ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನೆಗೆ ದಿನಗಣನೆ: ಗರ್ಭಗುಡಿ ಫೋಟೋ ಬಿಡುಗಡೆ ಮಾಡಿದ ಮಂದಿರ ಟ್ರಸ್ಟ್
ರಾಮಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ ಮಾಡುವ ಗರ್ಭಗುಡಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ನವದೆಹಲಿ: ಅಯೋಧ್ಯೆ ರಾಮ ಮಂದಿರ ಇನ್ನೇನು ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇವೆ. ಮಂದಿರ ನಿರ್ಮಾಣದ ಬಹುತೇಕ ಕಾರ್ಯ ಮುಗಿದಿದ್ದು, ಮುಕ್ತಾಯ ಹಂತದ ಕೆಲಸಗಳು ಬರದಿಂದ ಸಾಗುತ್ತಿವೆ. ಈ ಮಧ್ಯೆ ರಾಮಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ ಮಾಡುವ ಗರ್ಭಗುಡಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಲಾಗುವ ಗರ್ಭಗುಡಿಯೂ ನಿರ್ಮಾಣ ಕಾರ್ಯ ಮುಗಿದಿದ್ದು, ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್ ಫಿಟ್ ಮಾಡುವ ಕೆಲಸಗಳು ಕೂಡ ನಡೆದವು. ರಾಮಲಲ್ಲಾನ ಗರ್ಭಗುಡಿ ಕೆಲ ಫೋಟೋಗಳು ನಿಮಗಾಗಿ ಎಂದು ಬರೆದುಕೊಂಡಿದ್ದಾರೆ. ನಿನ್ನೆಯಷ್ಟೇ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶ್ರೀರಾಮ ಜನ್ಮಭೂಮಿಯಲ್ಲಿ ನಡೆಯುತ್ತಿರುವ ಕಾಮಗಾರಿಯ ವೀಡಿಯೋವೊಂದನ್ನು ರಿಲೀಸ್ ಮಾಡಿತ್ತು.
ಅಯೋಧ್ಯೆಯಲ್ಲಿ ಕನ್ನಡಿಗರು ಕೆತ್ತಿದ ರಾಮಲಲ್ಲ ವಿಗ್ರಹ ಆಯ್ಕೆ ಆಗುತ್ತಾ? ಡಿಸೆಂಬರ್ 15ರಂದು ಅಂತಿಮ ನಿರ್ಧಾರ
ಮಂದಿರ ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ರಾಮ ಜನ್ಮಭೂಮಿಯ ದೇಗುಲದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿರುವ ಫೋಟೋಗಳಲ್ಲಿ ದೇಗುಲದೊಳಗಿನ ಸುಂದರ ಕೆತ್ತನೆಯನ್ನು ಕೂಡ ಕಾಣಬಹುದಾಗಿದೆ. ಈ ಹಿಂದೆ ಚಂಪತ್ ರಾಯ್ ಅವರು ರಾಮಲಲ್ಲಾನ ಪ್ರತಿಮೆಯ 90 ಶೇಕಡಾ ಕೆಲಸಗಳು ಮುಗಿದಿವೆ ಎಂದು ತಿಳಿಸಿದ್ದರು.
ರಾಮಜನ್ಮಭೂಮಿ ದೇಗುಲದಲ್ಲಿ 5 ವರ್ಷದ ಮಗುವಿನ ರೂಪದ ಶ್ರೀರಾಮ 4'3 ಅಡಿಯ ಎತ್ತರದ ಪ್ರತಿಮೆಯನ್ನು ದೇಗುಲದ ಮೂರು ಪ್ರದೇಶಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೂರು ಕಡೆಯೂ ಮೂವರು ಬೇರೆ ಬೇರೆ ಶಿಲ್ಪಿಗಳು ಬೇರೆ ಬೇರೆ ಕಲ್ಲಿನಿಂದ ಈ ಪ್ರತಿಮೆಯ ಕೆತ್ತನೆ ಕಾರ್ಯ ಮಾಡುತ್ತಿದ್ದಾರೆ. ಅದರಲ್ಲಿ ಒಂದು ಪ್ರತಿಮೆಯನ್ನು ದೇವರು ಸ್ವೀಕರಿಸುತ್ತಾರೆ. ಈ ಎಲ್ಲಾ ಪ್ರತಿಮೆಗಳು ಶೇಕಡಾ 90 ರಷ್ಟು ಪೂರ್ಣಗೊಂಡಿವೆ. ಅಂತಿಮ ಕೆಲಸ (finishing work) ಮುಗಿಸಲು ಒಂದು ವಾರ ಹಿಡಿಯಲಿದೆ ಎಂದು ಚಂಪತ್ ರಾಯ್ ಹೇಳಿದ್ದಾರೆ ಎಂದು ನ್ಯೂಸ್ ಏಜೆನ್ಸಿ ಎಎನ್ಐ ವರದಿ ಮಾಡಿದೆ.
320 ಕೋಟಿಯ ಶ್ರೀರಾಮ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ರೆಡಿ, ರಾಮಮಂದಿರಕ್ಕೂ ಮುನ್ನ ಉದ್ಘಾಟನೆ!
ಪ್ರತಿಮೆಯನ್ನು ನೆಲ ಮಹಡಿಯಲ್ಲಿರುವ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗುವುದು. ನೆಲಮಹಡಿಯ ಗರ್ಭಗೃಹ ಬಹುತೇಕ ಸಿದ್ಧಗೊಂಡಿದೆ. ಹೀಗಾಗಿ ಪ್ರಾಣ ಪ್ರತಿಷ್ಠಾಪನೆಗೆ ಯಾವುದೇ ತೊಂದರೆ ಇಲ್ಲ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಮುಂದಿನ ವರ್ಷದ ಮುಂದಿನ ತಿಂಗಳು ಅಂದರೆ ಜನವರಿ 22ರಂದು ಉದ್ಘಾಟನೆ ಮಾಡಲಿದ್ದಾರೆ. ಜನವರಿ 16ರಿಂದಲೇ ಪ್ರಾಣ ಪ್ರತಿಷ್ಠಾಪನೆಯ ವೈದಿಕ ವಿಧಿ ವಿಧಾನಗಳು ಆರಂಭವಾಗಲಿವೆ.
श्री राम जय राम जय जय राम!
— Shri Ram Janmbhoomi Teerth Kshetra (@ShriRamTeerth) December 8, 2023
Shri Ram Jai Ram Jai Jai Ram! pic.twitter.com/SZQlSwZl5X