- 3ನೇ ಅಲೆ ಭೀತಿ ಹುಟ್ಟಿಸಿದ ಕೊರೋನಾ ಹೊಸ ತಳಿ- ಬ್ರಿಟನ್‌, ಭಾರತದಲ್ಲಿ ಪತ್ತೆಯಾದ ಎವೈ 4.2 ತಳಿಯಿಂದ ಮತ್ತೆ ಆತಂಕ- ಭಾರತದಲ್ಲಿ ಪತ್ತೆಯಾಗಿ ಅನಾಹುತ ಸೃಷ್ಟಿಸಿದ ಡೆಲ್ಟಾದ ರೂಪಾಂತರಿ ಇದು

ಇನ್ನೇನು ಕೊರೋನಾ ಅಟ್ಟಹಾಸ ತಗ್ಗುತ್ತಿದೆ ಎಂಬ ಆಶಾಭಾವನೆಯ ಬೆನ್ನಲ್ಲೇ ಬ್ರಿಟನ್‌ ಮತ್ತು ಭಾರತದಲ್ಲಿ ಹೊಸದಾಗಿ ಎವೈ.4.2 ಎಂಬ ಕೊರೋನಾ ತಳಿಯೊಂದು ಪತ್ತೆಯಾಗಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಈ ಹೊಸ ತಳಿಯಿಂದಾಗಿ ಬ್ರಿಟನ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ಕೇಸು, ಸಾವು ದಾಖಲಾಗುತ್ತಿದ್ದು, ಭಾರತದಲ್ಲೂ ಅಂಥದ್ದೇ ಆತಂಕಕ್ಕೆ ಕಾರಣವಾಗಿದೆ.

ಬ್ರಿಟನ್ನಿನಲ್ಲಿ ಇತ್ತೀಚೆಗೆ ದಾಖಲಾಗುತ್ತಿರುವ ಹೊಸ ಕೇಸಿನ ಪೈಕಿ ಶೇ.6ರಷ್ಟುಹೊಸ ಕೇಸುಗಳಲ್ಲಿ ಈ ವೈರಸ್‌ ಪತ್ತೆಯಾಗುತ್ತಿದೆ. ಈ ಹೊಸ ತಳಿಯನ್ನು ಎವೈ.4.2 ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಗತ್ತಿಗೆ ಮತ್ತೊಮ್ಮೆ ಆತಂಕ ಹುಟ್ಟಿಸುತ್ತಿರುವ ಹೊಸ ತಳಿ ವೈರಸ್‌ ಕುರಿತ ಕಿರು ಮಾಹಿತಿ ಇಲ್ಲಿದೆ.

ಎವೈ.4.2 ಹೊಸ ತಳಿ ಅಂದರೆ ಏನು?

ಎವೈ.4.2 ಎಂಬುದು ಭಾರತದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಬಿ.1.617.2 ಅಥವಾ ಡೆಲ್ಟಾವೈರಸ್ಸಿನ ರೂಪಾಂತರಿ. ಇದು ಕಳೆದ ವರ್ಷ ದೇಶದಲ್ಲಿ 2ನೇ ಅಲೆಯ ಸ್ಪೋಟಕ್ಕೆ ಕಾರಣವಾಗಿತ್ತು. ಸದ್ಯ ಡೆಲ್ಟಾ55 ರೂಪಾಂತರಿ ವೈರಸ್‌ ಆಗಿ ಮಾರ್ಪಟ್ಟಿದೆ.

ಅದರಲ್ಲಿ ಎವೈ.4.2 ಕೋವಿಡ್‌-19 ಸೋಂಕಿಗೆ ಕಾರಣವಾಗುವ ವೈರಸ್ಸಿನ ಪ್ರಬಲ ತಳಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಸಂಭಾವ್ಯವಾಗಿ ಸ್ವಲ್ಪ ಹೆಚ್ಚು ಸಾಂಕ್ರಾಮಿಕವಾಗಿರುವ ತಳಿ ಇದಾಗಿದೆ. ಇದು ಬ್ರಿಟನ್‌ನಲ್ಲಿ ಕಳೆದ ಜುಲೈನಲ್ಲೇ ಕಾಣಿಸಿಕೊಂಡಿದ್ರೂ ಇತ್ತೀಚಿನ ದಿನಗಳಲ್ಲಿ ಈ ವೈರಸ್ಸಿನ ಸೋಂಕು ಪ್ರಮಾಣ ಅಧಿಕವಾಗುತ್ತಿದೆ. ಮತ್ತು ಈ ರೂಪಾಂತರಿ ಮತ್ತೆ ಎ222ವಿ ಮತ್ತು ವೈ145ಎಚ್‌ ಎಂಬ ಎರಡು ತಳಿಯಾಗಿ ರೂಪಾಂತರವಾಗಿದೆ ಎನ್ನಲಾಗುತ್ತಿದೆ.

ಚೀನಾದಲ್ಲಿ ಮತ್ತೆ ಸೋಂಕು ಸ್ಪೋಟ: ನಿರ್ಬಂಧ ಜಾರಿ!

ಎಲ್ಲೆಲ್ಲಿ ಪತ್ತೆಯಾಗುತ್ತಿದೆ?

ಎ.ವೈ.4.2 ಪ್ರಧಾನವಾಗಿ ಬ್ರಿಟನ್‌ ವಂಶಾವಳಿ. ಉಪ ತಳಿಯ ಶೇ.96ರಷ್ಟುಮಾದರಿಗಳು ಬ್ರಿಟನ್‌ನಲ್ಲೇ ಪತ್ತೆಯಾಗಿವೆ. ಅಲ್ಲದೆ ಇದು ಅಮೆರಿಕ, ರಷ್ಯಾ ಮತ್ತು ಇಸ್ರೇಲ್‌ ಸೇರಿದಂತೆ ಅನೇಕ ದೇಶಗಳಲ್ಲೂ ಪತ್ತೆಯಾಗಿದೆ. ರಷ್ಯಾದಲ್ಲೂ ಎವೈ.4.2 ವೈರಸ್ಸಿನ ಒಂದು ಪ್ರಕರಣ ಪತ್ತೆಯಾಗಿದೆ. ಹೊಸ ವೈರಸ್‌ ತಳಿಯಿಂದ ಆತಂಕಿತರಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಒಂದು ವಾರದ ಲಾಕ್‌ಡೌನ್‌ ವಿಧಿಸಲೂ ಸಜ್ಜಾಗಿದ್ದಾರೆ. ನ್ಯೂಜಿಲೆಂಡ್‌, ಸಿಂಗಾಪುರಗಳಲ್ಲೂ ಕೋವಿಡ್‌ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಹೊಸದಾಗಿ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಈ ನಡುವೆ ಲಂಡನ್ನಿನ ಯುಸಿಎಲ್‌ ಜೆನೆಟಿಕ್‌ ಇನಸ್ಟಿಟ್ಯೂಟ್‌, ಹೊಸ ವೈರಸ್‌ ಬ್ರಿಟನ್ನಿಗೆ ಸೀಮಿತವಾದಂತಿದೆ. ಬೇರೆಲ್ಲೂ ಅಷ್ಟಾಗಿ ಕಂಡುಬಂದಿಲ್ಲ ಎಂದಿದೆ.

ಭಾರತದಲ್ಲಿ ಪತ್ತೆಯಾಗಿದೆಯೇ?

ಭಾರತದಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ 7 ಜನರಲ್ಲಿ ಈ ಹೊಸ ತಳಿಯ ಕೊರೋನಾ ವೈರಸ್‌ ಪತ್ತೆಯಾಗಿದೆ. ಇದು ಕಳೆದ ಸೆಪ್ಟೆಂಬರ್‌ನಲ್ಲಿ ಸಂಗ್ರಹಿಸಿದ ಮಾದರಿಯನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಿದ ವೇಳೆ ಖಚಿತಪಟ್ಟಿದ್ದು. ಹೀಗಾಗಿ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡದ ಇತರೆ ಸಾವಿರಾರು ಜನರಲ್ಲಿ ಈ ವೈರಸ್‌ ಹಬ್ಬಿರುವ ಸಾಧ್ಯತೆ ದಟ್ಟವಾಗಿದೆ.

ಹೊಸ ವೈರಸ್‌ ಬಗ್ಗೆ ಆತಂಕಪಡಬೇಕೇ?

ಹೊಸದಾಗಿ ಪತ್ತೆಯಾಗುತ್ತಿರುವ ಎವೈ.4.2 ವೈರಸ್ಸನ್ನು ವಿಶ್ವ ಆರೋಗ್ಯ ಸಂಸ್ಥೆ ಇನ್ನಷ್ಟೇ ‘ವೇರಿಯಂಟ್‌ ಆಫ್‌ ಕನ್ಸರ್ನ್‌’ ಎಂದು ಗುರುತಿಸಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಆಲ್ಪಾ, ಬೀಟಾ, ಗಾಮಾ ಮತ್ತು ಡೆಲ್ಟಾವೈರಸ್ಸನ್ನು ವೇರಿಯಂಟ್‌ ಆಫ್‌ ಕನ್ಸರ್ನ್‌ ಎಂದು ಗುರುತಿಸಿದೆ. ಅದರರ್ಥ ವೈರಸ್‌ ತಳಿಯು ವೇಗವಾಗಿ ಹರಡಿ ಸೋಂಕಿನ ಸ್ಪೋಟಕ್ಕೆ ಕಾರಣವಾಗುತ್ತದೆ. ಅಥವಾ ಲಭ್ಯವಿರುವ ಔಷಧಿಗಳು ಮತ್ತು ಲಸಿಕೆಗಳ ಪರಿಣಾಮಕಾರಿತ್ವವನ್ನು ಕುಗ್ಗಿಸುತ್ತದೆ ಎಂದು ಡಬ್ಲುಎಚ್‌ಒ ತಿಳಿಸಿದೆ. ಆದರೆ ಸಂಶೋಧಕರು ಹೊಸ ವೈರಸ್‌ ಎವೈ.4.2 ಸಹ ವೇಗವಾಗಿ ಹರಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ತಕ್ಷಣಕ್ಕೆ ಗಂಭೀರ ಸಮಸ್ಯೆ ಉಂಟುಮಾಡಬಹುದಾದ ಅಪಾಯ ಇಲ್ಲ ಎಂದಿದ್ದಾರೆ. ರಷ್ಯಾ ಸಂಶೋಧಕರೊಬ್ಬರು, ಎವೈ.4.2 ಡೆಲ್ಟಾಗಿಂತ ಶೇ.10ರಷ್ಟುಸಾಂಕ್ರಾಮಿಕವಾಗಿರಬಹುದು. ಆದರೆ ಈಗಿರುವ ಲಸಿಕೆಗಳು ಈ ವೈರಸ್‌ ವಿರುದ್ಧ ಹೋರಾಡುವಷ್ಟು ಪರಿಣಾಮಕಾರಿಯಾಗಿವೆ ಎಂದು ತಿಳಿಸಿದ್ದಾರೆ.

ಭಾರತಕ್ಕೆ ಈಗ ಬ್ರಿಟನ್ನಿನ ಹೊಸ ವೈರಸ್ ಆತಂಕ: ಮ.ಪ್ರದಲ್ಲಿ ಸೋಂಕು ಪತ್ತೆ!

ಅಧ್ಯಯನ ಪ್ರಗತಿ ಹೇಗಿದೆ?

ಹೊಸ ಎವೈ.4.2 ತಳಿಯನ್ನು ಸದ್ಯ ತನಿಖೆ ಹಂತದಲ್ಲಿರುವ ವೈರಸ್‌ ತಳಿ ಎಂದು ವರ್ಗೀಕರಣ ಮಾಡಲಾಗಿದೆ. ಈ ನಡುವೆ ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೊಸ ವೈರಸ್ಸಿನ ಸ್ವಭಾವದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ತಳಿಯ ಕುರಿತ ಅಧ್ಯಯನ ಪ್ರಗತಿಯಲ್ಲಿದೆ. ಮೂಲ ವೈರಸ್‌ ಡೆಲ್ಟಾ6 ತಿಂಗಳಿಗೂ ಹೆಚ್ಚು ಕಾಲ ಇಡೀ ವಿಶ್ವವನ್ನು ಕೋವಿಡ್‌ ಸೋಂಕಿನಲ್ಲಿ ನಲುಗುವಂತೆ ಮಾಡಿತ್ತು. ಹಾಗಾಗಿ ಹೊಸ ತಳಿಯು ಅಷ್ಟೇ ಪ್ರಭಾವಶಾಲಿ ಆಗಿರಬಹುದು ಅಥವಾ ಇಲ್ಲದಿರಬಹುದು. ಹಾಗಾಗಿ ಹೊಸ ತಳಿಯ ಬಗ್ಗೆ ಕೂಡಲೇ ಆಳ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ನಾಜೂಕಿನಿಂದ ಹತೋಟಿಗೆ ತರಬೇಕಾದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.