ಜನವರಿಯಿಂದ ಲಸಿಕೆ ವಿತರಣೆ, ಅಕ್ಟೋಬರ್‌ಗೆ ದೇಶ ಸಹಜತೆಗೆ| ಪುಣೆಯ ಸೀರಂ ಲಸಿಕೆ ಕಂಪನಿ ಸಿಇಒ ಪೂನಾವಾಲಾ ಭವಿಷ್ಯ
ನವದೆಹಲಿ(ಡಿ.14): 2021ರ ಜನವರಿಯಲ್ಲಿ ಭಾರತದಲ್ಲಿ ತುರ್ತು ಕೊರೋನಾ ಲಸಿಕೆ ನೀಡಿಕೆ ಆರಂಭವಾಗಬಹುದು ಹಾಗೂ ಅಕ್ಟೋಬರ್ ವೇಳೆಗೆ ಎಲ್ಲರಿಗೂ ಲಸಿಕೆ ದೊರೆತು ಕೊರೋನಾ ಪೂರ್ವದ ಸಹಜ ಸ್ಥಿತಿಗೆ ದೇಶ ಮರಳಬಹುದು ಎಂದು ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ಉತ್ಪಾದನಾ ಸಂಸ್ಥೆಯಾದ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅದರ್ ಪೂನಾವಾಲಾ ಹೇಳಿದ್ದಾರೆ.
'ಗಂಭೀರ ಸ್ವರೂಪದ ಅಲರ್ಜಿ ಇರುವವರು ಫೈಝರ್‌ನಿಂದ ದೂರವಿರಿ!'
ತಮ್ಮ ಸಂಸ್ಥೆ ತಯಾರಿಸುತ್ತಿರುವ ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾದ ‘ಕೋವಿಶೀಲ್ಡ್’ ಲಸಿಕೆಗೆ ಈ ತಿಂಗಳಾಂತ್ಯದೊಳಗೆ ತುರ್ತು ಬಳಕೆಯ ಅನುಮತಿಯನ್ನು ಕೇಂದ್ರ ಸರ್ಕಾರ ನೀಡಬಹುದು. ನಂತರ ಮುಂದಿನ ತಿಂಗಳಿನಿಂದಲೇ ಕೊರೋನಾ ವಾರಿಯರ್‌ಗಳಿಗೆ ಹಾಗೂ ಹೈ-ರಿಸ್ಕ್ ವರ್ಗದವರಿಗೆ ಲಸಿಕೆ ವಿತರಣೆ ಆರಂಭವಾಗಬಹುದು. ಆದರೆ, ಎಲ್ಲ ಜನರಿಗೂ ಲಸಿಕೆ ನೀಡಲು ಅಗತ್ಯವಿರುವ ವಿಸ್ತೃತ ಲೈಸನ್ಸ್ ದೊರೆಯುವುದು ಸ್ವಲ್ಪ ತಡವಾಗಬಹುದು ಎಂದೂ ಅವರು ತಿಳಿಸಿದ್ದಾರೆ.
‘ಒಮ್ಮೆ ಶೇ.20ರಷ್ಟುಭಾರತೀಯರಿಗೆ ಲಸಿಕೆ ದೊರೆತರೆ ಆಗ ದೇಶಕ್ಕೆ ಆತ್ಮವಿಶ್ವಾಸ ಮೂಡುತ್ತದೆ. ಹಳೆಯ ದಿನಗಳು ಮರುಕಳಿಸುತ್ತವೆ ಎಂಬ ನಂಬಿಕೆ ಬರುತ್ತದೆ. ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಎಲ್ಲರಿಗೂ ಬೇಕಾದಷ್ಟುಲಸಿಕೆ ಲಭ್ಯವಾಗುತ್ತದೆ. ಆನಂತರ ಸಹಜ ಸ್ಥಿತಿ ಮರುಕಳಿಸುತ್ತದೆ’ ಎಂದು ದಿ ಎಕನಾಮಿಕ್ ಟೈಮ್ಸ್ ಗ್ಲೋಬಲ್ ಬಿಸಿನೆಸ್ ಸಮಿಟ್‌ನಲ್ಲಿ ಭಾನುವಾರ ಮಾತನಾಡುವಾಗ ಪೂನಾವಾಲಾ ತಿಳಿಸಿದರು.
ಸೀರಂ, ಭಾರತ್ ಬಯೋಟೆಕ್‌ನಿಂದ ಮತ್ತಷ್ಟು ಮಾಹಿತಿ ಕೋರಿದ ಕೇಂದ್ರ!
ಸೀರಂ ಸಂಸ್ಥೆ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳು ತಮ್ಮತಮ್ಮ ಕೊರೋನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿವೆ. ಆದರೆ, ತಜ್ಞರ ಸಮಿತಿಯು ಕಳೆದ ವಾರ ಈ ಸಂಸ್ಥೆಗಳ ಲಸಿಕೆಯ ಸುರಕ್ಷತೆ ಹಾಗೂ ದಕ್ಷತೆಯ ಅಂಕಿಅಂಶದ ಬಗ್ಗೆ ಇನ್ನಷ್ಟುಮಾಹಿತಿ ಕೇಳಿದೆ.
