ನವದೆಹಲಿ(ಮಾ.04): ಭಾರತದಾದ್ಯಂತ ಇರುವ ತಮ್ಮ ಕಂಪನಿಯ ಸಿಬ್ಬಂದಿಗೆ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡುವುದಾಗಿ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಇಸ್ಫೋಸಿಸ್‌ ಮತ್ತು ಆಕ್ಸೆಂಚರ್‌ ಕಂಪನಿಗಳು ಘೋಷಿಸಿವೆ. ಅಲ್ಲದೆ ಅರ್ಹ ಕುಟುಂಬ ಸದಸ್ಯರಿಗೂ ಈ ಸೌಲಭ್ಯ ವಿತರಿಸುವುದಾಗಿ ಕಂಪನಿಗಳು ಹೇಳಿಕೆ ನೀಡಿವೆ.

ಸದ್ಯ ದೇಶದಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ತಕ್ಷಣಕ್ಕೆ ಈ ವರ್ಗದಲ್ಲಿ ಬರುವ ಸಿಬ್ಬಂದಿಗೆ ನೀಡಿ, ಮುಂದಿನ ಹಂತದಲ್ಲಿ ಎಲ್ಲಾ ಆಸಕ್ತಿಗೆ ಲಸಿಕೆ ನೀಡುವ ಬಗ್ಗೆ ಕಂಪನಿಗಳು ಚಿಂತನೆ ನಡೆಸಿವೆ.

ಸದ್ಯ ಭಾರತದಲ್ಲಿ ಇಸ್ಫೋಸಿಸ್‌ 2.43 ಲಕ್ಷ ಮತ್ತು ಆ್ಯಕ್ಸೆಂಚರ್‌ 1.70 ಲಕ್ಷ ಸಿಬ್ಬಂದಿಯನ್ನು ಹೊಂದಿವೆ. ಮಹೀಂದ್ರಾ ಗ್ರೂಪ್‌ ಮತ್ತು ಐಟಿಸಿ ಲಿಮಿಟೆಡ್‌ ಕಂಪನಿಗಳು ಕೂಡಾ ತಮ್ಮ ಸಿಬ್ಬಂದಿಗೆ ಉಚಿತವಾಗಿ ಲಸಿಕೆ ನೀಡುವ ಘೋಷಣೆ ಮಾಡಿವೆ.