* ಭಾರತದಲ್ಲಿ ಲಸಿಕೆ ಅಭಿಯಾನದ ನಡುವೆ ವ್ಯಾಕ್ಸಿನ್ ಕೊರತೆ* ಕೋವ್ಯಾಕ್ಸಿನ್, ಕೋವಿಶೀಲ್ಡ್ ಉತ್ಪಾದನೆಯೂ ಹೆಚ್ಚಿಸಲು ಕ್ರಮ* ಲಸಿಕೆ ಕೊರತೆ ಮಧ್ಯೆ ಭಾರತಕ್ಕೆ ಐದು ಕೋಟಿ ಲಸಿಕೆ ನೀಡಲು ಮುಂದಾದ ಫೈಝರ್

ನವದೆಹಲಿ(ಮೇ.27): ಇತ್ತ ವಿಶ್ವದ ಅತೀ ದೊಡ್ಡ ಕೊರೋನಾ ಲಸಿಕೆ ಅಭಿಯಾನ ಆರಂಭಿಸಿರುವ ಭಾರತ ಸ್ವದೇಶೀ ಲಸಿಕೆಗಳ ಉತ್ಪಾದನೆ ಹೆಚ್ಚಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಿದ್ದರೂ ಲಸಿಕೆ ಕೊರತೆ ಕಾಣಲಾರಂಭಿಸಿದೆ. ಹೀಗಿರುವಾಗ ಈ ಕೊರತೆ ನೀಗಿಸಲು ವಿದೇಶಗಳಲ್ಲಿ ತಯಾರಾಗುತ್ತಿರುವ ಲಸಿಕೆ ತರಿಸುವ ಯತ್ನವನ್ನೂ ನಡೆಸುತ್ತಿದೆ. ಈ ಎಲ್ಲಾ ಕಸರತ್ತುಗಳ ನಡುವೆ ಫೈಝರ್ ಸಂಸ್ಥೆ ಭಾರತಕ್ಕೆ ಐದು ಕೋಟಿ ಲಸಿಕೆ ನೀಡಲು ತಯಾರಿರುವುದಾಗಿ ಹೇಳಿದೆ. 

2 ವರ್ಷ ಫೈಝರ್‌, ಮಾಡೆ​ರ್ನಾ ಲಸಿಕೆ ಡೌಟ್‌!

ಫೈಝರ್ ಸಂಸ್ಥೆಯ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ನೀಡುವ ಕುರಿತೂ ಚರ್ಚೆಗಳು ನಡೆದಿದ್ದು, ಒಟ್ಟು 5 ಕೋಟಿ ಲಸಿಕೆ ಪಡೆಯುವ ಕುರಿತು ಚರ್ಚೆ ನಡೆಯುತ್ತಿದೆ. ಅದರಂತೆ 2021ರ ಜುಲೈನಲ್ಲಿ 1 ಕೋಟಿ, ಆಗಸ್ಟ್‌ನಲ್ಲಿ 1 ಕೋಟಿ, ಸೆಪ್ಟೆಂಬರ್‌ನಲ್ಲಿ 2 ಕೋಟಿ ಮತ್ತು ಅಕ್ಟೋಬರ್‌ನಲ್ಲಿ 1 ಕೋಟಿ ಡೋಸ್ ಲಸಿಕೆ ಭಾರತಕ್ಕೆ ಬರುವ ನಿರೀಕ್ಷೆ ಇದೆ. ಇದಕ್ಕಾಗಿ ಕೇಂದ್ರ ಸರ್ಕಾರದೊಂದಿಗೆ ಫೈಝರ್ ಸಂಸ್ಥೆ ನಿರಂತರ ಚರ್ಚೆ ನಡೆಸುತ್ತಿದೆ. 

'ಮಳೆ​ಗಾ​ಲಕ್ಕೂ ಮುನ್ನ ಮಕ್ಕ​ಳಿ​ಗೆ ಶೀತ​ಜ್ವ​ರದ ಲಸಿಕೆ ನೀಡಿ'

ಫೈಝರ್ ಸಂಸ್ಥೆ ಭಾರತದ ರಾಜ್ಯ ಸರ್ಕಾರಗಳಿಗೆ ಲಸಿಕೆ ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದು, ರಾಜ್ಯಗಳಿಗೆ ಲಸಿಕೆ ಮಾರಾಟದ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, 'ಮಾಡೆರ್ನಾ ಮತ್ತು ಫೈಝರ್ನಿಂದ ನೇರವಾಗಿ ಲಸಿಕೆಗಳನ್ನು ಖರೀದಿಸಲು ರಾಜ್ಯ ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಇದು ಫೈಝರ್, ಮಾಡೆರ್ನಾ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆದ ಒಪ್ಪಂದವಾಗಿದ್ದು, ನಾವು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ನಿರ್ವಹಣೆ ಮಾಡುತ್ತಿದ್ದೇವೆ. ಅಲ್ಲದೆ, ಫೈಝರ್ ಮತ್ತು ಮಾಡೆರ್ನಾ ಎರಡೂ ಸಂಸ್ಥೆಗಳೂ ಮುಂದಿನ ಕೆಲ ತಿಂಗಳಿಗೆ ಆಗುವಷ್ಟು ಲಸಿಕೆಗಳ ಆರ್ಡರ್ ಬುಕ್ ಆಗಿದೆ., ಆದ್ದರಿಂದ ಅವರು ಭಾರತದಲ್ಲಿ ಎಷ್ಟು ಪ್ರಮಾಣದ ಲಸಿಕೆಗಳನ್ನು ಒದಗಿಸಬಹುದೆಂಬ ದತ್ತಾಂಶ ಇದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona