ಕೊರೋನಾ ವೈರಸ್ ನಿಯಂತ್ರಕ್ಕೆ ಸಿಗದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೈರಾಣಾಗಿದೆ. ಇದೀಗ ತಮಿಳುನಾಡಿನಲ್ಲಿ ಸಂಡೇ ಲಾಕ್‌ಡೌನ್ ಹೇರಿದರೆ ದೆಹಲಿಯಲ್ಲಿ 6 ದಿನ ಸಂಪೂರ್ಣ ಲಾಕ್‌ಡೌನ್ ಹೇರಲಾಗಿದೆ. ಮೊದಲ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ ಭಾರತಕ್ಕೆ 2ನೇ ಅಲೆ ಎದುರಿಸಲಾಗದೆ, ಪರಿಸ್ಥಿತಿ ಈ ಮಟ್ಟಕ್ಕೆ ತಲುಪಲು ಕಾರಣವೇನು? ಇಲ್ಲಿದೆ ಬಿಬಿಸಿ ಅಧ್ಯಯನ ವರದಿ.

ನವದೆಹಲಿ(ಏ.19): ಕೊರೋನಾ ಮೊದಲ ಅಲೆಗೆ ಚೀನಾ, ಅಮೆರಿಕ, ಇಟಲಿ, ಬ್ರೆಜಿಲ್ ಸೇರಿದಂತೆ ಹಲವು ದೇಶಗಳು ತತ್ತರಿಸಿ ಹೋಗಿತ್ತು. ಆದರೆ ಭಾರತ ಯಶಸ್ವಿಯಾಗಿ ಎದುರಿಸಿತ್ತು. ಇದರ ಜೊತೆಗೆ ಕೊರೋನಾ ಲಸಿಕೆ ಸಂಶೋಧಿಸಿ, ಭಾರತಕ್ಕೆ ಮಾತ್ರವಲ್ಲ ವಿದೇಶಕ್ಕೂ ರಫ್ತು ಮಾಡಿ ವಿಶ್ವದಿಂದಲೇ ಕೊರೋನಾ ಹೊಡೆದೋಡಿಸುವ ಕಾರ್ಯಕ್ಕೆ ಕೈಹಾಕಿತು. ಆದರೆ ಭಾರತದಲ್ಲಿ ಕೊರೋನಾ ಹೊಂಚು ಹಾಕುತ್ತಿದೆ ಅನ್ನೋ ಕಿಂಚಿತ್ತು ಅನುಮಾನ, ಆತಂಕ ಯಾರಿಗೂ ಕಾಡಲೇ ಇಲ್ಲ. ಇದೀಗ ಕೊರೋನಾ ಆರ್ಭಟಕ್ಕೆ ಸಂಪೂರ್ಣ ಭಾರತವೇ ತತ್ತರಿಸಿ ಹೋಗಿದೆ. ಇದಕ್ಕೆ ಬಿಬಿಸಿ ಮಾಧ್ಯಮ ಅಧ್ಯಯನ ವರದಿ ಬಿಡುಗಡೆ ಮಾಡಿದೆ. ಭಾರತದ ಕೊರೋನಾ ಹರಡುವಿಕೆಗೆ ಬಿಬಿಸಿ ಹೇಳುವ ಕಾರಣ ಅಕ್ಷರಶ ಸತ್ಯವಾಗಿದೆ.

'ಕೊರೋನಾ ನಿಯಂತ್ರಣಕ್ಕೆ ಜನತೆ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಿ'

ಕೊರೋನಾ ಮೊದಲ ಅಲೆ ಇತರ ದೇಶದಲ್ಲಿ ಇನ್ನೂ ಆರ್ಭಟಿಸುತ್ತಲೇ ಇತ್ತು. ಲಾಕ್‌ಡೌನ್, ಕಟ್ಟು ನಿಟ್ಟಿನ ನಿಯಮ, ಜಾಗೃತಿಗಳಿಂದ ಭಾರತದ ಮೊದಲ ಅಲೆಯನ್ನು ನಿಯಂತ್ರಿಸಿತ್ತು. ಡಿಸೆಂಬರ್ ವೇಳೆಗೆ ಭಾರತದಲ್ಲಿ ಬಹುತೇಕ ಸಹಜಸ್ಥಿತಿಗೆ ಮರಳಿತ್ತು. ಭಾರತದ ಆರ್ಥಿಕತೆ ಕೂಡ ಚೇತರಿಕೆ ಕಂಡಿತ್ತು. ಚೇತರಿಕೆ ಭಾರತ ಎಡವಿದ್ದು ಇಲ್ಲೆ ನೋಡಿ. 

ಕೊರೋನಾ ಗೆದ್ದೇ ಬಿಟ್ಟೆವು ಅನ್ನೋ ಭ್ರಮೆಯಲ್ಲಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಮರೆತೆ ಬಿಟ್ಟರು. ಇದರ ನಡುವೆ ಚುನಾವಣಾ ಆಯೋಗ 5 ರಾಜ್ಯಗಳಿಗೆ ಚುನಾವಣೆ ಘೋಷಿಸಿತು. ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರ ಆರಂಭಿಸಿತು. ಭರ್ಜರಿ ರ್ಯಾಲಿ, ಜನರ ಸಂಪರ್ಕ ಹೆಚ್ಚಾಯಿತು. ಮಾರ್ಚ್ ತಿಂಗಳಲ್ಲಿ ಅಹಮ್ಮದಾಬಾದ್‌ನಲ್ಲಿ ಆಯೋಜಿಸಿದ 2 ಪಂದ್ಯಗಳಿಗೆ ಬಿಸಿಸಿಐ 1.30 ಲಕ್ಷ ಅಭಿಮಾನಿಗಳಿಗೆ ಪಂದ್ಯ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 6 ದಿನಗಳ ಪೂರ್ಣ ಲಾಕ್‌ಡೌನ್!.

ಕ್ರೀಡಾಂಗಣದೊಳಗೆ ಮಾಸ್ಕ್ ಹಾಕಿದ್ದ ಅಭಿಮಾನಿಗಳು, ಮನೆಯಿಂದ ಕ್ರೀಡಾಂಗಣ ತಲುಪಿದ ವೇಳೆ ಅಥವಾ ಕ್ರೀಡಾಂಗದಿಂದ ಮತ್ತ ಮನೆ ಸೇರುವ ಮಧ್ಯೆ ಎಷ್ಟು ಜನರನ್ನು ಭೇಟಿಯಾಗಿದ್ದಾರೆ. ಕೊರೋನಾ ಮಾರ್ಗಸೂಚಿ ಪಾಲಿಸಿದ್ದಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ರಾಜಕೀಯ ಪಕ್ಷಗಳು ರ್ಯಾಲಿಯಲ್ಲಿ ಸಾಮಾಜಿಕ ಅಂತರವೇ ಇರಲಿಲ್ಲ. ಕೊರೋನಾ ಮಾರ್ಗಸೂಚಿ ಪಾಲನೆ ಆಗಲೇ ಇಲ್ಲ. ಮಾರ್ಚ್ ಅಂತ್ಯದಲ್ಲೇ ಭಾರತದ ನಿರ್ಲಕ್ಷ್ಯ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಎದ್ದುಕಾಣತೊಡಗಿತು.

ಆಕ್ಸಿಜನ್‌ ಕೊರತೆ: ಆಸ್ಪತ್ರೆಯಲ್ಲಿ 6 ಸೋಂಕಿತರ ಸಾವು!

ಸರ್ಕಾರ, ಜನ ನಾಯಕರ ಕೆಲ ಅಸಡ್ಡೆ ಎಷ್ಟು ಕಾರಣವಾಗಿದೆಯೋ, ಸಾರ್ವಜನಿಕರ ನಿರ್ಲಕ್ಷ್ಯ ಅದಕ್ಕಿಂತ ಹೆಚ್ಚು ಕಾರಣವಾಗಿದೆ. ಹಲವರು ಕೊರೋನಾ ಅನ್ನೋದೇ ಹಣ ಮಾಡೋ ದಂಧೆ, ಕೊರೋನಾ ಭಾರತದಲ್ಲಿ ಇಲ್ಲವೇ ಇಲ್ಲ ಎಂದು ಈಗಲೂ ತಿರುಗಾಡುತ್ತಿರುವವ ಸಂಖ್ಯೆ ದೊಡ್ಡದಿದೆ. ಪೊಲೀಸರ ಕಂಡಾಗ ಮಾಸ್ಕ್, ಸಾಮಾಜಿಕ ಅಂತರ, ಇಲ್ಲದಿದ್ದಾಗ ಜಾತ್ರೆ ಮಾಡೋ ಜಾಯಮಾನ ಭಾರತದಲ್ಲಿ ಹೊಸದೇನಲ್ಲ.

ಮದುವೆ ಸಮಾರಂಭ, ಕಾರ್ಯಕ್ರಮ, ಸಭೆ ಸೇರಿದಂತೆ ಜನ ಸೇರುವ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಕೊರೋನಾ ನಿಯಮ ಪಾಲನೆ ಆಗಲೇ ಇಲ್ಲ. ಕೊರಳಿಗೆ ಮಾಸ್ಕ್ ಹಾಕಿ ಚಲ್ತಾ ಹೇ ಅನ್ನೋ ಜನ ನಾವು. ಇವೆಲ್ಲವೂ ಕೊರೋನಾಗೆ ಆಮಂತ್ರಣ ನೀಡಿದೆ ಅಂದರೆ ಸುಳ್ಳಲ್ಲ.

ಇದರ ಪರಿಣಾಮ ಭಾರತ ಇದೀಗ ಹಿಂದೆಂದೂ ಕೇಳದಂತ ಕೊರೋನಾ ಭೀಕತರೆತೆ ಗುರಿಯಾಗಿದೆ. ಭಾನುವಾರ(ಏ.18) ಭಾರತದಲ್ಲಿ 2.7 ಲಕ್ಷ ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. 1,600 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಐಸಿಯು ಕೊರತೆ, ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಕೊರತೆ ಸೇರಿದಂತೆ ಸಮಸ್ಯೆಗಳ ಆಗರವಾಗಿದೆ. 

ತಜ್ಞರ ವರದಿ ಪ್ರಕಾರ ಭಾರತದಲ್ಲಿ ಜೂನ್ ತಿಂಗಳ ಆರಂಭದಲ್ಲಿ ಪ್ರತಿ ದಿನ 2,300 ಮಂದಿ ಕೊರೋನಾಗೆ ಬಲಿಯಾಗುವ ಸಾಧ್ಯತೆ ಇದೆ ಎಂದಿದೆ. ಸರಾಗವಾಗಿ ಸಾಗುತ್ತಿದ್ದ ಕೊರೋನಾ ಲಸಿಕೆ ನೀಡುವಿಕೆಗೂ ಇದೀಗ ಸಮಸ್ಯೆ ಎದುರಾಗಿದೆ. ಲಸಿಕೆ ಕೊರತೆ ಕಾಡುತ್ತಿದೆ. ಲಸಿಕೆ ಉತ್ಪಾದನೆ ಕಂಪನಿಗಳ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ಹಾಗೂ ಆಕ್ಸಿಜನ್ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಇವೆಲ್ಲವೂ ವಿಳಂಬವಾಯಿತು ಅನ್ನೋದನ್ನು ತಳ್ಳಿಹಾಕುವಂತಿಲ್ಲ.