ತಿರುಪುರ್‌ (ಏ. 03): ಕೊರೋನಾದಿಂದ ದೇಶವನ್ನು ರಕ್ಷಣೆ ಮಾಡಲು ಲಾಕ್‌ಡೌನ್‌ ಘೋಷಣೆ ಮಾಡಿದ್ದರೂ ತರಕಾರಿ ಮಾರುಕಟ್ಟೆಗಳಲ್ಲಿ ಜನರನ್ನು ನಿಯಂತ್ರಿಸಲು ಆಗುತ್ತಿಲ್ಲ. ಈ ರೀತಿಯ ಜನದಟ್ಟಣೆಯಿಂದ ವೈರಸ್‌ ಸೋಂಕು ಹಬ್ಬಬಹುದು ಎಂಬ ಆತಂಕ ವ್ಯಕ್ತವಾಗುತ್ತಿರುವಾಗಲೇ, ತಮಿಳುನಾಡಿನ ವ್ಯಾಪಾರಿಯೊಬ್ಬರು ಇದಕ್ಕೆ ‘ಸುರಂಗ’ ಪರಿಹಾರವನ್ನು ಕಂಡುಹಿಡಿದಿದ್ದಾರೆ. ಈ ಸುರಂಗದಲ್ಲಿ ಹಾದು ಹೋದರೆ ಜನರು ಸೋಂಕುಮುಕ್ತ!

ಏ.14ಕ್ಕೆ ಲಾಕ್‌ಡೌನ್‌ ಅಂತ್ಯ: ಪ್ರಧಾನಿ ಮೋದಿ ಸುಳಿವು

ತಮಿಳುನಾಡಿನ ತಿರುಪುರ್‌ ಜಿಲ್ಲೆಯ ತರಕಾರಿ ಮಾರುಕಟ್ಟೆಗಳಲ್ಲಿ ಜನಜಂಗುಳಿಯೇ ಸೇರುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರೂ ಜನರು ತಲೆಕೆಡಿಸಿಕೊಳ್ಳಲಿಲ್ಲ. ಜನರ ದಟ್ಟಣೆ ನೋಡಿ ಡಿ. ವೆಂಕಟೇಶ್‌ ಎಂಬ ಶುದ್ಧ ಕುಡಿಯುವ ನೀರು ಘಟಕ ನಡೆಸುತ್ತಿರುವ ವ್ಯಕ್ತಿಗೂ ಕಳವಳ ಆರಂಭವಾಯಿತು.

ಆದರೆ ಅವರು ಸುಮ್ಮನೆ ಕೂರಲಿಲ್ಲ. ಟರ್ಕಿಯಲ್ಲಿ ಜನರು ಸುರಂಗದೊಳಗೆ ನುಸುಳಿದರೆ ಅವರಿಗೆ ಸೋಂಕುಮುಕ್ತ ದ್ರಾವಣ ಸಿಂಪಡಿಸುವ ವ್ಯವಸ್ಥೆಯ ವಿಡಿಯೋವೊಂದನ್ನು ನೋಡಿ, ಉತ್ತೇಜಿತರಾದರು. ಅದೇ ಪ್ರಯೋಗವನ್ನು ಇಲ್ಲೂ ಮಾಡಿದರು.

ಹಗುರ ಉಕ್ಕಿನ ಚೌಕಟ್ಟು ಬಳಸಿ ಎರಡೇ ದಿನದಲ್ಲಿ ಸುರಂಗ ನಿರ್ಮಿಸಿದರು. ಅದರೊಳಗೆ ಮಂಜಿನ ರೀತಿ ಸೋಡಿಯಂ ಹೈಪೋಕ್ಲೋರೈಟ್‌ ಎಂಬ ದ್ರಾವಣ ಸಿಂಪಡಣೆಯಾಗುವಂತೆ ಮಾಡಿದರು. ಬಳಿಕ ಅದನ್ನು ಮಾರುಕಟ್ಟೆಗೆ ತಂದಿಟ್ಟರು. ಅದನ್ನು ಈಗ ಎಲ್ಲರೂ ಬಳಸುತ್ತಿದ್ದಾರೆ. ಮಾರುಕಟ್ಟೆಯಿಂದ ನಿರ್ಗಮಿಸುವವರು ಇದರಿಂದಲೇ ತೆರಳಬೇಕಾಗಿದೆ. ಇದಕ್ಕೆ 1 ಲಕ್ಷ ರು. ವೆಚ್ಚವಾಗಿದ್ದು, ವೆಂಕಟೇಶ್‌ ಅವರು ಉಚಿತವಾಗಿ ನೀಡಿದ್ದಾರೆ.

ಲಾಕ್‌ಡೌನ್‌: ಬಾಡಿಗೆ ಮನೆಗಳ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ?

ಇದೆ ವೇಳೆ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಮುನಿಸಿಪಲ್‌ ಕಾರ್ಪೊರೇಷನ್‌ ಕೂಡಾ ಗುರುವಾರದಿಂದ ಇದೇ ರೀತಿಯ ವ್ಯವಸ್ಥೆ ಮಾಡಿದೆ.

"