ಬೆಂಗಳೂರು(ಏ.03): ಲಾಕ್‌ಡೌನ್‌ ಜಾರಿಯಿಂದಾಗಿ ಒಂದು ತಿಂಗಳ ಮನೆ ಬಾಡಿಗೆಯನ್ನು ಸದ್ಯಕ್ಕೆ ಪಡೆಯದಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಒಂದು ತಿಂಗಳಿಗೆ ಸೀಮಿತವಾಗಿ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ಗುರುವಾರ ಸುವರ್ಣ ನ್ಯೂಸ್‌ ಸುದ್ದಿವಾಹಿನಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವೀಯ ದೃಷ್ಟಿಯಿಂದ ಮಾಲಿಕರು ಬಾಡಿಗೆ ಕೇಳುವುದು ಸರಿಯಲ್ಲ. ಜೊತೆಗೆ, ಮನೆ ಖಾಲಿ ಮಾಡಿಸದಂತೆಯೂ ಸರ್ಕಾರ ನಿರ್ದೇಶಿಸಿರುವುದರಿಂದ ಮಾಲೀಕರಿಗೆ ತೆರಿಗೆ ಪಾವತಿಗೂ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳಿಗೆ ಮಾತ್ರ ಅನ್ವಯವಾಗುವಂತೆ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವ ಕುರಿತು ಬಿಬಿಎಂಪಿ ಬಜೆಟ್‌ ಮಂಡನೆಗೂ ಮುನ್ನ ನಿರ್ಧರಿಸಲಾಗುವುದು ಎಂದರು.

ಭಾರತ್‌ ಲಾಕ್‌ಡೌನ್‌: 'ಕೊಳಗೇರಿ ಪ್ರದೇಶಗಳಿಗೆ ತಲುಪದ ಆಹಾರ'

ನಗರ ಭಾಗಗಳಲ್ಲಿ ತಳ್ಳುವ ಗಾಡಿಯಲ್ಲಿ ಹಣ್ಣು, ತರಕಾರಿ ಮತ್ತು ದಿನಸಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು. ಅಂತಹ ವ್ಯಾಪಾರ ಮಾಡುವವರಿಗೆ ಯಾವುದೇ ಕಾರಣಕ್ಕೂ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಜೊತೆಗೆ, ಅಗತ್ಯ ಹಣಕಾಸಿನ ನೆರವನ್ನು ಜಿಲ್ಲಾಡಳಿತ ಒದಗಿಸಬೇಕು ಎಂದು ಸೂಚಿಸಿದರು.

ಲಾಕ್‌ಡೌನ್‌ ಘೋಷಣೆ ಮಾಡಿರುವ ದಿನಗಳಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಬಾರದು. ಜೊತೆಗೆ ರಜೆ ದಿನಗಳಲ್ಲಿ ಸಂಪೂರ್ಣ ವೇತನ ಪಾವತಿ ಮಾಡಬೇಕು. ಈ ನಿಯಮವನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊರೋನಾ ಸೋಂಕು ನಿವಾರಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ಹಣಕಾಸನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಒಂದು ವೇಳೆ ಹಣದ ಕೊರತೆ ಕಂಡು ಬಂದಲ್ಲಿ ಮಾಹಿತಿ ನೀಡಿದರೆ ತಕ್ಷಣ ಬಿಡುಗಡೆಗೆ ಕ್ರಮ ವಹಿಸಲಾಗುವುದು, ಊಟದ ಸಮಸ್ಯೆ ಇರುವ ಸಂಬಂಧ ಮಾಹಿತಿ ಬಂದ ತಕ್ಷಣ ತಲುಪಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.