ಸಕ್ರಿಯ ಕೇಸು ಇಳಿಕೆ : 187 ದಿನಗಳ ಕನಿಷ್ಠಕ್ಕೆ ಕೊರೋನಾ
- ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 31,923 ಕೋವಿಡ್ ಪ್ರಕರಣ
- ಒಟ್ಟು ಸೋಂಕಿತರ ಸಂಖ್ಯೆ 3.35 ಕೋಟಿ ಮತ್ತು ಸಾವಿನ ಸಂಖ್ಯೆ 4.46 ಲಕ್ಷಕ್ಕೆ ಹೆಚ್ಚ
ನವದೆಹಲಿ (ಸೆ.25): ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 31,923 ಕೋವಿಡ್ (covid ) ಪ್ರಕರಣಗಳು ದಾಖಲಾಗಿದ್ದು, 282 ಜನರು ಸಾವನ್ನಪ್ಪಿದ್ದಾರೆ.
ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.35 ಕೋಟಿ ಮತ್ತು ಸಾವಿನ ಸಂಖ್ಯೆ 4.46 ಲಕ್ಷಕ್ಕೆ ಹೆಚ್ಚಳವಾಗಿದೆ. ಇನ್ನು ಸಕ್ರಿಯ ಪ್ರಕರಣಗಳು 3.01 ಲಕ್ಷಕ್ಕೆ ಇಳಿಕೆಯಾಗಿದ್ದು ಇದು ಕಳೆದ 187 ದಿನದಲ್ಲೇ ಕನಿಷ್ಠ ಮಟ್ಟಎಂದು ಆರೋಗ್ಯ ಸಚಿವಾಲಯ (Health Ministry) ಹೇಳಿದೆ.
ಲಸಿಕೆ ಇನ್ನೂ ಪಡೆದಿಲ್ವಾ? ಸಿಬ್ಬಂದಿ ಮನೆಗೇ ಬರ್ತಾರೆ..!
ಗುಣಮುಖ ದರ ಶೇ.97.77ರಷ್ಟಿದೆ. ಕಳೆದ 24 ಗಂಟೆಯಲ್ಲಿ 15.27 ಲಕ್ಷ ಮಾದರಿಗಳ ಪರೀಕ್ಷೆ ಮಾಡಲಾಗಿದ್ದು ಪಾಸಿಟಿವಿಟಿ (Positivity) ದರ ಶೇ.2.09ರಷ್ಟಿದೆ. ದೇಶದಲ್ಲಿ ಲಸಿಕಾ (vaccination) ಅಭಿಯಾನ ಪ್ರಗತಿಯಲ್ಲಿದ್ದು ಈವರೆಗೆ 83.39 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ.
ಕೋವಿಡ್ 3ನೇ ಅಲೆ ಭೀತಿ: 'ವೈದ್ಯರು, ನರ್ಸ್‌ಗಳಿಗೆ ಬೂಸ್ಟರ್ ಡೋಸ್ ನೀಡಿ'
ರಾಜ್ಯದಲ್ಲೂ ಇಳಿಕೆ
ಇನ್ನೂ ಕರ್ನಾಟಕದಲ್ಲಿಯೂ (Karnataka) ಮಹಾಮಾರಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಇಳಿಯುತ್ತಿದೆ. ಇದರಿಂದ ಜನರಲ್ಲಿ ಆಶಾ ಭಾವನೆ ಮೂಡುತ್ತಿದೆ. ಆದರೆ ಎಚ್ಚರಿಕೆ ತಪ್ಪಿದಲ್ಲಿ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬೂಸ್ಟರ್ ಡೋಸ್‌ಗೆ ಆಗ್ರಹ
ಕೇರಳದಲ್ಲಿ ಕೋವಿಡ್ ಮೂರನೇ ಅಲೆ ಪ್ರಬಲವಾಗಿರುವುದು, ಎರಡನೇ ಡೋಸ್ ಲಸಿಕೆ ಪಡೆದಿದ್ದವರಲ್ಲಿಯೂ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿರುವುದು, ವಿಶ್ವದ ಕೆಲ ದೇಶಗಳಲ್ಲಿ ಬೂಸ್ಟರ್ ಡೋಸ್ (Booster Dose) ನೀಡುತ್ತಿರುವುದು ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ನಮ್ಮ ರಾಜ್ಯದಲ್ಲೂ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್ ಲಸಿಕೆ ನೀಡಬೇಕು ಎಂಬ ಪ್ರಬಲ ಆಗ್ರಹ ವೈದ್ಯ ಲೋಕದಲ್ಲಿ ಕೇಳಿಬಂದಿದೆ.
ದೇಶದಲ್ಲಿ ಜನವರಿ 16ರಿಂದ ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆ ಪಡೆಯಲು ಅವಕಾಶ ಪಡೆದಿದ್ದಾರೆ. ಜನವರಿ, ಫೆಬ್ರವರಿಯಲ್ಲಿ ಲಸಿಕೆ ಪಡೆದಿದ್ದವರು ಮಾರ್ಚ್ ಹೊತ್ತಿಗೆ ಎರಡೂ ಡೋಸ್ ಕೂಡ ಪೂರ್ಣಗೊಳಿಸಿದ್ದಾರೆ. ಸೆಪ್ಟೆಂಬರ್ ಹೊತ್ತಿಗೆ ಇವರ ಎರಡೂ ಡೋಸ್ ಪೂರ್ಣಗೊಂಡು ಆರು ತಿಂಗಳು ದಾಟುತ್ತದೆ. ಆಕ್ಟೋಬರ್ ಹೊತ್ತಿಗೆ ಮೂರನೇ ಅಲೆ ಕಾಣಿಸಿಕೊಂಡರೆ ಮತ್ತು ಆ ವೇಳೆಗೆ ಆರೋಗ್ಯ ಸಿಬ್ಬಂದಿಯ ಪ್ರತಿಕಾಯ ಕ್ಷೀಣಗೊಂಡಿದ್ದರೆ ಅಪಾಯಕ್ಕೆ ಸಿಲುಕಬಹುದು. ಲಸಿಕೆ ಪಡೆದ ಬಳಿಕ ಪೂರ್ಣ ಪ್ರತಿಕಾಯ ಸೃಷ್ಟಿಗೆ ಹತ್ತರಿಂದ ಹದಿನಾಲ್ಕು ದಿನ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಆದಷ್ಟು ಬೇಗ ನೀಡಿದರೆ ಒಳ್ಳೆಯದು ಎನ್ನುವುದು ಕೆಲ ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.