ನವದೆಹಲಿ(ಡಿ.19): ದೇಶದಲ್ಲಿ ಕೊರೋನಾ ಲಸಿಕೆ ನೀಡಿಕೆ ಆರಂಭವಾದ ನಂತರ ಯಾರಿಗೂ ಅದು ಕಡ್ಡಾಯವಾಗಿರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜೊತೆಗೆ, ಈಗಾಗಲೇ ಕೊರೋನಾದಿಂದ ಗುಣವಾದವರೂ ಲಸಿಕೆ ತೆಗೆದುಕೊಳ್ಳಬೇಕು ಮತ್ತು ಲಸಿಕೆಯ ಎರಡನೇ ಡೋಸ್‌ ತೆಗೆದುಕೊಂಡ ಎರಡು ವಾರಗಳ ನಂತರ ದೇಹದಲ್ಲಿ ಕೊರೋನಾ ವಿರುದ್ಧ ಹೋರಾಡುವ ಆ್ಯಂಟಿಬಾಡಿ ಅಭಿವೃದ್ಧಿಯಾಗತೊಡಗುತ್ತದೆ ಎಂದೂ ಹೇಳಿದೆ.

ಕೊರೋನಾ ಲಸಿಕೆಯ ಕುರಿತು ದೇಶಾದ್ಯಂತ ಸಾಕಷ್ಟುಊಹಾಪೋಹಗಳು ಹಾಗೂ ಸುಳ್ಳುಸುದ್ದಿಗಳು ಹರಿದಾಡುತ್ತಿರುವುದರಿಂದ ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಎಫ್‌ಎಕ್ಯು (ಆಗಾಗ ಕೇಳಲಾಗುವ ಪ್ರಶ್ನೆಗಳು) ಬಿಡುಗಡೆ ಮಾಡಿದೆ. ಅದರಲ್ಲಿ, ನಮ್ಮ ದೇಶದಲ್ಲಿ ನೀಡಲಾಗುವ ಕೊರೋನಾ ಲಸಿಕೆಯು ಬೇರಾವುದೇ ದೇಶದಲ್ಲಿ ನೀಡಲಾಗುತ್ತಿರುವ ಲಸಿಕೆಯಷ್ಟೇ ಪರಿಣಾಮಕಾರಿಯಾಗಿರುತ್ತದೆ ಎಂದೂ ಸ್ಪಷ್ಟನೆ ನೀಡಿದೆ.

ಲಸಿಕೆಯಿಂದ ನಮಗೆ ಪ್ರಯೋಜನವಾಗಬೇಕು ಹಾಗೂ ನಮ್ಮಿಂದ ಬೇರೆಯವರಿಗೆ ಕೊರೋನಾ ಹರಡಬಾರದು ಅಂದರೆ 28 ದಿನಗಳ ಅಂತರದಲ್ಲಿ ಎರಡು ಡೋಸ್‌ ತೆಗೆದುಕೊಳ್ಳಬೇಕು. ದೇಶದಲ್ಲಿ ಲಸಿಕೆಯ ಟ್ರಯಲ್‌ಗಳು ಇನ್ನೂ ಬೇರೆ ಬೇರೆ ಹಂತಗಳಲ್ಲಿವೆ. ಲಸಿಕೆಯ ದಕ್ಷತೆ ಹಾಗೂ ಸುರಕ್ಷತೆ ಸಾಬೀತಾದ ನಂತರವೇ, ಸಾಧ್ಯವಾದಷ್ಟುಬೇಗ, ಸರ್ಕಾರ ಲಸಿಕೆ ಬಿಡುಗಡೆ ಮಾಡಲಿದೆ. ಎಲ್ಲಾ ಲಸಿಕೆಗಳಿಂದಲೂ ಇರುವಂತೆ ಕೊರೋನಾ ಲಸಿಕೆಯಿಂದಲೂ ಕೆಲವರಲ್ಲಿ ಸಣ್ಣ ಜ್ವರ, ನೋವು ಇತ್ಯಾದಿ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ತಿಳಿಸಿದೆ.

ಕ್ಯಾನ್ಸರ್‌, ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಸಮಸ್ಯೆಗಳಿಗೆ ಔಷಧ ಸೇವಿಸುತ್ತಿರುವವರೂ ಲಸಿಕೆ ತೆಗೆದುಕೊಳ್ಳಬಹುದು. ವಾಸ್ತವವಾಗಿ ಇವರು ಕೊರೋನಾದಿಂದ ಹೆಚ್ಚು ಅಪಾಯಕ್ಕೆ ತುತ್ತಾಗುವುದರಿಂದ ಲಸಿಕೆ ತೆಗೆದುಕೊಳ್ಳುವುದೇ ಒಳ್ಳೆಯದು. ಮೊದಲಿಗೆ ಆರೋಗ್ಯ ಸೇವೆಯಲ್ಲಿರುವವರು, ಹೈ-ರಿಸ್ಕ್‌ ವರ್ಗದವರು ಹಾಗೂ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರ ಮೊಬೈಲ್‌ಗೆ ಲಸಿಕೆ ನೀಡುವ ಸ್ಥಳ, ಸಮಯ ಮುಂತಾದ ವಿವರಗಳ ಸಂದೇಶ ಕಳುಹಿಸಲಾಗುತ್ತದೆ ಎಂದು ಹೇಳಿದೆ.

ದೇಶದಲ್ಲಿ ಸದ್ಯ ಆರು ಕೊರೋನಾ ಲಸಿಕೆಗಳ ಟ್ರಯಲ್‌ ನಡೆಯುತ್ತಿದೆ. ಅವು - ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್‌, ಜೈಡಸ್‌ ಕ್ಯಾಡಿಲಾ ಲಸಿಕೆ, ಜೆನೋವಾ ಲಸಿಕೆ, ಆಕ್ಸ್‌ಫರ್ಡ್‌ನ ಕೋವಿಶೀಲ್ಡ್‌, ರಷ್ಯಾದ ಸ್ಪುಟ್ನಿಕ್‌-5, ಬಯೋಲಾಜಿಕಲ್‌ ಇ ಲಿ. ಲಸಿಕೆ.

ಎಫ್‌ಎಕ್ಯೂನಲ್ಲೇನಿದೆ?

- ದಕ್ಷತೆ, ಸುರಕ್ಷತೆ ಖಾತ್ರಿ ಬಳಿಕವೇ ಸರ್ಕಾರದಿಂದ ಲಸಿಕೆ ಬಿಡುಗಡೆ

- 28 ದಿನಗಳಲ್ಲಿ 2 ಡೋಸ್‌ ಪಡೆದರಷ್ಟೇ ಲಸಿಕೆಯಿಂದ ಪ್ರಯೋಜನ

- ಎಲ್ಲ ಲಸಿಕೆಗಳಂತೆ ಇದರಿಂದಲೂ ಜ್ವರ, ನೋವು, ಅಡ್ಡಪರಿಣಾಮ

- ಲಸಿಕೆ ಬಗ್ಗೆ ಸುಳ್ಳುಸುದ್ದಿ ಹಬ್ಬುತ್ತಿರುವ ಕಾರಣ ಕೇಂದ್ರದಿಂದ ಸ್ಪಷ್ಟನೆ