ಬ್ರಿಟನ್‌ನಿಂದ ಬಂದ ಮತ್ತೆ ನಾಲ್ವರಲ್ಲಿ ಸೋಂಕು ಪತ್ತೆ
ಒಂದೇ ಕುಟುಂಬದ ಮೂವರಿಗೆ ಸೋಂಕು| ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ: ಬಿಬಿಎಂಪಿ| ಸೋಂಕಿತರಿಗೆ ಕೆ.ಸಿ. ಜನರಲ್ ಹಾಗೂ ಬೌರಿಂಗ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ|
ಬೆಂಗಳೂರು(ಡಿ.25): ಬ್ರಿಟನ್‌ನಿಂದ ಡಿ.19ರಂದು ಬೆಂಗಳೂರಿಗೆ ಆಗಮಿಸಿದ ಮತ್ತೆ ನಾಲ್ವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಬ್ರಿಟನ್‌ನಿಂದ ವಾಪಸ್ ಆಗಿರುವ ಏಳು ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಂತಾಗಿದೆ.
ಡಿ.21ರಂದು ಬ್ರಿಟನ್‌ನಿಂದ ಬೆಂಗಳೂರಿಗೆ ಆಗಮಿಸಿದ 211 ಮಂದಿಯ ಪೈಕಿ ಮೂರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಡಿ.19ರಂದು ಆಗಮಿಸಿದ್ದ 208 ಬ್ರಿಟನ್ ಪ್ರಯಾಣಿಕರ ಸೋಂಕು ಪರೀಕ್ಷಾ ವರದಿ ಲಭ್ಯವಾಗಿದ್ದು, ಮತ್ತೆ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.
ಈ ಪೈಕಿ ಒಂದು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರು ಕಳೆದ ಡಿ.19ರಂದು ಬ್ರಿಟನ್‌ನಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಬ್ರಿಟನ್ ವೈರಸ್ ರಾಜ್ಯಕ್ಕೆ ಬಂತಾ..? ಸೀಕ್ವೆನ್ಸ್ ವರದಿ ಪ್ರಕಟ
ಗುರುವಾರ ಸೋಂಕು ದೃಢಪಟ್ಟವರು ಮಹದೇವಪುರ ವಲಯದ ವ್ಯಾಪ್ತಿಯ ಒಂದು ವರ್ಷದ ಹೆಣ್ಣು ಮಗು, 35 ವರ್ಷದ ಪುರುಷ, ಹಾಗೂ 31 ವರ್ಷದ ಮಹಿಳೆಯಾಗಿದ್ದಾರೆ. ಮತ್ತೊಬ್ಬ ಸೋಂಕಿತ ಪಶ್ಚಿಮ ವಲಯಕ್ಕೆ ಸೇರಿದ 35 ವರ್ಷ ಪುರುಷ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನುಳಿದಂತೆ ಬ್ರಿಟನ್ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಡಿ.12ರಿಂದ ಡಿ.21ರ ವರೆಗೆ ಬೆಂಗಳೂರಿಗೆ ಆಗಮಿಸಿದ 1,582 ಪ್ರಯಾಣಿಕರ ವಿವರವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿದ್ದರು. ಅದರಲ್ಲಿ ಸುಮಾರು 400ಕ್ಕೂ ಅಧಿಕ ಪ್ರಯಾಣಿಕರನ್ನು ಬಿಬಿಎಂಪಿ ಕೋವಿಡ್ ಪರೀಕ್ಷೆಗೆ ಒಳಪಡಿಸಿದೆ. ಇನ್ನೂ 800ಕ್ಕೂ ಅಧಿಕ ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಬೇಕಾಗಿದೆ. ಇನ್ನಷ್ಟುಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ
ಸಾಧ್ಯತೆ ಇವೆ.
ಸೋಂಕಿತರಿಗೆ ಕೆ.ಸಿ. ಜನರಲ್ ಹಾಗೂ ಬೌರಿಂಗ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಪರ್ಕಿತರ ಮಾಹಿತಿ ಪಡೆಯಲಾಗಿದೆ. ಅವರಿಗೆ ಕ್ವಾರಂಟೈನ್‌ಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.