಲ್ ಸ್ಟೋರ್‌ಗಳಲ್ಲೂ ಇವುಗಳ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ. ಈ ಲಸಿಕೆಗಳನ್ನು ಖಾಸಗಿ ವೈದ್ಯರು ಜನರಿಗೆ ನೀಡಬಹುದು. ಆದರೆ, ಅವರೂ ಸರ್ಕಾರದ ಕೋವಿನ್ ಆನ್‌ಲೈನ್ ಜಾಲದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಲಸಿಕೆ ನೀಡುವ ಕಾರ್ಯಕ್ರಮವನ್ನು ಆಧಾರ್‌ಗೆ ಜೋಡಿಸುವುದಕ್ಕೂ ಚಿಂತನೆ ನಡೆದಿದೆ ಎಂದು ಮೂಲಗಳು ಹೇಳಿವೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 25, 2020, 10:14 AM IST