ನವದೆಹಲಿ(ಮೇ.08): ಮೇ 1ರ ಬಳಿಕ ನಿತ್ಯ 2000ಕ್ಕಿಂತ ಹೆಚ್ಚಿನ ಹೊಸ ಪ್ರಕರಣ ದಾಖಲಾಗುವ ಸಂಪ್ರದಾಯ ಗುರುವಾರವೂ ಮುಂದುವರೆದಿದ್ದು, ನಿನ್ನೆ ಒಂದೇ ದಿನ ದೇಶಾದ್ಯಂತ 4037 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. 

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 56391ಕ್ಕೆ ತಲುಪಿದೆ. ಜೊತೆಗೆ ಮತ್ತೆ 109 ಜನರ ಸಾವಿನೊಂದಿಗೆ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 1811ಕ್ಕೆ ತಲುಪಿದೆ. ಇದೆಲ್ಲದರ ನಡುವೆಯೇ ಒಟ್ಟಾರೆ ಗುಣಮುಖರಾದವರ ಸಂಖ್ಯೆ 15571ಕ್ಕೆ ತಲುಪಿದೆ.

ಮಹಾ ಏರಿಕೆ: ದೇಶದಲ್ಲೇ ಅತಿ ಹೆಚ್ಚು ಸೋಂಕಿತರು ಇರುವ ಮಹಾರಾಷ್ಟ್ರದಲ್ಲಿ ಗುರುವಾರ ಒಂದೇ ದಿನ 1216 ಹೊಸ ಕೊರೋನಾ ಪ್ರಕರಣಗಳೊಂದಿಗೆ ಇಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 17,974ಕ್ಕೆ ತಲುಪಿದೆ. ಅಲ್ಲದೆ, ಮುಂಬೈನ ಧಾರಾವಿ ಕೊಳಗೇರಿ ಪ್ರದೇಶದಲ್ಲಿ ಗುರುವಾರ ಮತ್ತೆ 50 ಹೊಸ ಪ್ರಕರಣಗಳೊಂದಿಗೆ ಒಟ್ಟು ಕೊರೋನಾ ಪೀಡಿತರ ಸಂಖ್ಯೆ 783ಕ್ಕೆ ತಲುಪಿದೆ. ಏತನ್ಮಧ್ಯೆ, ಮಹಾರಾಷ್ಟ್ರದಲ್ಲಿ ಕೊರೋನಾಗೆ 43 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಸೋಂಕಿಗೆ ಬಲಿಯಾದವರ ಸಂಖ್ಯೆ 694ಕ್ಕೆ ಮುಟ್ಟಿದೆ. ಇನ್ನು ತಮಿಳುನಾಡಿನಲ್ಲಿ 580, ದೆಹಲಿ 448, ಗುಜರಾತ್‌ನಲ್ಲಿ 388, ಮಧ್ಯಪ್ರದೇಶದಲ್ಲಿ 114 ಹೊಸ ಪ್ರಕರಣಗಳು ದೃಢಪಟ್ಟಿವೆ.

ಭಾರತಕ್ಕೆ ಜೂನ್-ಜುಲೈ ಇನ್ನೂ ಘೋರ, ಎಷ್ಟಕ್ಕೆ ತಲುಪಬಹುದು ಸೋಂಕಿತರ ಸಂಖ್ಯೆ?

72 ಕೈದಿಗಳಿಗೆ ಸೋಂಕು: ಮಹಾರಾಷ್ಟ್ರದ ಅತಿದೊಡ್ಡ ಜೈಲುಗಳ ಪೈಕಿ ಒಂದಾದ ಮುಂಬೈನ ಆರ್ಥರ್‌ ರೋಡ್‌ ಜೈಲಿನಲ್ಲಿ 72 ಕೈದಿಗಳು ಮತ್ತು 7 ಜೈಲಧಿಕಾರಿಗಳಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಜೈಲಿನ ಬಾಣಸಿಗರೊಬ್ಬರಿಂದ ಇವರೆಲ್ಲರಿಗೂ ಸೋಂಕು ತಗುಲಿದ್ದು ಖಚಿತಪಟ್ಟಿದೆ.