Asianet Suvarna News Asianet Suvarna News

ರಾಷ್ಟ್ರಕ್ಕೆ ಸಮರ್ಪಿಸಿಕೊಂಡವರನ್ನು ದೇಶ ಮರೆಯಲ್ಲ: ಮೋದಿ

ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ರಾಷ್ಟ್ರದ ಏಳಿಗೆಗಾಗಿ ನಿಸ್ವಾರ್ಥವಾಗಿ ತಮ್ಮನ್ನು ಸಮರ್ಪಿಸಿಕೊಂಡವರನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

Country will not forget those who dedicated themselves to the nation PM Narendra modi akb
Author
First Published Feb 4, 2024, 8:44 AM IST

ಸಂಬಲ್‌ಪುರ (ಒಡಿಶಾ): ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ರಾಷ್ಟ್ರದ ಏಳಿಗೆಗಾಗಿ ನಿಸ್ವಾರ್ಥವಾಗಿ ತಮ್ಮನ್ನು ಸಮರ್ಪಿಸಿಕೊಂಡವರನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಶನಿವಾರ ಒಡಿಶಾದಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಲಾಲ್‌ ಕೃಷ್ಣ ಅಡ್ವಾಣಿ ರಾಷ್ಟ್ರಸೇವೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದರು. ಅಂತಹ ರಾಷ್ಟ್ರಭಕ್ತರನ್ನು ಈ ರಾಷ್ಟ್ರ ಕಡೆಗಣಿಸುವುದಿಲ್ಲ ಎನ್ನುವುದಕ್ಕೆ ಅವರಿಗೆ ಭಾರತ ರತ್ನ ಪುರಸ್ಕಾರ ಸಂದಿರುವುದೇ ಸಾಕ್ಷಿ. ಅವರು ರಾಷ್ಟ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ನನಗೆ ಸದಾ ಸ್ಫೂರ್ತಿ ತುಂಬುತ್ತವೆ’ ಎಂದರು.

‘ಅವರು ಯಾವಾಗಲೂ ರಾಷ್ಟ್ರ ಮೊದಲು ಎಂಬ ಸಿದ್ಧಾಂತದೊಂದಿಗೆ ಶಾಸನಗಳನ್ನು ರೂಪಿಸಲು ಉತ್ಸುಕರಾಗಿದ್ದರು. ಭಾರತವು ವಂಶಾಡಳಿತದ ಕಪಿಮುಷ್ಟಿಯಲ್ಲಿ ನರಳುತ್ತಿತ್ತು. ಈ ವೇಳೆ ವಂಶಾಡಳಿತಕ್ಕೆ ಅವರು ಸವಾಲೆಸೆದು ಸರ್ವರನ್ನೂ ಒಳಗೊಳ್ಳುವ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಹೊಂದಿರುವಂತಹ ಪ್ರಜಾಪ್ರಭುತ್ವವನ್ನು ನಿರ್ಮಿಸುವ ಕನಸು ಕಂಡು ಅಡ್ವಾಣಿ, ಅದರಲ್ಲಿ ಯಶಸ್ವಿ ಆದರು. ಇಂತಹ ಮೇರು ನಾಯಕನ ಮಮತೆ ಮತ್ತು ಮಾರ್ಗದರ್ಶನದಲ್ಲಿ ಬೆಳೆದಿರುವ ನಾನು ಅದೃಷ್ಟವಂತನೇ ಸರಿ’ ಎಂದು ಅಡ್ವಾಣಿಯನ್ನು ಸ್ಮರಿಸಿದರು. ಈ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‌ ಪಕ್ಷದ ಗಾಂಧಿ ಕುಟುಂಬದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

ಪಕ್ಷದ ಸಾಮಾನ್ಯ ಕಾರ್ಯಕರ್ತನ ಸ್ಥಾನದಿಂದ ದೇಶದ ಉಪಪ್ರಧಾನಿ ಸ್ಥಾನದವರೆಗೆ ಏರಿದ ಹಿರಿಯ ನಾಯಕ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. ಅವರು ರಾಷ್ಟ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಐತಿಹಾಸಿಕವಾಗಿವೆ: ನರೇಂದ್ರ ಮೋದಿ, ಪ್ರಧಾನಮಂತ್ರಿ

ಸ್ನೇಹಿತ ಅಡ್ವಾಣಿಗೆ ಜೋಶಿ ಭಾವುಕ ಶುಭಾಶಯ

ನವದೆಹಲಿ: ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ಪ್ರಶ್ತಿಗೆ ಭಾಜನರಾಗಿರುವ ತಮ್ಮ ಸ್ನೇಹಿತ ಎಲ್‌.ಕೆ ಅಡ್ವಾಣಿ ಅವರನ್ನು ಭೇಟಿಯಾದ ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್‌ ಜೋಶಿ ಅವರು ಅಡ್ವಾಣಿಯನ್ನು ಅಭಿನಂದಿಸಿದ ಭಾವನಾತ್ಮಕ ಪ್ರಸಂಗ ಶನಿವಾರ ನಡೆಯಿತು. ದೆಹಲಿಯಲ್ಲಿರುವ ಅಡ್ವಾಣಿ ನಿವಾಸಕ್ಕೆ ಶನಿವಾರ ಸಂಜೆ ಆಗಮಿಸಿದ ಜೋಶಿ ಪುಷ್ಪ ಗುಚ್ಛ ನೀಡಿ, ತಮ್ಮ ಸ್ನೇಹಿತನಿಗೆ ಶುಭಾಶಯ ಕೋರಿದರು. ಇಬ್ಬರೂ ಹಿರಿಯ ನಾಯಕರು, ಆಪ್ತ ಸ್ನೇಹಿತರು ಭೇಟಿಯಾಗಿ ಪರಸ್ಪರ ಕುಶಲೋಪರಿ ವಿಚಾರಿಸಿದ ಈ ಭಾವುಕ ಕ್ಷಣದ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ರಾಮರಥ ಯಾತ್ರೆಯಲ್ಲಿ ಜೋಶಿ, ಅಡ್ವಾಣಿ ಅವರ ಬಲಗೈ ಆಗಿದ್ದರು. ಈ ಇಬ್ಬರೂ ರಾಷ್ಟ್ರ ರಾಜಕಾರಣದಲ್ಲಿ, ಬಿಜೆಪಿಯಲ್ಲಿ ಎಂದಿಗೂ ಧೀಮಂತ ಜೋಡೆತ್ತು ಎಂದೇ ಖ್ಯಾತರಾಗಿದ್ದಾರೆ.

Follow Us:
Download App:
  • android
  • ios