ನವದೆಹಲಿ(ಮಾ.04): ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆಯು ಕೇಂದ್ರ ಸರ್ಕಾರಿ ಸ್ವಾಮ್ಯದ ‘ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸಚ್‌ರ್‍’ (ಐಸಿಎಂಆರ್‌) ಜೊತೆಗೂಡಿ ಕೊರೋನಾ ವಿರುದ್ಧ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆ ಶೇ.81ರಷ್ಟುಪರಿಣಾಮಕಾರಿ ಎಂದು ಕಂಡುಬಂದಿದೆ. ಮೂರನೇ ಹಂತದ ಪ್ರಯೋಗದ ಕುರಿತ ಮಧ್ಯಂತರ ವರದಿಯನ್ನು ಕಂಪನಿ ಬುಧವಾರ ಬಿಡುಗಡೆ ಮಾಡಿದ್ದು ಅದರಲ್ಲಿ ಈ ಮಾಹಿತಿ ಇದೆ. ಮೂರನೇ ಹಂತದ ಪ್ರಯೋಗದ ಫಲಿತಾಂಶ ಹೊರಬರದೇ ಅದನ್ನು ದೇಶವ್ಯಾಪಿ ಬಳಕೆಗೆ ಅನುಮತಿ ಕೊಟ್ಟಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಈ ಫಲಿತಾಂಶ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಇಸ್ಫೋಸಿಸ್‌, ಆ್ಯಕ್ಸೆಂಚರ್‌ ಭಾರತೀಯ ಸಿಬ್ಬಂದಿಗೆ ಕಂಪನಿಯಿಂದಲೇ ಲಸಿಕೆ

ಇನ್ನೊಂದು ವಿಶೇಷವೆಂದರೆ ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿಯು ಆಸ್ಟ್ರಾಜನೆಕಾ ಕಂಪನಿ ಜೊತೆಗೂಡಿ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆಗಿಂತ ದೇಶೀ ಲಸಿಕೆ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ. ಕೋವಿಶೀಲ್ಡ್‌ನ 2 ಡೋಸ್‌ ಶೇ.70ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿತ್ತು.

3ನೇ ಹಂತ:

ಭಾರತ್‌ ಬಯೋಟೆಕ್‌ ಕಂಪನಿಯು 3ನೇ ಹಂತದ ಪ್ರಯೋಗದ ವೇಳೆ 18-98ರ ವಯೋಮಾನದ 25800 ಸ್ವಯಂಸೇವಕರನ್ನು ನೇಮಿಸಿಕೊಂಡಿತ್ತು. ಈ ಪೈಕಿ 2433 ಜನರು 60 ವರ್ಷ ಮೇಲ್ಪಟ್ಟವರು ಮತ್ತು 4500 ಜನರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರು. ಇವರ ಮೇಲಿನ ಮಧ್ಯಂತರ ಅಧ್ಯಯನದ ವೇಳೆ ಲಸಿಕೆ ಶೇ.80.6ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿದೆ. ಈಗಾಗಲೇ ವಿಶ್ವದ 40ಕ್ಕೂ ಹೆಚ್ಚು ದೇಶಗಳು ಕೋವ್ಯಾಕ್ಸಿನ್‌ ಖರೀದಿಗೆ ಆಸಕ್ತಿ ತೋರಿವೆ.

24 ತಾಸೂ ಲಸಿಕೆ ನೀಡಲು ಅವಕಾಶ: ಸಮಯ ವಿಸ್ತರಿಸಲು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ!

ಈ ಕುರಿತು ಮಾಹಿತಿ ನೀಡಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಎಲ್ಲಾ, ‘ಇಂದಿನ ದಿನ ಲಸಿಕೆ ಅವಿಷ್ಕಾರಕ್ಕೆ, ವಿಜ್ಞಾನಕ್ಕೆ ಮತ್ತು ಕೊರೋನಾ ವಿರುದ್ಧದ ನಮ್ಮ ಹೋರಾಟಕ್ಕೆ ಮಹತ್ವದ ದಿನ. ಇಂದಿನ ನಮ್ಮ 3ನೇ ಹಂತದ ಫಲಿತಾಂಶದೊಂದಿಗೆ ನಾವು, 27000 ಜನರನ್ನು ಒಳಗೊಂಡ ಎಲ್ಲಾ 3 ಹಂತದ ಪರೀಕ್ಷೆಯ ಫಲಿತಾಂಶ ನೀಡಿದಂತೆ ಆಗಿದೆ. ಕೋವ್ಯಾಕ್ಸಿನ್‌ ಲಸಿಕೆ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿರುವ ಜೊತೆಗೆ ಹೊಸದಾಗಿ ಕೊರೋನಾ ತಳಿಗಳ ಮೇಲೂ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ’ ಎಂದಿದ್ದಾರೆ.

ಕಳೆದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ದೇಶೀ ಕೋವ್ಯಾಕ್ಸಿನ್‌ ಲಸಿಕೆ ಪಡೆಯುವ ಮೂಲಕ ಆತ್ಮನಿರ್ಭರ ಕರೆಯನ್ನು ಸ್ವತಃ ಪಾಲನೆ ಮಾಡಿದ್ದರು. ಅಲ್ಲದೆ ಲಸಿಕೆ ಸಾಮರ್ಥ್ಯದ ಕುರಿತ ಅನುಮಾನಗಳಿಗೆ ತೆರೆ ಎಳೆದಿದ್ದರು.