Asianet Suvarna News Asianet Suvarna News

Covid 19 Crisis: ಕೊರೋನಾ ಸೋಂಕು ತಗ್ಗಿದೆ, ಕೆಲಸ ಆರಂಭಿಸಿ: ಕೇಂದ್ರ

*ಎಲ್ಲ ಚಟುವಟಿಕೆ ಆರಂಭಿಸಬಹುದು: ಕೇಂದ್ರ: ಮುಂಜಾಗ್ರತಾ ಕ್ರಮದೊಂದಿಗೆ ಶಾಲೆ ತೆರೆಯಬಹುದು
*ಆರ್ಥಿಕ ಚಟುವಟಿಕೆಗಳನ್ನೂ ಆರಂಭಿಸಬಹುದು: ಲಸಿಕೆಯಿಂದ ಈಗ ಸೋಂಕು ತಗ್ಗಿದೆ
*92% ಕೊರೋನಾ ಸಾವಿಗೆ ಲಸಿಕೆ ಪಡೆಯದಿರುವುದೇ ಕಾರಣ: 561 ಕೋವಿಡ್‌ ಕೇಸು: ಎರಡೂವರೆ ತಿಂಗಳಲ್ಲೇ ಕನಿಷ್ಠ
 

Covid 19 Crisis Centre asks to reduce restrictions as corona virus cases decline mnj
Author
Bengaluru, First Published Mar 4, 2022, 11:44 AM IST

ನವದೆಹಲಿ (ಮಾ. 04): ಭಾರತದಲ್ಲಿ ಪ್ರಸಕ್ತ ವರ್ಷದಿಂದ (2022) ಇಲ್ಲಿಯವರೆಗೆ ಶೇ.92ರಷ್ಟುಕೊರೋನಾ ಸಾವಿಗೆ ಲಸಿಕೆ ಹಾಕದಿರುವುದೇ ಕಾರಣ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಆದರೆ, ಇದೇ ವೇಳೆ ಸದ್ಯ ದೇಶದಲ್ಲಿ ಲಸಿಕಾಕರಣದಿಂದ ಕೊರೋನಾ ಆರ್ಭಟ ತಗ್ಗಿದೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ-ಕಾಲೇಜುಗಳು, ಆರ್ಥಿಕ ಚಟುವಟಿಕೆಗಳು ಮತ್ತು ಸಾಮಾಜಿಕ ವ್ಯವಹಾರಗಳನ್ನು ಆರಂಭಿಸಬಹುದು ಎಂದು ಹೇಳಿದೆ. ಪ್ರಸ್ತುತ, ದೇಶಾದ್ಯಂತ 29 ಜಿಲ್ಲೆಗಳಲ್ಲಿ ಶೇ.10ರಷ್ಟುಪಾಸಿಟಿವಿಟಿ ದರ ಇದೆ, 34 ಜಿಲ್ಲೆಗಳಲ್ಲಿ ಶೇ.5-10 ರ ನಡುವೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದೂ ತಿಳಿಸಿದೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ‘15-18 ವರ್ಷ ವಯಸ್ಸಿನ ಹದಿಹರೆಯದವರಲ್ಲಿ ಶೇ.74 ರಷ್ಟುಜನರು ಮೊದಲ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ಶೇ.39ರಷ್ಟುಜನರಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ’ ಎಂದರು.

‘ಲಸಿಕೆ ಅಭಿವೃದ್ಧಿ, ಅದರ ತ್ವರಿತ ವಿತರಣೆಯ ಕಾರಣದಿಂದಾಗಿ ಭಾರತದಲ್ಲಿ ಕೊರೋನಾ ಮರಣ ಪ್ರಮಾಣ ಗಣನೀಯವಾಗಿ ತಗ್ಗಿದೆ. ಆದರೆ 2022ರಲ್ಲಿ ಮರಣ ಅಪ್ಪಿದವರಲ್ಲಿ ಶೇ.92 ಮಂದಿ ಲಸಿಕೆ ಪಡೆಯದವರು. ಹೀಗಾಗಿ ಲಸಿಕೆ ಪಡೆಯುವುದು ಅಗತ್ಯ’ ಎಂದು ಅವರು ಹೇಳಿದರು.ಕೊರೋನಾ ಲಸಿಕೆಯ ಮೊದಲ ಡೋಸ್‌ ಮರಣವನ್ನು ತಡೆಗಟ್ಟುವಲ್ಲಿ ಶೇ.98.9ರಷ್ಟುಪರಿಣಾಮಕಾರಿಯಾಗಿದೆ. ಎರಡೂ ಡೋಸ್‌ ಶೇ.99.3 ರಷ್ಟುಪರಿಣಾಮಕಾರಿಯಾಗಿದೆ ಎಂದೂ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: Covid Crisis: ರಾಜ್ಯದಲ್ಲಿ 268 ಕೇಸ್‌: ಡಿ.25ರ ಬಳಿಕ ಕನಿಷ್ಠ

6561 ಕೋವಿಡ್‌ ಕೇಸು: ಎರಡೂವರೆ ತಿಂಗಳಲ್ಲೇ ಕನಿಷ್ಠ: ದೇಶದಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳು ಮತ್ತಷ್ಟುಕಡಿಮೆಯಾಗಿದ್ದು ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 6,561 ಪ್ರಕರಣಗಳು ದಾಖಲಾಗಿವೆ. ಇದು ಎರಡೂವರೆ ತಿಂಗಳ ಕನಿಷ್ಠ.

ಇದೇ ಅವಧಿಯಲ್ಲಿ 142 ಸೋಂಕಿತರು ಸಾವಿಗೀಡಾಗಿದ್ದಾರೆ. ಸತತ 25 ದಿನಗಳಿಂದ ದೇಶದಲ್ಲಿ 1 ಲಕ್ಷಕ್ಕೂ ಕಡಿಮೆ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿದ್ದು, ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 77,152ಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರವು 0.74 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು 0.99 ರಷ್ಟಿದೆ. ದೇಶದಲ್ಲಿ ಈವರೆಗೆ 178.02 ಕೋಟಿ ಡೋಸು ಲಸಿಕೆ ವಿತರಿಸಲಾಗಿದೆ.

ಸೋಂಕಿನ ಪ್ರಮಾಣ ದಿಢೀರ್‌ ದ್ವಿಗುಣ:  ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ನಿರಂತರವಾಗಿ ಕಡಿಮೆ ಆಗುತ್ತ ಬಂದಿದ್ದ ದೈನಂದಿನ ಕೋವಿಡ್‌ ಪ್ರಕರಣಗಳು ಗುರುವಾರ ಇದ್ದಕ್ಕಿದ್ದಂತೆ ದ್ವಿಗುಣ ಆಗಿದೆ. ಬುಧವಾರ ಕೇವಲ 188 ಪ್ರಕರಣ ವರದಿ ಆಗಿದ್ದರೆ ಗುರುವಾರ 382 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೋವಿಡ್‌ ದೈನಂದಿನ ಪರೀಕ್ಷೆ 36,415ಕ್ಕೆ ಕುಸಿದಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪಾಸಿಟಿವಿಟಿ ದರ ಶೇ.1.04ಕ್ಕೆ ಏರಿದೆ.ಗುರುವಾರ ಹತ್ತು ಮಂದಿ ಮರಣವನ್ನಪ್ಪಿದ್ದಾರೆ.

ಇದನ್ನೂ ಓದಿ: Covid Fourth Wave: ಜೂನ್‌ನಲ್ಲಿ ಭಾರತಕ್ಕೆ 4ನೇ ಕೋವಿಡ್‌ ಅಲೆ: ಮತ್ತೆ ಆತಂಕ

ಫೆ.22ಕ್ಕೆ ಶೇ. 1.31ರ ಪಾಸಿಟಿವಿಟಿ ದರ ದಾಖಲಾಗಿತ್ತು:  ಬೆಂಗಳೂರು ನಗರದಲ್ಲಿ 106ಕ್ಕೆ ಇಳಿದಿದ್ದ ಹೊಸ ಪ್ರಕರಣಗಳ ಸಂಖ್ಯೆ 239ಕ್ಕೆ ಜಿಗಿದಿದೆ. ಉಳಿದಂತೆ ಕೊಡಗು (16), ಮೈಸೂರು(15), ಬಳ್ಳಾರಿ (14), ತುಮಕೂರು (12), ಧಾರವಾಡ (11) ಮತ್ತು ಶಿವಮೊಗ್ಗ (10) ಜಿಲ್ಲೆಯಲ್ಲಿ ದೈನಂದಿನ ಸೋಂಕಿನ ಪ್ರಕರಣ ಮತ್ತೆ ಎರಡಂಕಿಗೆ ನೆಗೆದಿದೆ. ಬಾಗಲಕೋಟೆ, ದಾವಣಗೆರೆ, ಹಾವೇರಿ, ರಾಯಚೂರು ಮತ್ತು ರಾಮನಗರ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಉಳಿದ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟುಪ್ರಕರಣ ವರದಿಯಾಗಿದೆ.

ಗುರುವಾರ ಹತ್ತು ಮಂದಿ ಮರಣವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ ನಾಲ್ವರು, ವಿಜಯಪುರ, ಯಾದಗಿರಿ, ತುಮಕೂರು, ಧಾರವಾಡ, ಮಂಡ್ಯ ಮತ್ತು ಬೀದರ್‌ನಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌ನಿಂದ ಮೃತರಾದವರ ಒಟ್ಟು ಸಂಖ್ಯೆ 39,979 ಮಂದಿ ಕೋವಿಡ್‌ನಿಂದ ಮೃತರಾಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39.41 ಲಕ್ಷ ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದು ಈ ಪೈಕಿ 38.97 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

ಲಸಿಕೆ ಅಭಿಯಾನ: ಗುರುವಾರ 1.03 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 5,941 ಮಂದಿ ಮೊದಲ ಡೋಸ್‌, 91,884 ಮಂದಿ ಎರಡನೇ ಡೋಸ್‌ ಮತ್ತು 5,814 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 10.09 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

Follow Us:
Download App:
  • android
  • ios