ಜೈಪುರ(ಏ.20): ಕೊರೋನಾ 2ನೇ ಅಲೆ ಸ್ಫೋಟಗೊಂಡು ಪರಿಸ್ಥಿತಿ ಕೈಮೀರಿದ ಬೆನ್ನಲ್ಲೇ ದೆಹಲಿ ಮತ್ತು ರಾಜಸ್ಥಾನದಲ್ಲಿ ಏ.19ರ ಸೋಮವಾರದಿಂದಲೇ ಜಾರಿಯಾಗುವಂತೆ ಲಾಕ್ಡೌನ್‌ ಜಾರಿಗೊಳಿಸಲಾಗಿದೆ. ದೆಹಲಿಯಲ್ಲಿ 6 ದಿನ ಮತ್ತು ರಾಜಸ್ಥಾನದಲ್ಲಿ ಮೇ 3ರವರೆಗೆ ಅಂದರೆ 15 ದಿನ ಲಾಕ್ಡೌನ್‌ ಜಾರಿಯಲ್ಲಿರಲಿದೆ. ರಾಜಸ್ಥಾನ ಸರ್ಕಾರವು ಈ ಅವಧಿಯನ್ನು ‘ಸಾರ್ವಜನಿಕ ಶಿಸ್ತುಪಾಲನಾ ಪಾಕ್ಷಿಕ’ ಎಂದು ಹೆಸರಿಸಿದೆ.

ಎರಡೂ ರಾಜ್ಯಗಳಲ್ಲಿ ಲಾಕ್ಡೌನ್‌ ಅವಧಿಯಲ್ಲಿ ಸಾರಿಗೆ ಸಂಚಾರ, ಕೈಗಾರಿಕೆಗಳು, ಅಗತ್ಯ ಸೇವೆಗಳು ಅಬಾಧಿತವಾಗಿರಲಿದೆ. ಆದರೆ ಖಾಸಗಿ ಕಚೇರಿ, ಅಂಗಡಿ, ಮಾಲ್‌, ವಾರದ ಮಾರುಕಟ್ಟೆ, ಶೈಕ್ಷಣಿಕ ಹಾಗೂ ಕೋಚಿಂಗ್‌ ಸಂಸ್ಥೆ, ಸಿನಿಮಾ ಹಾಲ್‌, ರೆಸ್ಟೋರೆಂಟ್‌, ಬಾರ್‌, ಸಭಾಂಗಣ, ಆಡಿಟೋರಿಯಂ, ಸಾರ್ವಜನಿಕ ಉದ್ಯಾನ, ಕ್ರೀಡಾ ಸಂಕೀರ್ಣ, ಜಿಮ್‌, ಸ್ಪಾ, ಕ್ಷೌರದ ಅಂಗಡಿ, ಬ್ಯೂಟಿ ಪಾರ್ಲರ್‌ ಸೇವೆ ಅಲಭ್ಯವಾಗಲಿದೆ.

ಮದುವೆಗೆ 50 ಜನರಿಗೆ, ಅಂತ್ಯಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಭಾಗಿಯಾಗಲು ಅವಕಾಶವಿರಲಿದೆ. ಕೊರೋನಾ ಲಸಿಕೆ ಪಡೆಯಲು ಅಥವಾ ಟೆಸ್ಟಿಂಗ್‌ಗೆ ಹೋಗುವವರಿಗೆ ವಿನಾಯಿತಿ ಇರಲಿದ್ದು, ವಿಮಾನ, ರೈಲು, ಅಂತಾರಾಜ್ಯ ಬಸ್‌ ಪ್ರಯಾಣಿಕರು ಟಿಕೆಟ್‌ ತೋರಿಸಿ ಪ್ರಯಾಣಿಸಬಹುದು.

ದಿಲ್ಲಿ ಬಂದ್‌:

ಕೊರೋನಾ ಹೆಚ್ಚಾಗುತ್ತಿದ್ದರೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್‌ಡೌನ್‌ ಮಾಡುವುದಿಲ್ಲ ಎಂದು ಹೇಳಿಕೊಂಡೇ ಬಂದಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸೋಮವಾರ ಹಠಾತ್ತನೆ 6 ದಿನಗಳ ಲಾಕ್‌ಡೌನ್‌ ಘೋಷಣೆ ಮಾಡಿದರು. ದೆಹಲಿಯ ಆರೋಗ್ಯ ವ್ಯವಸ್ಥೆ ಶಕ್ತಿಮೀರಿ ಕೆಲಸ ಮಾಡುತ್ತಿದೆ. ಸದ್ಯ ಅದಿನ್ನೂ ಕುಸಿದುಬಿದ್ದಿಲ್ಲ. ನಿತ್ಯ 25 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದರೂ ಆರೋಗ್ಯ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಳದಿಂದಾಗಿ ಔಷಧ, ಹಾಸಿಗೆ, ಐಸಿಯು, ಆಮ್ಲಜನಕ ಕೊರತೆ ಎದುರಾಗಿದೆ. ಹೀಗಾಗಿ ಆರೋಗ್ಯ ವ್ಯವಸ್ಥೆ ಕುಸಿಯುವುದನ್ನು ತಡೆಯಲು ಲಾಕ್‌ಡೌನ್‌ ಅನಿವಾರ್ಯವಾಗಿದೆ. ಆದರೆ ಈ ನಿರ್ಧಾರ ಅಷ್ಟುಸುಲಭವಾಗಿಲ್ಲ ಎಂದು ಕೇಜ್ರಿವಾಲ್‌ ಅವರು ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದಿಲ್ಲಿಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗೆ ತರಬೇತಿ ಪಡೆಯಲು ಕ್ರೀಡಾಳುಗಳು ಬಳಸುವ ಈಜುಕೊಳ ಹೊರತುಪಡಿಸಿ ಉಳಿದೆಲ್ಲಾ ಸ್ವಿಮ್ಮಿಂಗ್‌ಪೂಲ್‌ ಬಂದ್‌. ಕಾರ್ಮಿಕರು ನೆಲೆಸಿರುವ ಸ್ಥಳಗಳನ್ನು ಹೊರತುಪಡಿಸಿ ಉಳಿದೆಡೆ ನಿರ್ಮಾಣ ಚಟುವಟಿಕೆ ಸ್ಥಗಿತ. 50% ಪ್ರಯಾಣಿಕ ಮಿತಿಯೊಂದಿಗೆ ಬಸ್‌, ಮೆಟ್ರೋ ರೈಲು ಸೇವೆ. ಇಬ್ಬರಿಗಿಂತ ಹೆಚ್ಚು ಜನರಿಲ್ಲದೆ ಟ್ಯಾಕ್ಸಿ ಪ್ರಯಾಣ. ಮಾಧ್ಯಮ ಸಿಬ್ಬಂದಿಗೆ ಲಾಕ್‌ಡೌನ್‌ ನಿರ್ಬಂಧದಿಂದ ಪೂರ್ಣ ವಿನಾಯಿತಿ ನೀಡಲಾಗಿದೆ.

ರಾಜಸ್ಥಾನ:

ರಾಜ್ಯದಲ್ಲಿ ನಿತ್ಯ ದಾಖಲೆಯ 10000ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ 15 ದಿನಗಳ ಲಾಕ್ಡೌನ್‌ ಘೋಷಿಸಲಾಗಿದೆ. ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಹಣ್ಣು, ತರಕಾರಿ, ಹಾಲಿನ ಉತ್ಪನ್ನ ಹಾಗೂ ಕಿರಾಣಿ ಸಾಮಗ್ರಿಗಳ ಮಾರಾಟ ಮಳಿಗೆಗಳನ್ನು ಸಂಜೆ 5 ಗಂಟೆಯ ವರೆಗೆ ಮಾತ್ರವೇ ತೆರೆಯಬಹುದಾಗಿದೆ. ಪೆಟ್ರೋಲ್‌ ಬಂಕ್‌ ರಾತ್ರಿ 8 ಗಂಟೆಯವರೆಗೆ ತೆರೆದಿರಲಿವೆ. ಹೊರ ರಾಜ್ಯಗಳಿಂದ ರಾಜಸ್ಥಾನಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಗಳ ಮುನ್ನ ಪಡೆದ ಆರ್‌ಟಿಪಿಸಿಆರ್‌ ವರದಿ ತೋರಿಸುವುದು ಕಡ್ಡಾಯ.

ಉ.ಪ್ರ.: 5 ಜಿಲ್ಲೆ ಲಾಕ್ಡೌನ್‌ ಮಾಡಲು ಕೋರ್ಟ್‌ ಆದೇಶ

ಸೋಂಕು ತೀವ್ರ ಪ್ರಮಾಣದಲ್ಲಿ ಏರುತ್ತಿರುವ ಉತ್ತರ ಪ್ರದೇಶದ ಲಖನೌ, ಪ್ರಯಾಗ್‌ರಾಜ್‌, ವಾರಾಣಸಿ, ಕಾನ್ಪುರ ಮತ್ತು ಗೋರಖ್‌ಪುರ ಜಿಲ್ಲೆಗಳಲ್ಲಿ ಏ.10ರಿಂದ ಏ.26ರವರೆಗೆ ಲಾಕ್ಡೌನ್‌ ಜಾರಿಗೆ ಸೂಚಿಸಿ ಅಲಹಾಬಾದ್‌ ಹೈಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ.

ಮಹಾರಾಷ್ಟ್ರದಲ್ಲೂ ಶೀಘ್ರ ಲಾಕ್‌ಡೌನ್‌ ಆರಂಭ?

ದೇಶದಲ್ಲೇ ಅತಿ ಹೆಚ್ಚು ಸೋಂಕು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಲಾಕ್‌ಡೌನ್‌ ಜಾರಿ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮುಂದಿನ 2 ದಿನಗಳಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸದ್ಯ ಕರ್ಫ್ಯೂ ಇದ್ದರೂ ರಾಜ್ಯದಲ್ಲಿ ಏನೂ ಪ್ರಯೋಜನವಾಗುತ್ತಿಲ್ಲ.