ನವದೆಹಲಿ(ಡಿ.10): ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಮತ್ತು ಹೈದ್ರಾಬಾದ್‌ನ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆಯ ತುರ್ತು ಬಳಕೆಗೆ ಅವಕಾಶಕ್ಕೆ ನೀಡುವ ಮುನ್ನ ಪರೀಕ್ಷೆಯ ಇನ್ನಷ್ಟುಮಾಹಿತಿ ನೀಡುವಂತೆ ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಣಾ ಪ್ರಾಧಿಕಾರ ಸೂಚಿಸಿದೆ. ಹೀಗಾಗಿ ಈ ಎರಡೂ ಕಂಪನಿಗಳ ಲಸಿಕೆ ಶೀಘ್ರವೇ ಭಾರತೀಯರಿಗೆ ಲಭ್ಯವಾಗಬಹುದು ಎಂಬ ಆಶಯಕ್ಕೆ ಸಣ್ಣ ಪೆಟ್ಟು ಬಿದ್ದಿದೆ.

ತುರ್ತು ಬಳಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಪರಿಶೀಲಿಸಲಾಗಿದ್ದು, ಈ ವೇಳೆ ಉಭಯ ಕಂಪನಿಗಳಿಂದ ಇನ್ನಷ್ಟುಮಾಹಿತಿಯನ್ನು ಕೋರಲಾಗಿದೆ. ಸೀರಂ ಇನ್‌ಸ್ಟಿಟ್ಯೂಟ್‌ ತನ್ನ ಮನವಿ ಸಲ್ಲಿಕೆ ವೇಳೆ ಬ್ರಿಟನ್ನಿನಲ್ಲಿ ನಡೆದ 2 ಹಾಗೂ ಬ್ರೆಜಿಲ್‌ ಮತ್ತು ಭಾರತದಲ್ಲಿ ನಡೆದ ತಲಾ ಒಂದೊಂದು ಪರೀಕ್ಷೆಯ ವರದಿಯನ್ನು ಲಗತ್ತಿಸಿತ್ತು. ಅದರ ಜೊತೆಗೆ ಭಾರತದಲ್ಲಿ ನಡೆದ 2 ಮತ್ತು 3ನೇ ಹಂತದ ಕ್ಲಿನಿಕಲ್‌ ಟ್ರಯಲ್‌ನ ಇತ್ತೀಚಿನ ಸುರಕ್ಷಣಾ ಮಾಹಿತಿ ಮತ್ತು ಬ್ರಿಟನ್‌, ಭಾರತದಲ್ಲಿ ನಡೆದ ಪರೀಕ್ಷೆಯಲ್ಲಿ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾದ ಬಗೆಗಿನ ದತ್ತಾಂಶ ಮತ್ತು ಬ್ರಿಟನ್‌ನ ಆರೋಗ್ಯ ಪ್ರಾಧಿಕಾರವು ಲಸಿಕೆಯ ದತ್ತಾಂಶವನ್ನು ಪರಿಶೀಲಿಸಿ ಬಂದ ನಿರ್ಧಾರದ ಮಾಹಿತಿಯನ್ನು ಲಗತ್ತಿಸುವಂತೆ ಸೂಚಿಸಿದೆ.

ಇನ್ನು ಭಾರತ್‌ ಬಯೋಟೆಕ್‌ಗೆ, ಹಾಲಿ ನಡೆಸಲಾಗುತ್ತಿರುವ 3ನೇ ಹಂತದ ಪ್ರಯೋಗದ ಇನ್ನಷ್ಟುಸುರಕ್ಷತಾ ಮತ್ತು ಪರಿಣಾಮಕಾರಿ ಅಂಶಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.

ಆದರೆ ಅಮೆರಿಕ ಮೂಲದ ಫೈಝರ್‌ ಕಂಪನಿ, ವಿವರಣೆ ನೀಡಲು ಇನ್ನಷ್ಟುಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಬುಧವಾರ ಅದರ ಅರ್ಜಿಯನ್ನು ಪರಿಶೀಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.