ನವದೆಹಲಿ(ಡಿ.20): ದೇಶದಲ್ಲಿ ಕೊರೋನಾ ಸೋಂಕು ಇನ್ನೇನು ಇಳಿಮುಖವಾಗುತ್ತಿದೆ ಎಂಬ ಹೊತ್ತಿನಲ್ಲೇ, ಕೊರೋನಾ ಸೋಂಕಿತರನ್ನು ಬ್ಲ್ಯಾಕ್‌ ಫಂಗಸ್‌ ಎಂಬ ಮತ್ತೊಂದು ಸೋಂಕು ಮಾರಕವಾಗಿ ಕಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಸದ್ಯ ಮುಂಬೈ, ದೆಹಲಿ ಮತ್ತು ಅಹಮದಾಬಾದ್‌ನಲ್ಲಿ 60ಕ್ಕೂ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು 13 ಜನರನ್ನು ಬಲಿಪಡೆದಿದೆ. ಜೊತೆಗೆ ರೋಗಕ್ಕೆ ತುತ್ತಾದವರು ಕಣ್ಣಿನ ದೃಷ್ಟಿಕಳೆದುಕೊಳ್ಳುತ್ತಿರುವುದು ಖಚಿತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಇದು ಅಂಟುರೋಗವಲ್ಲ. ಅಂದರೆ ಮಾನವರಿಂದ ಮಾನವರಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಹಬ್ಬದು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಮ್ಯುಕೋರ್‌ಮೈಕೋಸಿಸ್‌ ಎಂದು ಕರೆಯಲಾಗುವ ಅಪರೂಪದ, ಆದರೆ ಅಷ್ಟೇ ಮಾರಕ ಸ್ವರೂಪದ ಈ ಸೋಂಕು ಹೊಸದಲ್ಲವಾದರೂ, ಕೊರೋನಾ ಕಾಲದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ಅದರಲ್ಲೂ ಕೊರೋನಾ ಸೋಂಕಿತರು ಮತ್ತು ಈಗಷ್ಟೇ ಸೋಂಕಿನಿಂದ ಚೇತರಿಸಿಕೊಂಡವರ ಮೇಲೇ ಹೆಚ್ಚು ದಾಳಿ ನಡೆಸುತ್ತಿರುವ ಕಾರಣ ಅದರ ಪ್ರಭಾವ ಅತ್ಯಂತ ಹೆಚ್ಚಾಗಿ ಕಂಡುಬರುತ್ತಿದೆ.

ಕಳೆದ ಕೆಲ ದಿನಗಳಲ್ಲಿ ಈ ಸೋಂಕಿಗೆ ಅಹಮದಾಬಾದ್‌ನ ವಿವಿಧ ಆಸ್ಪತ್ರೆಗಳಲ್ಲಿ 9 ಮಂದಿ ಮತ್ತು ದೆಹಲಿಯ ಶ್ರೀ ಗಂಗಾರಾಮ್‌ ಆಸ್ಪತ್ರೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಪೈಕಿ ಹಲವರು ದೃಷ್ಟಿಕಳೆದುಕೊಂಡಿದ್ದಾರೆ.

ಈ ಸೋಂಕು ಯಾರಿಗೆ ಬೇಕಾದರೂ ಹಬ್ಬುವ ಸಾಧ್ಯತೆ ಇದೆಯಾದರೂ, ರೋಗನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಇದರ ಪ್ರಭಾವ ಹೆಚ್ಚಾಗಿರುತ್ತದೆ. ಉಸಿರಾಟದ ವೇಳೆ ಮೂಗಿನ ಮೂಲಕ ಶ್ವಾಸಕೋಶ ಪ್ರವೇಶಿಸುವ ಸೋಂಕು, ಬಳಿಕ ಇಡೀ ದೇಹಕ್ಕೆ ಆವರಿಸಿಕೊಳ್ಳುತ್ತದೆ. ಆರಂಭದಲ್ಲೇ ಸೋಂಕು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದರೆ ಕಾಯಿಲೆಯಿಂದ ಪಾರಾಗಬಹುದು ಎಂದು ವೈದ್ಯರು ಹೇಳಿದ್ದಾರೆ. 2005ರ ವರದಿಯ ಪ್ರಕಾರ ಸೋಂಕಿಗೆ ತುತ್ತಾದವರಲ್ಲಿ ಶೇ.54ರಷ್ಟುಜನರು ಸಾವನ್ನಪ್ಪುವ ಸಾಧ್ಯತೆ ಇದೆ.

ಲಕ್ಷಣಗಳು ಏನೇನು?

ಕಣ್ಣಿನ ಊತ, ಮುಖದ ಒಂದು ಭಾಗ ಊತ, ಮೂಗು ಕಟ್ಟಿಕೊಳ್ಳುವುದು, ಸಿಂಬಳ ಕಪ್ಪುಬಣ್ಣಕ್ಕೆ ತಿರುಗುವುದು, ತಲೆನೋವು, ಜ್ವರ, ಕಫ, ಎದೆನೋವು, ಉಸಿರಾಟದ ತೊಂದರೆ.

ರಕ್ಷಣೆ ಹೇಗೆ?:

ಮಾಸ್ಕ್‌ ತೊಡುವುದು, ಸಾಮಾಜಿಕ ಅಂತರ ಕಾಪಾಡುವುದು, ಆಗಾಗ್ಗೆ ಕೈತೊಳೆದುಕೊಳ್ಳುವುದು.

ಚಿಕಿತ್ಸೆ ಏನು?

ಸೂಕ್ತ ವೈದ್ಯರ ಬಳಿಗೆ ತೆರಳಿ ಆ್ಯಂಟಿ ಫಂಗಲ್‌ ಚಿಕಿತ್ಸೆ ಪಡೆದುಕೊಳ್ಳಬೇಕು.