Asianet Suvarna News Asianet Suvarna News

ನನ್ನ ಪ್ರಾಣ ನನ್ನದಲ್ಲ. ನನ್ನ ಉಸಿರು ರಾಷ್ಟ್ರಕ್ಕೆ ಸಮರ್ಪಿತವಾಗಿದೆ: ಅಡ್ವಾಣಿ

ತಮಗೆ ಭಾರತರತ್ನ ಸಂದ ಬಗ್ಗೆ ದೇಶದ ಜನತೆಗೆ ಅತ್ಯಂತ ವಿನೀತ ಭಾವದಿಂದ ಕೃತಜ್ಞತೆ ಸಲ್ಲಿಸಿರುವ ಬಿಜೆಪಿ ಮೇರು ನಾಯಕ ಎಲ್‌.ಕೆ. ಅಡ್ವಾಣಿ, ನನ್ನ ಪ್ರಾಣ ನನ್ನದಲ್ಲ. ನನ್ನ ಉಸಿರು ರಾಷ್ಟ್ರಕ್ಕೆ ಸಮರ್ಪಿತವಾಗಿದೆ. ನಾನು ನಂಬಿರುವ ಸಿದ್ಧಾಂತಕ್ಕೆ ಪುರಸ್ಕಾರ ಸಂದಿದೆ ಎಂದು ಹರ್ಷಿಸಿದ್ದಾರೆ.

My life is not mine My breath is dedicated to the nation LK Advani said after  the announcement of the Bharat Ratna award akb
Author
First Published Feb 4, 2024, 8:08 AM IST

ನವದೆಹಲಿ: ತಮಗೆ ಭಾರತರತ್ನ ಸಂದ ಬಗ್ಗೆ ದೇಶದ ಜನತೆಗೆ ಅತ್ಯಂತ ವಿನೀತ ಭಾವದಿಂದ ಕೃತಜ್ಞತೆ ಸಲ್ಲಿಸಿರುವ ಬಿಜೆಪಿ ಮೇರು ನಾಯಕ ಎಲ್‌.ಕೆ. ಅಡ್ವಾಣಿ, ನನ್ನ ಪ್ರಾಣ ನನ್ನದಲ್ಲ. ನನ್ನ ಉಸಿರು ರಾಷ್ಟ್ರಕ್ಕೆ ಸಮರ್ಪಿತವಾಗಿದೆ. ನಾನು ನಂಬಿರುವ ಸಿದ್ಧಾಂತಕ್ಕೆ ಪುರಸ್ಕಾರ ಸಂದಿದೆ ಎಂದು ಹರ್ಷಿಸಿದ್ದಾರೆ.

ಪ್ರಶಸ್ತಿ ಘೋಷಣೆಯಾದ ನಂತರ ಸವಿಸ್ತಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಅತ್ಯಂತ ನಮ್ರತೆ ಮತ್ತು ಧನ್ಯತೆಯಿಂದ ನಾನು ಭಾರತರತ್ನ ಪುರಸ್ಕಾರವನ್ನು ಸ್ವೀಕರಿಸುತ್ತೇನೆ. ಈ ಗೌರವ ಕೇವಲ ನನಗೆ ಸಂದಿಲ್ಲ. ನಾನು ನನ್ನ ಜೀವನದುದ್ದಕ್ಕೂ ನಂಬಿಕೊಂಡು ಬಂದಿರುವ ತತ್ವ ಸಿದ್ಧಾಂತಗಳಿಗೂ ಸಂದಿದೆ ಎಂದಿದ್ದಾರೆ.

ನಾನು ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿ 14ನೇ ವಯಸ್ಸಿನಲ್ಲಿ ಸಂಘಕ್ಕೆ ಸೇರಿದಾಗಿನಿಂದಲೂ ‘ಇದಂ ನ ಮಮ’ (ನನ್ನ ಪ್ರಾಣ ನನ್ನದಲ್ಲ. ನನ್ನ ಪ್ರಾಣ ರಾಷ್ಟ್ರಕ್ಕೆ ಸೇರಿದ್ದು) ಎಂಬ ತತ್ವದ ಮೇಲೆ ನಿಸ್ವಾರ್ಥ ಸೇವೆ ಮಾಡಿಕೊಂಡು ಬಂದಿದ್ದೇನೆ. ಅಲ್ಲದೆ ನನಗೆ ಸದಾ ರಾಷ್ಟ್ರಸೇವೆ ಮಾಡುವ ಪುರಸ್ಕಾರ ಸಿಗಲಿ ಎಂದು ಬಯಸಿದ್ದೆನೇ ಹೊರತು ಮತ್ತಾವುದಕ್ಕೂ ನಾನು ಆಸೆಪಟ್ಟಿರಲಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ.

ಭಾರತ್ ರತ್ನ ಘೋಷಣೆ ಬೆನ್ನಲ್ಲೇ ಎಲ್‌ಕೆ ಅಡ್ವಾಣಿಗೆ ಸಿಹಿ ತಿನ್ನಿಸಿದ ಪುತ್ರಿ, ಶುಭಾಶಯಗಳ ಮಹಾಪೂರ!

ಈ ಸಂದರ್ಭದಲ್ಲಿ ನಾನು ಪ್ರಮುಖವಾಗಿ ಭಾರತರತ್ನ ಪುರಸ್ಕೃತರಾದ ದೀನ್‌ದಯಾಳ್‌ ಉಪಾಧ್ಯಾಯ ಮತ್ತು ಅಟಲ್‌ ಬಿಹಾರಿ ವಾಜಪೇಯಿಯವರನ್ನು ನೆನೆಯುತ್ತೇನೆ. ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಅವರಿಂದಲೇ ನಾನು ಇಷ್ಟು ರಾಷ್ಟ್ರಸೇವೆ ಮಾಡಲು ಅವಕಾಶ ದೊರೆಯಿತು. ಅವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಮತ್ತು ನಮ್ಮ ರಾಷ್ಟ್ರ ಅಭಿವೃದ್ಧಿ ಪಥದ ಉತ್ತುಂಗದಲ್ಲಿ ಮುನ್ನಡೆಯಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರಶಸ್ತಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಎಲ್ಲ ಬಿಜೆಪಿ-ಆರ್‌ಎಸ್‌ಎಸ್‌ ಕಾರ್ಯಕರ್ತರು ಮತ್ತು ತಮ್ಮ ಜೀವನದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದ್ದಾರೆ. ಜೊತೆಗೆ ತಮ್ಮ ಕುಟುಂಬವನ್ನು ನೆನೆಯುತ್ತಾ ತಮ್ಮ ಸ್ವರ್ಗಸ್ಥ ಪತ್ನಿ ಕಮಲಾ ತಮಗೆ ಬೆನ್ನೆಲುಬಾಗಿ ನಿಂತು ಸ್ಫೂರ್ತಿ ನೀಡುತ್ತಿದ್ದರು ಎಂದು ಸ್ಮರಿಸಿದ್ದಾರೆ.

Breaking: ಬಿಜೆಪಿಯ ಭೀಷ್ಮ ಎಲ್‌ ಕೆ ಅಡ್ವಾಣಿಗೆ ಭಾರತರತ್ನ ಘೋಷಣೆ

ಭಾರತರತ್ನ ಪಡೆದ ಅಡ್ವಾಣಿ 50ನೇ ವ್ಯಕ್ತಿ

ಭಾರತರತ್ನ ಪ್ರಶಸ್ತಿಯನ್ನು ಇದುವರೆಗೆ 50 ಜನರಿಗೆ ನೀಡಲಾಗಿದ್ದು, ಅದರಲ್ಲಿ 15 ಜನರಿಗೆ ಮರಣೋತ್ತರವಾಗಿ ನೀಡಲಾಗಿದೆ. ಅಡ್ವಾಣಿ 50ನೇ ವ್ಯಕ್ತಿಯಾಗಿದ್ದಾರೆ. ಭಾರತ ರತ್ನ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಇದನ್ನು 1954ರಲ್ಲಿ ಸ್ಥಾಪಿಸಲಾಯಿತು. ಅಸಾಧಾರಣ ಸಾರ್ವಜನಿಕ ಸೇವೆ, ಕ್ರೀಡೆ, ಸಾಹಿತ್ಯ, ವಿಜ್ಞಾನ ಮತ್ತು ಕಲೆಯಂತಹ ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇದನ್ನು ನೀಡಲಾಗುತ್ತದೆ.

ಮೋದಿ ಹರ್ಷ:

ಅಡ್ವಾಣಿಗೆ ಭಾರತ ರತ್ನ ಪ್ರಕಟಿಸಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ‘ಹಿರಿಯ ನಾಯಕ ಅಡ್ವಾಣಿ ಅವರಿಗೆ ಭಾರತರತ್ನ ನೀಡಿ ಪುರಸ್ಕರಿಸುವುದು ನನ್ನ ಪಾಲಿಗೆ ಅತ್ಯಂತ ಭಾವುಕ ಕ್ಷಣವಾಗಿದೆ. ಅವರು ತಮ್ಮ ಸಮಸ್ತ ಜೀವನವನ್ನು ದೇಶದ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿದ್ದಾರೆ. ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಮಾಡಿದ ಸಾಧನೆಗಳು ಅತ್ಯಂತ ಐತಿಹಾಸಿಕವಾದವುಗಳಾಗಿವೆ. ಸುಮಾರು 7 ದಶಕಗಳ ಅವರ ರಾಜಕೀಯ ಜೀವನ ಅತ್ಯಂತ ಘನತೆಯಿಂದ ಮತ್ತು ಪಾರದರ್ಶಕತೆಯಿಂದ ಕೂಡಿತ್ತು. ಅವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅವರು ಸಂಸತ್ತಿನಲ್ಲಿ ಮತ್ತು ಸಂಪುಟ ಸಭೆಗಳಲ್ಲಿ ವ್ಯಕ್ತಪಡಿಸುತ್ತಿದ್ದ ನವೀನ ಆಲೋಚನೆಗಳು ದೂರದೃಷ್ಟಿಯುಳ್ಳದ್ದಾಗಿತ್ತು. ಅವರು ರಾಷ್ಟ್ರದ ಐಕ್ಯತೆ ಮತ್ತು ಸಂಸ್ಕೃತಿಯ ಪುನರುತ್ಥಾನಕ್ಕೆ ಅದ್ವಿತೀಯ ಕೊಡುಗೆ ಸಲ್ಲಿಸಿದ್ದಾರೆ. ಅಂತಹ ಮೇರು ನಾಯಕನೊಂದಿಗೆ ಹಲವು ಬಾರಿ ಚರ್ಚಿಸಿ ಹಲವು ವಿಷಯಗಳಲ್ಲಿ ಮಾರ್ಗದರ್ಶನ ಪಡೆದುಕೊಳ್ಳುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ’ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios