ಆಕ್ಸಿಜನ್ ಕೊರತೆ: ಆಸ್ಪತ್ರೆಯಲ್ಲಿ 6 ಸೋಂಕಿತರ ಸಾವು!
ಆಕ್ಸಿಜನ್ ಕೊರತೆ: ಆಸ್ಪತ್ರೆಯಲ್ಲಿ 6 ಸೋಂಕಿತರ ಸಾವು| ಮದ್ಯಪ್ರದೇಶದ ಶಾದೋಲ್ ಆಸ್ಪತ್ರೆಯಲ್ಲಿ ಘಟನೆ| ಕೊರತೆ ಹಿನ್ನೆಲೆಯಲ್ಲಿ ರೋಗಿಗಳಿಗೆ ಪೂರೈಕೆ ಇಳಿಕೆ
ಶಾದೋಲ್(ಏ.19): ಆಕ್ಸಿಜನ್ ಕೊರತೆಯಿಂದಾಗಿ 6 ಕೊರೋನಾ ಸೋಂಕಿತರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶ ಶಾದೋಲ್‌ನಲ್ಲಿ ನಡೆದಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ಉಳಿದ 56 ಸೋಂಕಿತರು ಅಪಾಯದಿಂದ ಪಾರಾಗಿದ್ದಾರೆ.
"
ಏನಾಯ್ತು?:
ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 62 ರೋಗಿಗಳು ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು. ಆದರೆ ಶನಿವಾರ ಸಂಜೆ ವೇಳೆಗೆ ರೋಗಿಗಳಿಗೆ ಸರಬರಾಜು ಮಾಡುವ ಆಕ್ಸಿಜನ್ ಖಾಲಿಯಾಗುತ್ತಾ ಬಂದಿತ್ತು. ಸಾಕಷ್ಟುಬೇಡಿಕೆಯ ಹೊರತಾಗಿಯೂ ಆಕ್ಸಿಜನ್ ಹೊತ್ರ ವಾಹನಗಳು ರಾತ್ರಿವರೆಗೂ ಆಸ್ಪತ್ರೆಗೆ ತಲುಪಿರಲಿಲ್ಲ. ಹೀಗಾಗಿ ರೋಗಿಗಳಿಗೆ ಪೂರೈಸುವ ಆಕ್ಸಿಜನ್ ಪ್ರಮಾಣವನ್ನು ಇಳಿಕೆ ಮಾಡಲಾಗಿತ್ತು. ಪರಿಣಾಮ ಮಧ್ಯರಾತ್ರಿ ವೇಳೆ ಅಗತ್ಯ ಆಕ್ಸಿಜನ್ ಲಭ್ಯವಾಗದೇ 6 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಕಮಲ್‌ನಾಥ್, ಭೋಪಾಲ್, ಇಂದೋರ್, ಉಜ್ಜಯಿನಿ, ಸಾಗರ್, ಜಬಲ್ಪುರ, ಖಾಂಡ್ವಾ, ಖರ್ಗೋನ್‌ನಲ್ಲಿ ಆಕ್ಸಿಜನ್ ಇಲ್ಲದೇ ಸೋಂಕಿತರ ಸಾವಿನ ಹೊರತಾಗಿಯೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೇ ಹೋದದ್ದು ದುರಂತ. ಇನ್ನಷ್ಟುಜನರ ಸಾವಿಗೆ ಸರ್ಕಾರ ಕಾಯುತಿದೆ ಎಂದು ಕಿಡಿಕಾರಿದ್ದಾರೆ.